ಇಂಗ್ಲೆಂಡ್ ಸರಣಿಗೂ ಮುನ್ನ ಭಾರತ ತಂಡಕ್ಕೆ 3 ಅಭ್ಯಾಸ ಪಂದ್ಯ, ಈ ಆಟಗಾರರು ಆಡಬೇಕೆಂದು ಬಿಸಿಸಿಐ ಸೂಚನೆ; ವರದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಸರಣಿಗೂ ಮುನ್ನ ಭಾರತ ತಂಡಕ್ಕೆ 3 ಅಭ್ಯಾಸ ಪಂದ್ಯ, ಈ ಆಟಗಾರರು ಆಡಬೇಕೆಂದು ಬಿಸಿಸಿಐ ಸೂಚನೆ; ವರದಿ

ಇಂಗ್ಲೆಂಡ್ ಸರಣಿಗೂ ಮುನ್ನ ಭಾರತ ತಂಡಕ್ಕೆ 3 ಅಭ್ಯಾಸ ಪಂದ್ಯ, ಈ ಆಟಗಾರರು ಆಡಬೇಕೆಂದು ಬಿಸಿಸಿಐ ಸೂಚನೆ; ವರದಿ

Indian Cricket Team: ಜೂನ್ 20ರಿಂದ ಶುರುವಾಗುವ ಟೆಸ್ಟ್ ಸರಣಿಗೂ ಮುನ್ನ ಭಾರತ 'ಎ' ತಂಡವು ಇಂಗ್ಲೆಂಡ್ ಲಯನ್ಸ್ ವಿರುದ್ಧ ನಾಲ್ಕು ದಿನಗಳ ಮೂರು ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ ಎಂದು ವರದಿ ತಿಳಿಸಿದೆ.

ಇಂಗ್ಲೆಂಡ್ ಸರಣಿಗೂ ಮುನ್ನ ಭಾರತ ತಂಡಕ್ಕೆ 3 ಅಭ್ಯಾಸ ಪಂದ್ಯ; ಈ ಆಟಗಾರರು ಆಡಬೇಕೆಂದು ಸೂಚಿಸಿದ ಬಿಸಿಸಿಐ?
ಇಂಗ್ಲೆಂಡ್ ಸರಣಿಗೂ ಮುನ್ನ ಭಾರತ ತಂಡಕ್ಕೆ 3 ಅಭ್ಯಾಸ ಪಂದ್ಯ; ಈ ಆಟಗಾರರು ಆಡಬೇಕೆಂದು ಸೂಚಿಸಿದ ಬಿಸಿಸಿಐ? (PTI)

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್​ 20ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಮೂರು ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ. ಮೇ 25ರಂದು ನಡೆಯುವ ಐಪಿಎಲ್ ಫೈನಲ್ ಪಂದ್ಯದ ಬಳಿಕ ಜೂನ್ 20ರೊಳಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ 4 ದಿನಗಳ ಮೂರು ಅಭ್ಯಾಸ ಪಂದ್ಯಗಳನ್ನು ಬಿಸಿಸಿಐ ಯೋಜಿಸಿದೆ. 2024ರಲ್ಲಿ ಅತ್ಯಂತ ನಿರಾಶೆ ಅನುಭವಿಸಿದ ನಂತರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದ ಬಿಸಿಸಿಐ, ಇದೀಗ ಆಟಗಾರರು ಫಾರ್ಮ್​ ಮರಳಿ ಪಡೆಯಲು ಈ ಅಭ್ಯಾಸ ಪಂದ್ಯಗಳು ನೆರವಾಗಲಿವೆ. ಟೆಸ್ಟ್ ತಂಡದ ನಿಯಮಿತ ಆಟಗಾರರು ಭಾಗವಹಿಸಲಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ತಿಳಿಸಿದೆ.

ಪ್ರಸ್ತುತ ಟೀಮ್ ಇಂಡಿಯಾ ಬ್ಯಾಟಿಂಗ್ ದುರ್ಬಲಗೊಂಡಿದೆ. ಸ್ಟಾರ್ ಆಟಗಾರರೇ ರನ್ ಗಳಿಸಲು ಪರದಾಡಿದ್ದು ಅಚ್ಚರಿ ಮೂಡಿಸಿತು. ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ವೈಟ್​ವಾಶ್ ಅನುಭವಿಸಿ ದಶಕದಿಂದ ಸೋಲೇ ಕಾರಣದ ಭಾರತದ ಪ್ರಾಬಲ್ಯವನ್ನು ಕೊನೆಗೊಳಿಸಿತು. ಆಸ್ಟ್ರೇಲಿಯಾದಲ್ಲಿ 3-1 ಅಂತರದಿಂದ ಸೋಲನ್ನು ಅನುಭವಿಸಿತು, 10 ವರ್ಷಗಳಲ್ಲಿ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಕಳೆದುಕೊಂಡಿತು. ಡಬ್ಲ್ಯುಟಿಸಿ ಮೊದಲ ಎರಡು ಆವೃತ್ತಿಗಳಲ್ಲಿ ಫೈನಲ್​ಗೇರಿದ್ದ ಟೀಮ್ ಇಂಡಿಯಾ, 3ನೇ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿಗೆ ಏರುವ ಸುವರ್ಣಾವಕಾಶವನ್ನು ಕೈಚೆಲ್ಲಿತು. ಮುಂದಿನ ಟೆಸ್ಟ್ ಸರಣಿಗೆ ಹೆಚ್ಚಿನ ಸಮಯ ಲಭ್ಯವಿರುವುದರಿಂದ, ಆಟಗಾರರ ಕೌಶಲ್ಯ ಉತ್ತಮಗೊಳಿಸಲು ಅಭ್ಯಾಸ ಪಂದ್ಯಗಳನ್ನು ಯೋಜಿಸಲಾಗುತ್ತಿದೆ. ಹಿರಿಯ ಆಟಗಾರರು ಸಹ ಅಭ್ಯಾಸ ಪಂದ್ಯ ಆಡಬೇಕು ಎಂದು ಬಿಸಿಸಿಐ ಸೂಚಿಸಿದೆ ಎಂದು ವರದಿ ತಿಳಿಸಿದೆ.

ಸಿಡ್ನಿ ಟೆಸ್ಟ್​ ಬಳಿಕ ತಂಡದಿಂದ ಹೊರಗುಳಿದ ನಾಯಕ ರೋಹಿತ್​ ಶರ್ಮಾ ಅವರ ಭವಿಷ್ಯದ ಕುರಿತು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇಂಗ್ಲೆಂಡ್​ ಸರಣಿಗೂ ಮುನ್ನ ಅವರು ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಹೊಂದಬಹುದು ಎಂದು ವರದಿಯಾಗಿದೆ. ಮತ್ತೊಂದೆಡೆ ರೋಹಿತ್​, ನಾನು ಈಗಲೇ ನಿವೃತ್ತಿ ಹೊಂದುವುದಿಲ್ಲ ಎಂದು ಸ್ಪಷ್ಟನೆ ನೀಡಿದರೂ ದೀರ್ಘ ಸ್ವರೂಪಕ್ಕೆ ಅವರ ಸಿದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2020 ರಿಂದ 30.72 ಸರಾಸರಿ ಮತ್ತು 3 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಕೊಹ್ಲಿ ಪದೇ ಪದೇ ಒಂದೇ ರೀತಿ ಔಟ್ ಆಗುವ ಮೂಲಕ ಲಯಕ್ಕೆ ಮರಳಲು ಹೆಣಗಾಡಿದರು. ಇವರ ಕಳಪೆ ಪ್ರದರ್ಶನ ಕೂಡ ಭಾರತ ತಂಡದ ಸೋಲಿಗೆ ಕಾರಣವಾಯಿತು.

ಟೆಸ್ಟ್​ ಕ್ರಿಕೆಟ್​ ಮೇಲೆ ಹಿಡಿತ ಸಾಧಿಸಲು ಅಭ್ಯಾಸ ಪಂದ್ಯ

ಹೀಗಾಗಿ, ತಂಡದಲ್ಲಿ ಶಿಸ್ತು ಮತ್ತು ಒಗ್ಗಟ್ಟು ತರಲು ಮತ್ತು ಆಟಗಾರರು ಮ್ಯಾಚ್​​ ಫಿಟ್​ ಆಗಲೆಂದು ಇಂಗ್ಲೆಂಡ್ ಸರಣಿಗೂ ಮುನ್ನ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ. ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ತಿಳಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಐಪಿಎಲ್ ಇರುವ ಕಾರಣ ಟಿ20 ಸೆಟಪ್​ನಿಂದ ಹೊರ ಬರಲು ಮತ್ತು ಟೆಸ್ಟ್​ ಕ್ರಿಕೆಟ್​ ಮೇಲೆ ಹಿಡಿತ ಸಾಧಿಸಲು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿದೆ ಎಂದು ವರದಿ ತಿಳಿಸಿದೆ. 2023-24ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ ತಂಡವು ಲಯನ್ಸ್ ತಂಡವನ್ನು ಎದುರಿಸಿತ್ತು.

ಬಿಸಿಸಿಐ ಅಧಿಕಾರಿ ಹೇಳಿದ್ದೇನು?

ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಿದ್ದಾಗ ಭಾರತ ಎ ಪರ ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ಇದ್ದರು. ಇವರೆಲ್ಲರೂ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿ, ನಾವೀಗ ಹೆಚ್ಚು ರೆಡ್-ಬಾಲ್ ಪಂದ್ಯಗಳನ್ನು ಹೊಂದಿಲ್ಲ. ಏಕೆಂದರೆ ಐಪಿಎಲ್ ನಂತರವೇ ಇಂಗ್ಲೆಂಡ್ ವಿರುದ್ಧದ ಸರಣಿ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಭಾರತದ ಬ್ಯಾಟರ್​ಗಳಿಗೆ ಕಷ್ಟಕರವಾದ ಸ್ಥಳವಾಗಿರುವುದರಿಂದ ಸರಿಯಾದ ತಯಾರಿ ಇಲ್ಲದೆ ತಂಡವನ್ನು ಯಾವುದೇ ಪ್ರಮುಖ ಸರಣಿಗೆ ಕಳುಹಿಸುವುದು ಜಾಣತನವಲ್ಲ ಎಂದು ಹೇಳಿದ್ದಾರೆ.

Whats_app_banner