ವಿಶ್ವದಾಖಲೆಯೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಗಂಭೀರ್-ಸೂರ್ಯಕುಮಾರ್ ಯುಗ ಆರಂಭ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವದಾಖಲೆಯೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಗಂಭೀರ್-ಸೂರ್ಯಕುಮಾರ್ ಯುಗ ಆರಂಭ

ವಿಶ್ವದಾಖಲೆಯೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಗಂಭೀರ್-ಸೂರ್ಯಕುಮಾರ್ ಯುಗ ಆರಂಭ

ಎರಡನೇ ಟಿ20ಯಲ್ಲಿ ಶ್ರೀಲಂಕಾವನ್ನು ಸೋಲಿಸಿದ ಭಾರತ ಕ್ರಿಕೆಟ್ ತಂಡ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ಟಿ20 ಕ್ರಿಕೆಟ್ ಲೋಕದಲ್ಲಿ ಗೌತಮ್ ಗಂಭೀರ್ ಮತ್ತು ಸೂರ್ಯಕುಮಾರ್ ಯಾದವ್ ಮುಂದಾಳತ್ವದಲ್ಲಿ ಭಾರತದ ಹೊಸ ಯುಗ ಅದ್ಭುತವಾಗಿ ಆರಂಭವಾಗಿದೆ.

ವಿಶ್ವದಾಖಲೆಯೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಗಂಭೀರ್-ಸೂರ್ಯಕುಮಾರ್ ಯುಗ ಆರಂಭ
ವಿಶ್ವದಾಖಲೆಯೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಗಂಭೀರ್-ಸೂರ್ಯಕುಮಾರ್ ಯುಗ ಆರಂಭ (PTI)

ಟಿ20 ಕ್ರಿಕೆಟ್ ಲೋಕದಲ್ಲಿ ಭಾರತದ ಹೊಸ ಯುಗ ಅಮೋಘವಾಗಿ ಆರಂಭವಾಗಿದೆ. ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸೂರ್ಯಕುಮಾರ್ ಯಾದವ್ ಮುಂದಾಳತ್ವದಲ್ಲಿ ಸಿಂಹಳೀಯರ ನಾಡಿಗೆ ಕಾಲಿಟ್ಟ ಟೀಮ್ ಇಂಡಿಯಾ‌, ಮೊದಲ ಎರಡೂ ಟಿ20 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ 43 ರನ್​ಗಳಿಂದ ಗೆದ್ದರೆ, ಭಾನುವಾರ ನಡೆದ ದ್ವಿತೀಯ ಮ್ಯಾಚ್​ನಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 7 ವಿಕೆಟ್​ಗಳ ಜಯ ಸಾಧಿಸಿತು. ಈ ಮೂಲಕ ಪೂರ್ಣಕಾಲಿಕ ಟಿ20 ನಾಯಕನಾಗಿ ಸೂರ್ಯ ಮತ್ತು ಕೋಚ್ ಆಗಿ ಗಂಭೀರ್ ತಮ್ಮ ಮೊದಲ ಸರಣಿಯಲ್ಲೇ ಯಶಸ್ಸು ಸಾಧಿಸಿದ್ದಾರೆ. ಜೊತೆಗೆ ವಿಶ್ವದಾಖಲೆ ಕೂಡ ನಿರ್ಮಾಣವಾಗಿದೆ.

ಎರಡನೇ ಟಿ20ಯಲ್ಲಿ ಶ್ರೀಲಂಕಾವನ್ನು ಸೋಲಿಸಿದ ಭಾರತ ಕ್ರಿಕೆಟ್ ತಂಡ 2-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದೆ. ಸರಣಿಯ ಕೊನೆಯ ಟಿ20 ಪಂದ್ಯವು ಭಾರತಕ್ಕೆ ಕೇವಲ ಔಪಚಾರಿಕ. ಹೀಗಿರುವಾಗ ಭಾರತವು ಟಿ20ಯಲ್ಲಿ 77ನೇ ದ್ವಿಪಕ್ಷೀಯ ಸರಣಿಯನ್ನು ಗೆದ್ದುಕೊಂಡ ಸಾಧನೆ ಮಾಡಿದೆ. ಇದು ಇಡೀ ವಿಶ್ವದ ಯಾವುದೇ ತಂಡಕ್ಕಿಂತ ಅತ್ಯಧಿಕವಾಗಿದೆ. ಈವರೆಗೆ ಇತರೆ ಯಾವುದೇ ತಂಡ ಈ ಸಾಧನೆ ಮಾಡಿಲ್ಲ.

ಇದರ ಜೊತೆಗೆ ಟಿ20ಯಲ್ಲಿ ಭಾರತ ತಂಡ ಶ್ರೀಲಂಕಾವನ್ನು 21ನೇ ಬಾರಿ ಸೋಲಿಸಿದೆ. ಇದು ಟಿ20 ಮಾದರಿಯಲ್ಲಿ ಒಂದು ತಂಡದ ವಿರುದ್ಧ ಭಾರತ ಸಾಧಿಸಿದ ಗರಿಷ್ಠ ಗೆಲುವು. ಇದಕ್ಕೂ ಮೊದಲು ಟಿ20ಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡವನ್ನು ತಲಾ 20 ಬಾರಿ ಸೋಲಿಸಿತ್ತು.

ಈ ಮೂಲಕ ನೂತನ ದಾಖಲೆಯೊಂದಿಗೆ ಗಂಭೀರ್-ಸೂರ್ಯ ಯುಗ ಭಾರತ ಕ್ರಿಕೆಟ್ ತಂಡದಲ್ಲಿ ಆರಂಭವಾಗಿದೆ. ಅಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಸ್ಥಾನ ಯಾರು ತುಂಬುತ್ತಾರೆ ಎಂಬ ಗೊಂದಲ್ಲಿದ್ದ ಮ್ಯಾನೇಜ್ಮೆಂಟ್​ಗೂ ಒಂದು ಲೆಕ್ಕದಲ್ಲಿ ಉತ್ತರ ಸಿಕ್ಕಂತಾಗಿದೆ. ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ರವಿ ಬಿಷ್ಟೋಯಿ, ರಿಂಕು ಸಿಂಗ್, ಶಿವಂ ದುಬೆಯಂತಹ ಯುವ ಆಟಗಾರರನ್ನು ಬೆಳೆಸುವ ಪ್ರಯತ್ನ ಶುರುವಾಗಿದೆ. ಸದ್ಯ ಲಂಕಾ ವಿರುದ್ಧದ ಕೊನೆಯ ಟಿ20 ಬಾಕಿ ಉಳಿದಿದ್ದು, ಇದಕ್ಕೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡುವ ಅಂದಾಜಿದೆ. ಬೆಂಚ್ ಕಾದಿದ್ದ ಆಟಗಾರರನ್ನು ಕಣಕ್ಕಿಳಿಸಲು ಗಂಭೀರ್-ಸೂರ್ಯ ಯೋಜನೆ ರೂಪಿಸಬಹುದು.

ಪಂದ್ಯದ ಫಲಿತಾಂಶ ಏನಾಯ್ತು?

ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಕುಸಾಲ್ ಪೆರೆರಾ ಗರಿಷ್ಠ 53 ರನ್ ಗಳಿಸಿದರು. ಭಾರತದ ಪರ ರವಿ ಬಿಷ್ಣೋಯ್ 3 ವಿಕೆಟ್ ಪಡೆದರು. ಇದಲ್ಲದೆ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ಯಶಸ್ಸು ಪಡೆದರು.

ಆದರೆ ಭಾರತದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಮಳೆ ಸುರಿಯಿತು. ಇಂತಹ ಪರಿಸ್ಥಿತಿಯಲ್ಲಿ 162 ರನ್‌ಗಳ ಗುರಿಯನ್ನು ಡಿಎಲ್‌ಎಸ್‌ನಿಂದಾಗಿ 8 ಓವರ್‌ಗಳಲ್ಲಿ 78 ರನ್‌ಗಳಿಗೆ ಇಳಿಸಲಾಯಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 6.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಜೈಸ್ವಾಲ್ 30, ಸೂರ್ಯಕುಮಾರ್ ಯಾದವ್ 26 ಮತ್ತು ಹಾರ್ದಿಕ್ ಅಜೇಯ 22 ರನ್ ಗಳಿಸಿದರು.

Whats_app_banner