ಬುಮ್ರಾ ಬಿರುಗಾಳಿ, 2ನೇ ಇನ್ನಿಂಗ್ಸ್​​ನಲ್ಲಿ ದಕ್ಷಿಣ ಆಫ್ರಿಕಾ 176ಕ್ಕೆ ಆಲೌಟ್; ಭಾರತದ ಗೆಲುವಿಗೆ ಅಲ್ಪಗುರಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಬುಮ್ರಾ ಬಿರುಗಾಳಿ, 2ನೇ ಇನ್ನಿಂಗ್ಸ್​​ನಲ್ಲಿ ದಕ್ಷಿಣ ಆಫ್ರಿಕಾ 176ಕ್ಕೆ ಆಲೌಟ್; ಭಾರತದ ಗೆಲುವಿಗೆ ಅಲ್ಪಗುರಿ

ಬುಮ್ರಾ ಬಿರುಗಾಳಿ, 2ನೇ ಇನ್ನಿಂಗ್ಸ್​​ನಲ್ಲಿ ದಕ್ಷಿಣ ಆಫ್ರಿಕಾ 176ಕ್ಕೆ ಆಲೌಟ್; ಭಾರತದ ಗೆಲುವಿಗೆ ಅಲ್ಪಗುರಿ

India vs South Africa 2nd Test: ಮೊದಲ ಇನ್ನಿಂಗ್ಸ್​​ನಲ್ಲಿ 55 ರನ್​ಗಳಿಗೆ ಕುಸಿದಿದ್ದ ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲೂ 176 ರನ್​ಗಳಿಗೆ ಸರ್ವಪತನಗೊಂಡಿದೆ. ಭಾರತಕ್ಕೆ ಅಲ್ಪಗುರಿ ನೀಡಲಾಗಿದೆ.

ಜಸ್ಪ್ರೀತ್​ ಬುಮ್ರಾ.
ಜಸ್ಪ್ರೀತ್​ ಬುಮ್ರಾ.

ಕೇಪ್​​ಟೌನ್​ನ ನ್ಯೂಲ್ಯಾಂಡ್ಸ್​​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ದಕ್ಷಿಣ ಆಫ್ರಿಕಾ 79 ರನ್​ಗಳ ಅಲ್ಪ ಗುರಿಯನ್ನು ನೀಡಿದೆ. ಇದರೊಂದಿಗೆ ಮೊದಲ ಟೆಸ್ಟ್ ಸೋಲಿನ ಸೇಡಿಗೆ ತೀರಿಸಿಕೊಳ್ಳಲು ರೋಹಿತ್ ಪಡೆ ಸಜ್ಜಾಗಿದೆ. ಅಲ್ಲದೆ, ಐತಿಹಾಸಿಕ ದಾಖಲೆ ಬರೆಯಲೂ ರೆಡಿಯಾಗಿದೆ.

ಭಾರತದ ಜಸ್ಪ್ರೀತ್ ಬುಮ್ರಾ ಖಡಕ್ ಬೌಲಿಂಗ್​ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಸೌತ್ ಆಫ್ರಿಕಾ ಬ್ಯಾಟರ್​​ಗಳು ಎರಡನೇ ಇನ್ನಿಂಗ್ಸ್​​ನಲ್ಲೂ ಕುಸಿತ ಕಂಡರು. ಈ ನಡುವೆಯೂ ಆರಂಭಿಕ ಆಟಗಾರ ಏಡನ್ ಮಾರ್ಕ್ರಮ್ ಶತಕ ಸಿಡಿಸಿ ತಂಡಕ್ಕೆ ನೆರವಾದರು. 2ನೇ ಇನ್ನಿಂಗ್ಸ್​​ನಲ್ಲಿ 176 ರನ್​ಗಳಿಗೆ ಆಲೌಟ್​ ಆಗಿದೆ.

ಏಡನ್ ಮಾರ್ಕ್ರಮ್ ಶತಕ

ಮೊದಲ ಇನ್ನಿಂಗ್ಸ್​ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದ ಆತಿಥೇಯ ತಂಡ, ಎರಡನೇ ಇನ್ನಿಂಗ್ಸ್​​ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸತತ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ನಡುವೆಯೂ ಏಡನ್ ಮಾರ್ಕ್ರಮ್ ಬಿರುಸಿನ ಬ್ಯಾಟಿಂಗ್​ ನಡೆಸಿ ಗಮನ ಸೆಳೆದರು.

98 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ್ದ ಆಫ್ರಿಕಾಗೆ ಮಾರ್ಕ್ರಮ್ ಶತಕ ಸಿಡಿಸಿ ಮುನ್ನಡೆ ತಂದುಕೊಟ್ಟರು. ಆದರೆ ಅದು ದೊಡ್ಡ ಮೊತ್ತ ಮುನ್ನಡೆ ಆಗಿರಲಿಲ್ಲ. ಮಾರ್ಕ್ರಮ್ 103 ಎಸೆತಗಳಲ್ಲಿ 17 ಬೌಂಡರಿ, 2 ಸಿಕ್ಸರ್​ ಸಹಿತ 106 ರನ್ ಗಳಿಸಿದ್ದರು.

ಆದರೆ ಉಳಿದಂತೆ ವಿದಾಯದ ಪಂದ್ಯದಲ್ಲಿ ಡೀನ್ ಎಲ್ಗರ್ 12, ಟೋನಿ ಡಿ ಜೋರ್ಜಿ 1, ಪದಾರ್ಪಣೆಗೈದ ಟ್ರಿಸ್ಟಾನ್ ಸ್ಟಬ್ಸ್ 1, ಡೇವಿಡ್ ಬೆಡಿಂಗ್ಹ್ಯಾಮ್ 11, ಕೈಲ್ ವೆರ್ರೆನ್ನೆ 9, ಮಾರ್ಕೊ ಜಾನ್ಸೆನ್ 11, ಕೇಶವ ಮಹಾರಾಜ್, ಕಗಿಸೊ ರಬಾಡ 2 ರನ್ ಗಳಿಸಿ ನಿರಾಸೆ ಮೂಡಿಸಿದರು.

ಜಸ್ಪ್ರೀತ್ ಬುಮ್ರಾ ಮ್ಯಾಜಿಕ್

ಮೊದಲ ಇನ್ನಿಂಗ್ಸ್​ನಲ್ಲಿ ಸಿರಾಜ್ ಮಿಂಚಿದ್ದರೆ, 2ನೇ ಇನ್ನಿಂಗ್ಸ್​​ನಲ್ಲಿ​ ಬುಮ್ರಾ ಮ್ಯಾಜಿಕ್ ನಡೆಸಿದರು. ಸೌತ್ ಆಫ್ರಿಕಾ ಬ್ಯಾಟರ್​​ಗಳಿಗೆ ಕಾಡಿದರು. ಸ್ಟಬ್ಸ್, ಬೆಡಿಂಗ್ಹ್ಯಾಮ್, ವೆರ್ರೆನ್ನೆ, ಜಾನ್ಸೆನ್, ಮಹಾರಾಜ್, ​ಎನ್​ಗಿಡಿಗೆ ಗೇಟ್​ ಪಾಸ್ ನೀಡಿ 6 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸೌತ್ ಆಫ್ರಿಕಾ, ಸಿರಾಜ್ ದಾಳಿಗೆ ನಡುಗಿತು. ಕೇವಲ 55 ರನ್​ಗಳಿಗೆ ಸರ್ವಪತನ ಕಂಡಿತು. ಸಿರಾಜ್ 6 ವಿಕೆಟ್ ಪಡೆದು ಮಿಂಚಿದರು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಭಾರತ 155 ರನ್​ಗಳಿಗೆ ಆಲೌಟ್​ ಆಗಿ 98 ರನ್​ಗಳ ಮುನ್ನಡೆ ಪಡೆದಿತ್ತು. ಇದೀಗ ಗೆಲುವಿಗೆ 79 ರನ್ ಗುರಿ ಪಡೆದಿದೆ.

Whats_app_banner