ಸೂರ್ಯ ಶತಕ, ಕುಲ್ದೀಪ್​ಗೆ 5 ವಿಕೆಟ್; ದ.ಆಫ್ರಿಕಾ ವಿರುದ್ಧ ಭಾರತಕ್ಕೆ 106 ರನ್​ಗಳ ಗೆಲುವು, ಸರಣಿ ಸಮಬಲ
ಕನ್ನಡ ಸುದ್ದಿ  /  ಕ್ರಿಕೆಟ್  /  ಸೂರ್ಯ ಶತಕ, ಕುಲ್ದೀಪ್​ಗೆ 5 ವಿಕೆಟ್; ದ.ಆಫ್ರಿಕಾ ವಿರುದ್ಧ ಭಾರತಕ್ಕೆ 106 ರನ್​ಗಳ ಗೆಲುವು, ಸರಣಿ ಸಮಬಲ

ಸೂರ್ಯ ಶತಕ, ಕುಲ್ದೀಪ್​ಗೆ 5 ವಿಕೆಟ್; ದ.ಆಫ್ರಿಕಾ ವಿರುದ್ಧ ಭಾರತಕ್ಕೆ 106 ರನ್​ಗಳ ಗೆಲುವು, ಸರಣಿ ಸಮಬಲ

IND vs SA 3rd T20I: ಸೂರ್ಯಕುಮಾರ್ ಅವರ ಅಮೋಘ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ವಾಂಡರರ್ಸ್ ಮೈದಾನದಲ್ಲಿ ಡಿಸೆಂಬರ್ 14ರ ಗುರುವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ 106 ರನ್‌ಗಳ ಜಯದೊಂದಿಗೆ ಭಾರತ ಸರಣಿ ಸಮಬಲಗೊಳಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ ಗೆಲುವು.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ ಗೆಲುವು.

ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (IND vs SA 3rd T20I) ಭರ್ಜರಿ ಗೆಲುವು ದಾಖಲಿಸಿದೆ. 106 ರನ್​ಗಳ ಅಮೋಘ ಜಯದೊಂದಿಗೆ 2ನೇ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಜೋಹಾನ್ಸ್​​ಬರ್ಗ್​ನ ವಾಂಡರರ್ಸ್​ ಮೈದಾನದಲ್ಲಿ ಪಂದ್ಯ ಜರುಗಿತು. ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ ಮತ್ತು ಕುಲ್ದೀಪ್ ಯಾದವ್ 5 ವಿಕೆಟ್​ಗಳ ಗುಚ್ಛದ ನೆರವಿನಿಂದ 3ನೇ ಟಿ20ಯಲ್ಲಿ ಜಯದ ರೂವಾರಿಗಳಾದರು.

ಸರಣಿ ಸೋಲಿನ ಮುಖಭಂಗದಿಂದ ಪಾರು

ದಕ್ಷಿಣ ಆಫ್ರಿಕಾ ಎದುರು ಸಿಕ್ಕ ಬೃಹತ್​ ಅಂತರದ ಗೆಲುವು ಇದಾಗಿದೆ. ಅಲ್ಲದೆ, ಸರಣಿ 1-1ರಲ್ಲಿ ಸಮಬಲಗೊಂಡಿದೆ. ಡರ್ಬನ್​ನಲ್ಲಿ ನಡೆದ ಮೊದಲ ಟಿ20 ಪಂದ್ಯವು ಟಾಸ್ ಕೂಡ ಕಾಣದೆ ಮಳೆಯಿಂದ ರದ್ದು ಆಗಿತ್ತು. 2ನೇ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಡಿ 5 ವಿಕೆಟ್​ಗಳ ಸೋಲಿಗೆ ಶರಣಾಗಿತ್ತು. ಇದೀಗ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಸರಣಿ ಸೋಲಿನ ಮುಖಭಂಗದಿಂದ ಪಾರಾಗಿದೆ.

ಟಾಸ್ ಸೋತು ಭಾರತ ಮೊದಲು ಇನ್ನಿಂಗ್ಸ್​ ಆರಂಭಿಸಿತು. ತನ್ನ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು​ 201 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿತು. ಸೂರ್ಯಕುಮಾರ್ ಯಾದವ್ 100, ಯಶಸ್ವಿ ಜೈಸ್ವಾಲ್ 60 ರನ್ ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಆಫ್ರಿಕಾ 13.5 ಓವರ್​​​​ಗಳಲ್ಲಿ 95 ರನ್​ಗಳಿಸಿ ಸರ್ವಪತನ ಕಂಡಿತು. ಕುಲ್ದೀಪ್ ಯಾದವ್ 2.5 ಓವರ್​​ಗಳಲ್ಲಿ 17 ರನ್ ನೀಡಿ 5 ವಿಕೆಟ್ ಪಡೆದರು.

ಗಿಲ್-ತಿಲಕ್ ನಿರಾಸೆ, ಜೈಸ್ವಾಲ್ ಅಬ್ಬರ

ಆರಂಭಿಕರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಮತ್ತೆ ನಿರಾಸೆ ಮೂಡಿಸಿದರು. 12 ರನ್ ಗಳಿಸಿ ಹೊರ ನಡೆದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ತಿಲಕ್ ವರ್ಮಾ ಗೋಲ್ಡನ್ ಡಕ್ ಆಗಿ ನಿರ್ಗಮಿಸಿದರು. ಆದರೆ ಕಳೆದ ಪಂದ್ಯದಲ್ಲಿ ವೈಫಲ್ವ ಅನುಭವಿಸಿದ್ದ ಮತ್ತೊಬ್ಬ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಬ್ಬರದ ಅರ್ಧಶತಕ ಸಿಡಿಸಿದರು. ನಾಯಕ ಸೂರ್ಯಕುಮಾರ್ ಜೊತೆಗೂಡಿ ಶತಕದ ಜೊತೆಯಾಟವಾಡಿದರು.

ಸೂರ್ಯಕುಮಾರ್ ದಾಖಲೆಯ ಶತಕ

ಜೈಸ್ವಾಲ್ ಮತ್ತು ಸೂರ್ಯ 3ನೇ ವಿಕೆಟ್​ಗೆ 112 ರನ್​ ಪೇರಿಸಿದರು. ಈ ನಡುವೆ ಜೈಸ್ವಾಲ್ 41 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​ ಸಹಿತ 60 ರನ್ ಸಿಡಿಸಿ ಔಟಾದರು. ಆ ಬಳಿಕ ಸೂರ್ಯ ರೌದ್ರಾವತಾರ ನಡೆಸಿದರು. ಮೈದಾನದ ಮೂಲೆಮೂಲೆಗೂ ಚೆಂಡಿನ ದರ್ಶನ ನಡೆಸಿದರು. ಆಫ್ರಿಕಾ ಬೌಲರ್​​ಗಳಿಗೆ ಬೆಂಡೆತ್ತಿದರು. ಪರಿಣಾಮ ಟಿ20 ಕ್ರಿಕೆಟ್​ನಲ್ಲಿ ದಾಖಲೆಯ ನಾಲ್ಕನೇ ಶತಕ ಸಿಡಿಸಿ ಮಿಂಚಿದರು.

201 ರನ್ ಗಳಿಸಿದ ಭಾರತ

56 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್​ ಸಹಿತ 100 ರನ್ ಗಳಿಸಿ ಔಟಾದರು. ಅದಾಗಲೇ ತಂಡದ ಮೊತ್ತ 200ರ ಸಮೀಪಕ್ಕೆ ಬಂದಿತ್ತು. ರಿಂಕು ಸಿಂಗ್ 14, ಜಿತೇಶ್​ ಶರ್ಮಾ 4, ರವೀಂದ್ರ ಜಡೇಜಾ 4 ಕಲೆ ಹಾಕಿದರು. ಅಂತಿಮವಾಗಿ ಭಾರತ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆ ಹಾಕಿತು. ಹರಿಣಗಳ ಪರ ಕೇಶವ್ ಮಹಾರಾಜ್, ವಿಲಿಯಮ್ಸ್ ತಲಾ 2 ವಿಕೆಟ್ ಪಡೆದರು.

ಕುಲ್ದೀಪ್ ಮ್ಯಾಜಿಕ್

202 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಬರ್ತ್​ಡೇ ಬಾಯ್ ಕುಲ್ದೀಪ್ ಯಾದವ್ ಶಾಕ್ ನೀಡಿದರು. ನಾಯಕ ಏಡನ್ ಮಾರ್ಕ್ರಮ್ 25 ರನ್, ಡೇವಿಡ್ ಮಿಲ್ಲರ್​ 35 ರನ್ ಗಳಿಸಿದ್ದೇ ಅವರ ಪರ ಗರಿಷ್ಠ ಸ್ಕೋರ್ ಆಗಿದೆ. ಸ್ಪಿನ್ನರ್ ದಾಳಿಗೆ ವಿಲವಿಲ ಒದ್ದಾಡಿದ ಹರಿಣಗಳು ಪೆವಿಲಿಯನ್ ಪರೇಡ್ ನಡೆಸಿದರು. ಡೊನೊವನ್ ಫೆರೆರಾ 12 ರನ್ ಗಳಿಸಿದರೆ, ಉಳಿದವರು ಒಂದಂಕಿಗೆ ವಿಕೆಟ್ ಒಪ್ಪಿಸಿದರು.

ಕುಲ್ದೀಪ್ ಕೇವಲ 2.5 ಓವರ್​​ಗಳಲ್ಲಿ 17 ರನ್ ಬಿಟ್ಟುಕೊಟ್ಟು 5 ವಿಕೆಟ್ ಉರುಳಿಸಿದರು. ಆ ಮೂಲಕ ಜನ್ಮದಿನದಂದೇ ಬೆಸ್ಟ್ ಬೌಲಿಂಗ್ ಮಾಡಿದ 4ನೇ ಬೌಲರ್​ ಎನಿಸಿಕೊಂಡರು. ರವೀಂದ್ರ ಜಡೇಜಾ 2 ವಿಕೆಟ್, ಅರ್ಷ್​ದೀಪ್, ಮುಕೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ಭಾರತ 106 ರನ್​ಗಳ ಜಯ ಸಾಧಿಸಿತು. ಇದೀಗ ಟಿ20 ಸರಣಿ ಮುಗಿದಿದ್ದು, ಡಿ 17ರಿಂದ ಏಕದಿನ ಸರಣಿ ಪ್ರಾರಂಭವಾಗಲಿದೆ.

Whats_app_banner