ಅಭಿಷೇಕ್ ಶರ್ಮಾ ಸುನಾಮಿ ಬ್ಯಾಟಿಂಗ್; ಮೊದಲ ಟಿ20ಐನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
England vs india 1st T20I Result: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. 7 ವಿಕೆಟ್ಗಳ ಅಮೋಘ ಜಯದೊಂದಿಗೆ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಅಭಿಷೇಕ್ ಶರ್ಮಾ ಅವರ ಸುನಾಮಿ ಬ್ಯಾಟಿಂಗ್ (79) ಮತ್ತು ಬೌಲರ್ಗಳ ಅದ್ಭುತ ಪ್ರದರ್ಶನದ ಹಿನ್ನೆಲೆ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 7 ವಿಕೆಟ್ಗಳ ಅಂತರದಿಂದ ಭಾರತೀಯರು ಬ್ರಿಟಿಷರನ್ನು ಬೇಟೆಯಾಡಿದ್ದಾರೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ 20 ಓವರ್ಗಳಲ್ಲಿ 132 ರನ್ಗಳಿಗೆ ಆಲೌಟ್ ಆಗಿದ್ದರೆ, ಟೀಮ್ ಇಂಡಿಯಾ 12.5 ಓವರ್ಗಳಲ್ಲೇ ಗುರಿ ಮುಟ್ಟಿತು.
ಸಾಧಾರಣ ಗುರಿ ಬೆನ್ನಟ್ಟಿದ ಭಾರತ, ಭರ್ಜರಿ ಆರಂಭ ಪಡೆಯಿತು. ಫಾರ್ಮ್ನಲ್ಲಿದ್ದ ಸಂಜು ಸ್ಯಾಮ್ಸನ್ ಬಿರುಸಿನ ಆರಂಭ ಒದಗಿಸಿ 20 ಎಸೆತಗಳಲ್ಲಿ (4 ಬೌಂಡರಿ, 1 ಸಿಕ್ಸರ್) 26 ರನ್ ಚಚ್ಚಿ ಔಟಾದರು. ಮೊದಲ ವಿಕೆಟ್ಗೆ 41 ರನ್ ಹರಿದು ಬಂತು. ಬಳಿಕ ಕಣಕ್ಕಿಳಿದ ನಾಯಕ ಸೂರ್ಯಕುಮಾರ್ ಯಾದವ್ ಡಕೌಟ್ ಆಗಿ ನಿರ್ಗಮಿಸಿದರು. ಇಬ್ಬರು ಸಹ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಔಟಾದರು. ಆದರೆ ಲಯಕ್ಕೆ ಮರಳಿದ ಅಭಿಷೇಕ್ ಶರ್ಮಾ ಇಂಗ್ಲೆಂಡ್ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದರು. ಮೈದಾನದ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿದ ಅಭಿಷೇಕ್, 20 ಎಸೆತಗಳಲ್ಲೇ 50 ರನ್ ಪೂರೈಸಿದರು. ಈ ವೇಳೆ ಅವರ ಆಟದಲ್ಲಿ 3 ಬೌಂಡರಿ, 6 ಸಿಕ್ಸರ್ಗಳಿದ್ದವು.
ಅಭಿಷೇಕ್ ಶರ್ಮಾಗೆ 4ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ತಿಲಕ್ ವರ್ಮಾ ಅದ್ಭುತ ಜೊತೆಯಾಟ ಒದಗಿಸಿದರು. ಇಬ್ಬರು ಮೂರನೇ ವಿಕೆಟ್ಗೆ 42 ಎಸೆತಗಳಲ್ಲಿ 84 ರನ್ಗಳ ಜೊತೆಯಾಟವಾಡಿದರು. ಗೆಲುವಿಗೆ 8 ರನ್ ಬೇಕಿದ್ದಾಗ ಅಭಿಷೇಕ್ ವಿಕೆಟ್ ಒಪ್ಪಿಸಿದರು. ಅವರು 34 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್ ಸಹಿತ 79 ರನ್ ಸಿಡಿಸಿ ಆದಿಲ್ ರಶೀದ್ ಬೌಲಿಂಗ್ನಲ್ಲಿ ಔಟಾದರು. ಕೊನೆಯಲ್ಲಿನ ತಿಲಕ್ ವರ್ಮಾ (19) ಮತ್ತು ಹಾರ್ದಿಕ್ ಪಾಂಡ್ಯ (3) ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಇನ್ನೂ 43 ಎಸೆತಗಳನ್ನು ಬಾಕಿ ಉಳಿಸಿದರು.
ಭಾರತೀಯ ಬೌಲರ್ಗಳ ದಾಳಿಗೆ ಇಂಗ್ಲೆಂಡ್ ತತ್ತರ
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಭಾರತೀಯ ಬೌಲರ್ಗಳ ಎದುರು ತತ್ತರಿಸಿತು. ಅರ್ಷದೀಪ್ ಸಿಂಗ್ ಎಸೆದ ಆರಂಭಿಕ ಓವರ್ನಲ್ಲೇ ಫಿಲ್ ಸಾಲ್ಟ್ (0) ಡಕೌಟ್ ಆಗಿ ನಿರಾಸೆ ಮೂಡಿಸಿದರು. ಬಳಿಕ ಬೆನ್ ಡಕೆಟ್ ಸಹ ಅರ್ಷದೀಪ್ ಬೌಲಿಂಗ್ನಲ್ಲೇ ಔಟಾಗಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಆದರೆ ಈ ವೇಳೆ ನಾಯಕ ಜೋಸ್ ಬಟ್ಲರ್ ಏಕಾಂಗಿ ಹೋರಾಟ ನಡೆಸಿದರು. ಆದರೆ ಯಾರೂ ಅವರಿಗೆ ಸಾಥ್ ಕೊಡಲಿಲ್ಲ. ಹ್ಯಾರಿ ಬ್ರೂಕ್ (17) ಮತ್ತು ಲಿಯಾಮ್ ಲಿವಿಂಗ್ಸ್ಟೋನ್ (0) ಅವರು ವರುಣ್ ಚಕ್ರವರ್ತಿ ಸ್ಪಿನ್ ಬೌಲಿಂಗ್ನಲ್ಲಿ ಪೆವಿಲಿಯನ್ ಸೇರಿದರು.
ಜೇಕಬ್ ಬೆಥಲ್ (7), ಜೋಫ್ರಾ ಆರ್ಚರ್ (12) ಅವರು ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಹೊರನಡೆದರೆ, ಜೆಮಿ ಓವರ್ಟನ್ (2), ಗಸ್ ಆಟ್ಕಿನ್ಸನ್ (2) ಅವರು ಅಕ್ಷರ್ ಪಟೇಲ್ ಸ್ಪಿನ್ ಬೌಲಿಂಗ್ನಲ್ಲಿ ನಿರ್ಗಮಿಸಿದರು. ಇದರ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. 44 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ ಭರ್ಜರಿ 68 ರನ್ ಬಾರಿಸಿದರು. ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದ ಅವರು ಕೊನೆಯಲ್ಲಿ ಔಟಾದರು. ಕಳಪೆ ಬ್ಯಾಟಿಂಗ್ ಪ್ರದರ್ಶನದ ಕಾರಣ ಇಂಗ್ಲೆಂಡ್, ನಿಗದಿತ 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ವರುಣ್ 3, ಹಾರ್ದಿಕ್, ಅಕ್ಷರ್, ಅರ್ಷದೀಪ್ ತಲಾ 3 ವಿಕೆಟ್ ಉರುಳಿಸಿದರು.
