ಮಂಧಾನ ಶತಕ, ರಾಣಾ ವಿಕೆಟ್ ಬೇಟೆ; ಶ್ರೀಲಂಕಾವನ್ನು 97 ರನ್‌ಗಳಿಂದ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ವನಿತೆಯರು
ಕನ್ನಡ ಸುದ್ದಿ  /  ಕ್ರಿಕೆಟ್  /  ಮಂಧಾನ ಶತಕ, ರಾಣಾ ವಿಕೆಟ್ ಬೇಟೆ; ಶ್ರೀಲಂಕಾವನ್ನು 97 ರನ್‌ಗಳಿಂದ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ವನಿತೆಯರು

ಮಂಧಾನ ಶತಕ, ರಾಣಾ ವಿಕೆಟ್ ಬೇಟೆ; ಶ್ರೀಲಂಕಾವನ್ನು 97 ರನ್‌ಗಳಿಂದ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ವನಿತೆಯರು

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 342 ರನ್‌ಗಳ ಬೃಹತ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡವು 245 ರನ್‌ಗಳಿಗೆ ಆಲೌಟ್ ಆಯ್ತು. ಭಾರತ ತಂಡವು ಮೂರು ರಾಷ್ಟ್ರಗಳ ನಡುವಿನ ತ್ರಿಕೋನ ಸರಣಿ ಗೆದ್ದು ಬೀಗಿತು.

ಶ್ರೀಲಂಕಾವನ್ನು 97 ರನ್‌ಗಳಿಂದ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ವನಿತೆಯರು
ಶ್ರೀಲಂಕಾವನ್ನು 97 ರನ್‌ಗಳಿಂದ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ವನಿತೆಯರು (BCCI)

ಸ್ಮೃತಿ ಮಂಧಾನ ಅವರ ಅಮೋಘ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 97 ರನ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿದೆ. ದಕ್ಷಿಣ ಆಫ್ರಿಕಾ, ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸರಣಿಯಲ್ಲಿ ಹರಿಣಗಳು ಆಗಲೇ ಹೊರಬಿದ್ದಾಗಿದೆ. ಆತಿಥೇಯ ಶ್ರೀಲಂಕಾ ಹಾಗೂ ಭಾರತ ತಂಡಗಳು ಫೈನಲ್‌ನಲ್ಲಿ ಸ್ಪರ್ಧಿಸಿದವು. ಅಮೋಘ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ ಭರ್ಜರಿಯಾಗಿ ಗೆದ್ದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 342 ರನ್‌ಗಳ ಬೃಹತ್ ಗಳಿಸಿತು. ಗುರಿ ಬೆನ್ನಟ್ಟಿದ ಲಂಕಾ ವನಿತೆಯರ ಪರ ನಾಯಕಿ ಚಮರಿ ಅಥಪತ್ತು 66 ಎಸೆತಗಳಲ್ಲಿ 51 ರನ್ ಗಳಿಸಿದರು. ನೀಲಾಕ್ಷಿಕಾ ಸಿಲ್ವಾ 58 ಎಸೆತಗಳಲ್ಲಿ 48 ರನ್ ಗಳಿಸಿ ಆತಿಥೇಯರ ತಂಡದ ಪರ ಪ್ರಮುಖ ಕೊಡುಗೆ ನೀಡಿದರು. ಉಳಿದಂತೆ ಆಟಗಾರ್ತಿಯರಿಂದ ಅರ್ಹ ಕೊಡುಗೆ ಬರಲಿಲ್ಲ. ತಂಡವು 245 ರನ್‌ಗಳಿಗೆ ಆಲೌಟ್ ಆಯ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಕೊನೆಯ ಪಂದ್ಯದಲ್ಲಿ ಅರ್ಧಶತಕದೊಂದಿಗೆ ಫಾರ್ಮ್‌ಗೆ ಮರಳಿದ್ದ ಎಡಗೈ ಬ್ಯಾಟರ್ ಮಂಧನಾ, 101 ಎಸೆತಗಳಲ್ಲಿ 116 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ಒಟ್ಟು 15 ಬೌಂಡರಿಗಳು ಮತ್ತು ಎರಡು ಸ್ಫೋಟಕ ಸಿಕ್ಸರ್‌ ಸಹಿತ ತಮ್ಮ 11ನೇ ಏಕದಿನ ಶತಕವನ್ನು ಪೂರೈಸಿದರು. ಪ್ರತಿಕಾ ರಾವಲ್ ಅವರನ್ನು 30 ರನ್ ಗಳಿಗೆ ಬೇಗನೆ ಔಟ್ ಮಾಡಿದ ನಂತರ, ಮಂಧನಾ ಸುಗಮವಾಗಿ ಗೇರ್ ಬದಲಾಯಿಸಿದರು.

ಪ್ರತಿಕಾ ಅವರೊಂದಿಗೆ ಮೊದಲ ವಿಕೆಟ್‌ಗೆ 70 ರನ್‌ ಮತ್ತು ಹರ್ಲೀನ್ ಡಿಯೋಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ಸ್ಟೈಲಿಶ್ ಆಟಗಾರ್ತಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ಪಂದ್ಯಶ್ರೇಷ್ಠ‌ ಪ್ರಶಸ್ತಿಯನ್ನೂ ಗೆದ್ದರು.

ಭಾರತದ ಸಾಂಘಿಕ ಪ್ರದರ್ಶನ

ಭಾರತದ ಪರ ಹರ್ಲೀನ್ 56 ಎಸೆತಗಳಲ್ಲಿ 47 ರನ್ ಗಳಿಸಿದರೆ, ಜೆಮಿಮಾ ರೊಡ್ರಿಗಸ್ 29 ಎಸೆತಗಳಲ್ಲಿ 44 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ 30 ಎಸೆತಗಳಲ್ಲಿ 41 ರನ್ ಗಳಿಸಿದರು. ಭಾರತವು ಕೊನೆಯ 10 ಓವರ್‌ಗಳಲ್ಲಿ 90 ರನ್ ಗಳಿಸಿತು. ದೀಪ್ತಿ ಶರ್ಮಾ 14 ಎಸೆತಗಳಲ್ಲಿ 20 ರನ್ ಮತ್ತು ಅಮನ್‌ಜೋತ್‌ ಕೌರ್ 12 ಎಸೆತಗಳಲ್ಲಿ 18 ರನ್‌ಗಳ ಕೊಡುಗೆಯು 340 ರನ್ ಗಡಿ ದಾಟಲು ನೆರವಾಯ್ತು.

ಶ್ರೀಲಂಕಾ ತಂಡವು ಗುರಿ ಬೆನ್ನತ್ತಲು ಇಳಿದ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ಅಮನ್‌ಜೋತ್‌ ಎಸೆತದಲ್ಲಿ ಹಾಸಿನಿ ಪೆರೆರಾ ಔಟಾದರು. ಆರಂಭಿಕ ಹೊಡೆತದ ನಂತರ ಅಥಪತ್ತು ಮತ್ತು ವಿಶ್ಮಿ ಶ್ರೀಲಂಕಾದ ಚೇಸಿಂಗ್ ಅನ್ನು ಮತ್ತೆ ಹಳಿಗೆ ತಂದರು. ಆದರೆ ಸ್ನೇಹ್‌ ರಾಣಾ ಮತ್ತೆ ತಂಡಕ್ಕೆ ಆಘಾತವಿತ್ತರು.‌

ಫೈನಲ್‌ ಪಂದ್ಯದಲ್ಲಿ ಸ್ನೇಹ್ ರಾಣಾ 38 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಪಡೆದರು. ಅಮನ್ಜೋತ್ ಕೌರ್ 3 ವಿಕೆಟ್‌ ಪಡೆದರು.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.