112 ವರ್ಷಗಳ ನಂತರ ಚರಿತ್ರೆ ಸೃಷ್ಟಿಸಿದ ಭಾರತ; ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತರ ಈ ಸಾಧನೆ ಮಾಡಿದ ವಿಶ್ವದ 3ನೇ ತಂಡ
Team India Records : ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಸರಣಿಯ ಮೊದಲ ಪಂದ್ಯ ಸೋತರೂ ಉಳಿದ ನಾಲ್ಕೂ ಪಂದ್ಯಗಳನ್ನು ಜಯಿಸಿ ಸರಣಿ ವಶಪಡಿಸಿಕೊಂಡು 112 ವರ್ಷಗಳ ನಂತರ ದಾಖಲೆ ಬರೆದಿದೆ.
ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಮತ್ತು 64 ರನ್‌ಗಳಿಂದ ಸೋಲಿಸಿದ ಭಾರತ ಐದು ಪಂದ್ಯಗಳ ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿದೆ. ಈ ಸೀರೀಸ್ನ ಮೊದಲ ಟೆಸ್ಟ್‌ನಲ್ಲಿ 28 ರನ್‌ಗಳಿಂದ ಸೋತಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ಉಳಿದ 4 ಪಂದ್ಯಗಳನ್ನೂ ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ. ಗುರುವಾರ ಶುರುವಾದ ಟೆಸ್ಟ್ ಕೇವಲ ಮೂರೇ ದಿನಕ್ಕೆ ಮುಗಿಯಿತು.
ಬೃಹತ್ ದಾಖಲೆ ನಿರ್ಮಿಸಿದ ಭಾರತ
ಈ ಜಯದೊಂದಿಗೆ ಭಾರತ ಬೃಹತ್ ದಾಖಲೆಯೊಂದನ್ನು ನಿರ್ಮಿಸಿದೆ. 112 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಈ ದಾಖಲೆ ಬರೆದಿದೆ. 112 ವರ್ಷಗಳಲ್ಲಿ ಸರಣಿಯ ಮೊದಲ ಟೆಸ್ಟ್ ಸೋಲಿನ ಬಳಿಕವೂ 4-1 ರಿಂದ ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ದಾಖಲೆಗೆ ಒಳಗಾಗಿದೆ. ಐದು ಪಂದ್ಯಗಳ ಟೆಸ್ಟ್ ಸಿರೀಸ್ನ ಮೊದಲ ಪಂದ್ಯದಲ್ಲಿ ಸೋತ ನಂತರ ಸರಣಿಯನ್ನು 4-1ರಿಂದ ಜಯಿಸಿದ್ದು ಎರಡು ತಂಡಗಳು ಮಾತ್ರ (ಈ ಸರಣಿಗೂ ಮುನ್ನ).
ಭಾರತಕ್ಕೂ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಈ ದಾಖಲೆ ನಿರ್ಮಿಸಿದ್ದವು. 1897/98 ಮತ್ತು 1901/02ರಲ್ಲಿ ಆಂಗ್ಲರ ವಿರುದ್ಧ ಆಸೀಸ್ ಈ ಸಾಧನೆ ಮಾಡಿತ್ತು. 1912ರಲ್ಲಿ ಕಾಂಗರೂ ಪಡೆ ವಿರುದ್ಧ ಬ್ರಿಟಿಷರು ಈ ದಾಖಲೆ ಬರೆದಿದ್ದರು. ಅಂದಿನಿಂದ ಈವರೆಗೂ ಯಾರೂ ಸಾಧನೆ ಮಾಡಿರಲಿಲ್ಲ. ಇದೀಗ ಭಾರತ 112 ವರ್ಷಗಳ ನಂತರ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್ ವಿವರ
ಆರ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಐದನೇ ಟೆಸ್ಟ್‌ನಲ್ಲಿ ಭಾರತಕ್ಕೆ ಸ್ಟಾರ್ ಆಗಿದ್ದು, ಇಬ್ಬರು ತಲಾ ಒಂದೊಂದು ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಅಶ್ವಿನ್ ಅಬ್ಬರಿಸಿದ ಪರಿಣಾಮ ಇಂಗ್ಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಆಲೌಟ್ ಆಯಿತು. ಕುಲ್ದೀಪ್ ಸ್ಪಿನ್ ಮೋಡಿಗೆ ಆಂಗ್ಲರು ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಪತನ ಕಂಡಿತ್ತು. ಚೈನಾಮೆನ್ ಸ್ಪಿನ್ನರ್ 5 ವಿಕೆಟ್ ಪಡೆದಿದ್ದರು.
ರೋಹಿತ್ ಶರ್ಮಾ-ಶುಭ್ಮನ್ ಗಿಲ್ ಅವರ ಶತಕದ ನೆರವಿನಿಂದ 477 ರನ್ ಗಳಿಸಿ ಭಾರತ ತಂಡ 259 ರನ್ಗಳ ಬೃಹತ್ ಮುನ್ನಡೆಗೆ ಕಾರಣರಾದರು. ಇಂಗ್ಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಏಕಾಂಗಿ ಹೋರಾಟ ನಡೆಸಿದರು. ಅವರು 84 ರನ್ಗಳಿಸಿ ಕೊನೆಯವರೆಗೂ ಕ್ರೀಸ್ನಲ್ಲಿದ್ದರು. ಕೊನೆಯಲ್ಲಿ ರೂಟ್ ಔಟಾಗುತ್ತಿದ್ದಂತೆ ಇಂಗ್ಲೆಂಡ್ ಇನಿಂಗ್ಸ್ ಮುಕ್ತಾಯಗೊಂಡಿತು. ಅಶ್ವಿನ್ ಈ ಸರಣಿಯಲ್ಲಿ 9 ವಿಕೆಟ್ ಕಿತ್ತು ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯಗೊಳಿಸಿದರು.
ನಾಯಕನಾಗಿ ರೋಹಿತ್ ದಾಖಲೆ
ಐದನೇ ಟೆಸ್ಟ್ ಪಂದ್ಯವನ್ನು ಜಯಿಸಿದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯೊಂದನ್ನು ಹೆಸರಿಗೆ ಬರೆದುಕೊಂಡರು. ಭಾರತದ ಪರ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ 5ನೇ ಕ್ಯಾಪ್ಟನ್ ಎಂಬ ದಾಖಲೆಗೆ ಒಳಗಾದರು. ರೋಹಿತ್ ಈವರೆಗೂ 16 ಟೆಸ್ಟ್ಗಳನ್ನು ಮುನ್ನಡೆಸಿದ್ದು, 10ರಲ್ಲಿ ಜಯದ ನಗೆ ಬೀರಿದ್ದಾರೆ. ಆ ಮೂಲಕ ಟಾಪ್-5 ಕ್ಯಾಪ್ಟನ್ಗಳ ಪಟ್ಟಿಗೆ ಸೇರ್ಪಡೆಗೊಂಡರು. ವಿರಾಟ್ ಕೊಹ್ಲಿ, ಎಂಎಸ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ ಮತ್ತು ಮೊಹಮ್ಮದ್ ಅಜರುದ್ದೀನ್ 3 ಮತ್ತು 4ನೇ ಸ್ಥಾನದಲ್ಲಿದ್ದು, ರೋಹಿತ್ 5ನೇ ಸ್ಥಾನದಲ್ಲಿದ್ದಾರೆ.