ಭಾರತ vs ಪಾಕಿಸ್ತಾನ ನಡುವೆ ಯಾವ ತಂಡ ಉತ್ತಮ ಎಂಬುದನ್ನು ಫಲಿತಾಂಶವೇ ಹೇಳುತ್ತೆ -ಪ್ರಧಾನಿ ನರೇಂದ್ರ ಮೋದಿ
ನಾನು ಕ್ರೀಡಾ ಪರಿಣಿತನಲ್ಲ. ಅದರ ಬಗ್ಗೆ ತಜ್ಞರು ಮಾತ್ರ ನಿಮಗೆ ಹೇಳಬಲ್ಲರು. ಕೆಲವೇ ದಿನಗಳ ಹಿಂದಷ್ಟೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದು ಪಂದ್ಯವನ್ನು ಆಡಿದವು. ಆ ಫಲಿತಾಂಶವೇ ಯಾವ ತಂಡ ಉತ್ತಮ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮೈದಾನಕ್ಕೆ ಬಂದು ವೀಕ್ಷಿಸಿದ್ದರು. ಭಾರತ ಸ್ಪರ್ಧಿಸುವ ಪ್ರಮುಖ ಕ್ರೀಡೆಗಳ ಬಗ್ಗೆಯೂ ತಿಳಿದುಕೊಂಡು ಅವರು ಟ್ವೀಟ್ ಮಾಡುವುದನ್ನು ನೋಡಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಕೂಡಾ ಅನುಸರಿಸುವ ಮೋದಿ, ಇದೀಗ ಉಭಯ ರಾಷ್ಟ್ರಗಳ ನಡುವೆ ಯಾವ ದೇಶ ಕ್ರಿಕೆಟ್‌ನಲ್ಲಿ ಬಲಿಷ್ಠ ಎಂಬುದನ್ನು ಹೇಳಿಕೊಂಡಿದ್ದಾರೆ. ಭಾರತ ತಂಡವು ಕಳೆದ ಕೆಲವು ಐಸಿಸಿ ಟೂರ್ನಿಯ ಪಂದ್ಯಗಳಲ್ಲಿ ಪಾಕ್ ವಿರುದ್ಧ ಗೆದ್ದು ಮೇಲುಗೈ ಸಾಧಿಸಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆಯೇ ಚಾಂಪಿಯನ್ಸ್ ಟ್ರೋಫಿ. ಈ ಕುರಿತು ಭಾನುವಾರ (ಮಾ.16) ಅಮೆರಿಕದ ಜನಪ್ರಿಯ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಮುಕ್ತ ಸಂಭಾಷಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ತಮ್ಮನ್ನು ತಾವು ಕ್ರಿಕೆಟ್ ತಜ್ಞ ಎಂದು ಹೇಳಿಕೊಳ್ಳುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿನ ಫಲಿತಾಂಶಗಳನ್ನು ನೋಡಿದರೆ ಭಾರತವು ಪಾಕಿಸ್ತಾನಕ್ಕಿಂತ ಉತ್ತಮ ತಂಡ ಎಂದು ತೋರಿಸಿದೆ. ಜನರನ್ನು ಒಟ್ಟುಗೂಡಿಸುವಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದು ಎಂದು ಅವರು ಒತ್ತಿ ಹೇಳಿದರು.
“ನಾನು ಕ್ರೀಡಾ ಪರಿಣಿತನಲ್ಲ. ಈ ಆಟದ ತಂತ್ರ ಕೂಡಾ ನನಗೆ ತಿಳಿದಿಲ್ಲ. ಅದರ ಬಗ್ಗೆ ತಜ್ಞರು ಮಾತ್ರ ನಿಮಗೆ ಹೇಳಬಲ್ಲರು. ಆದರೆ ಕೆಲವೇ ದಿನಗಳ ಹಿಂದಷ್ಟೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದು ಪಂದ್ಯವನ್ನು ಆಡಿದವು. ಆ ಫಲಿತಾಂಶವೇ ಯಾವ ತಂಡ ಉತ್ತಮ ಎಂಬುದನ್ನು ಬಹಿರಂಗಪಡಿಸುತ್ತದೆ. ನನಗೆ ಇಷ್ಟೇ ಗೊತ್ತು” ಎಂದು ಮೋದಿ ಹೇಳಿದ್ದಾರೆ.
ಗುಂಪು ಹಂತದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತ, ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಎತ್ತಿಹಿಡಿದು ಸಂಭ್ರಮಿಸಿತು. ಪಂದ್ಯಾವಳಿಯುದ್ದಕ್ಕೂ ತನ್ನ ಅಜೇಯ ಓಟ ಮುಂದುವರೆಸಿತು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿ ತನ್ನ ಪ್ರಾಬಲ್ಯ ಮತ್ತೆ ಸಾಬೀತುಪಡಿಸಿತು.
ಮಾನವ ವಿಕಾಸದಲ್ಲಿ ಕ್ರೀಡೆ ಪಾತ್ರ ದೊಡ್ಡದು
“ಕ್ರೀಡೆಗೆ ಇಡೀ ಜಗತ್ತನ್ನೇ ಚೈತನ್ಯಗೊಳಿಸುವ ಶಕ್ತಿ ಇದೆ ಎಂದು ನಾನು ಭಾವಿಸುತ್ತೇನೆ. ಕ್ರೀಡಾ ಮನೋಭಾವವು ವಿವಿಧ ರಾಷ್ಟ್ರಗಳ ಜನರನ್ನು ಒಟ್ಟುಗೂಡಿಸುತ್ತದೆ. ಅದಕ್ಕಾಗಿಯೇ ಕ್ರೀಡೆಗಳನ್ನು ಅಪಖ್ಯಾತಿಗೊಳಗಾಗುವುದನ್ನು ನಾನು ಎಂದಿಗೂ ಇಷ್ಟಪಡುವುದಿಲ್ಲ. ಕ್ರೀಡೆಗಳು ಮಾನವ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ. ಅವು ಕೇವಲ ಆಟ ಮಾತ್ರವಲ್ಲ, ಜನರನ್ನು ಆಳವಾದ ಮಟ್ಟದಲ್ಲಿ ಸಂಪರ್ಕಿಸುತ್ತವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಫೇವರೆಟ್ ಫುಟ್ಬಾಲ್ ಆಟಗಾರ ಯಾರು?
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಮೋದಿ ಅವರಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮೋದಿ, 1980ರ ದಶಕದಲ್ಲಿ ಡಿಯಾಗೋ ಮರಡೋನಾ ಅವರನ್ನು ಫುಟ್ಬಾಲ್ ಹೀರೋ ಎಂದು ಪ್ರಶಂಸಿಸಲಾದರೂ, ಆಧುನಿಕ ಜಗತ್ತಿನಲ್ಲಿ ಲಿಯೋನೆಲ್ ಮೆಸ್ಸಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ ಎಂದು ನಮೋ ಹೇಳಿದರು.