ನೆದರ್ಲೆಂಡ್ಸ್ ವಿಶ್ವದಾಖಲೆ ಮುರಿದ ಭಾರತ; 12 ವರ್ಷಗಳ ನಂತರ ಅನಗತ್ಯ ದಾಖಲೆ ತನ್ನೆಸರಿಗೆ ಬರೆದುಕೊಂಡ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ನೆದರ್ಲೆಂಡ್ಸ್ ವಿಶ್ವದಾಖಲೆ ಮುರಿದ ಭಾರತ; 12 ವರ್ಷಗಳ ನಂತರ ಅನಗತ್ಯ ದಾಖಲೆ ತನ್ನೆಸರಿಗೆ ಬರೆದುಕೊಂಡ ಭಾರತ

ನೆದರ್ಲೆಂಡ್ಸ್ ವಿಶ್ವದಾಖಲೆ ಮುರಿದ ಭಾರತ; 12 ವರ್ಷಗಳ ನಂತರ ಅನಗತ್ಯ ದಾಖಲೆ ತನ್ನೆಸರಿಗೆ ಬರೆದುಕೊಂಡ ಭಾರತ

India Unwanted Record: ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಟಾಸ್​ ಸೋಲುಗಳೊಂದಿಗೆ ಭಾರತ ತಂಡವು ನೆದರ್ಲೆಂಡ್ಸ್ ವಿಶ್ವದಾಖಲೆಯನ್ನು ಮುರಿದಿದೆ.

ನೆದರ್ಲೆಂಡ್ಸ್ ವಿಶ್ವದಾಖಲೆ ಮುರಿದ ಭಾರತ; 12 ವರ್ಷಗಳ ನಂತರ ಅನಗತ್ಯ ದಾಖಲೆ ತನ್ನೆಸರಿಗೆ ಬರೆದುಕೊಂಡ ಭಾರತ
ನೆದರ್ಲೆಂಡ್ಸ್ ವಿಶ್ವದಾಖಲೆ ಮುರಿದ ಭಾರತ; 12 ವರ್ಷಗಳ ನಂತರ ಅನಗತ್ಯ ದಾಖಲೆ ತನ್ನೆಸರಿಗೆ ಬರೆದುಕೊಂಡ ಭಾರತ (AFP)

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದ ಟಾಸ್ ವೇಳೆ ನೆದರ್ಲೆಂಡ್ಸ್ ಕ್ರಿಕೆಟ್ ತಂಡದ ಹೆಸರಿನಲ್ಲಿದ್ದ ಕೆಟ್ಟ ವಿಶ್ವದಾಖಲೆಯೊಂದನ್ನು ಭಾರತ ತಂಡ ಮುರಿದಿದೆ. ಏಕದಿನ ಕ್ರಿಕೆಟ್​ನಲ್ಲಿ 12 ವರ್ಷಗಳ ನಂತರ ಸತತವಾಗಿ ಅತಿ ಹೆಚ್ಚು ಟಾಸ್ ಸೋಲು ಕಂಡ ತಂಡ ಎಂಬ ಕುಖ್ಯಾತಿಗೆ ರೋಹಿತ್​ ಪಡೆ ಪಾತ್ರವಾಗಿದೆ. ಈ ಪೈಕಿ 9 ಪಂದ್ಯಗಳಿಗೆ ನಾಯಕ ರೋಹಿತ್​ ಶರ್ಮಾ. ಉಳಿದ 3 ಪಂದ್ಯಕ್ಕೆ ಕೆಎಲ್ ರಾಹುಲ್ ನಾಯಕನಾಗಿದ್ದರು. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲುವುದರೊಂದಿಗೆ ಈ ದಾಖಲೆ ನಿರ್ಮಿಸಿದೆ.

ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಾಕ್ ವಿರುದ್ಧ ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಸೋತ ಬೆನ್ನಲ್ಲೇ ಏಕದಿನದಲ್ಲಿ ಸತತ 12ನೇ ಬಾರಿಗೆ ಟಾಸ್ ಕಳೆದುಕೊಳ್ಳುವಂತಾಯಿತು. 2023ರ ಏಕದಿನ ವಿಶ್ವಕಪ್​ ಫೈನಲ್​ನಿಂದ ಆರಂಭವಾಗಿ ಇಲ್ಲಿಯ ತನಕ ಒಡಿಐ ಕ್ರಿಕೆಟ್​ನಲ್ಲಿ ಭಾರತ ಟಾಸ್ ಗೆದ್ದಿಲ್ಲ ಎಂಬುದು ಅಚ್ಚರಿಯ ಸಂಗತಿ. ಇದಕ್ಕೂ ಮುನ್ನ ಈ ಅನಗತ್ಯ ದಾಖಲೆ ನೆದರ್ಲೆಂಡ್ಸ್ ಹೆಸರಿನಲ್ಲಿತ್ತು. ಡಚ್ಚರು 2011ರ ಮಾರ್ಚ್​ನಿಂದ 2013ರ ಆಗಸ್ಟ್​​ ತನಕ ಸತತ 11 ಏಕದಿನಗಳಲ್ಲಿ ಟಾಸ್ ಸೋತು ಬೇಡದ ರೆಕಾರ್ಡ್ ಮಾಡಿತ್ತು.

ಭಾರತ ಆಡಿದ ಟಾಸ್ ಸೋತಿರುವ ಏಕದಿನ ಪಂದ್ಯಗಳು

2023ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಸೋತ ನಂತರ ಭಾರತ, ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಿತ್ತು. ಆಗ ಕೆಎಲ್ ರಾಹುಲ್ ತಂಡದ ಜವಾಬ್ದಾರಿ ಹೊಂದಿದ್ದರು. ಬಳಿಕ 2024ರಲ್ಲಿ ಶ್ರೀಲಂಕಾ ವಿರುದ್ಧ, 2025ರಲ್ಲಿ ಇಂಗ್ಲೆಂಡ್ ವಿರುದ್ಧ ತಲಾ 3 ಪಂದ್ಯಗಳ ಏಕದಿನ ಸರಣಿ ಆಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಕಣಕ್ಕಿಳಿದಿದೆ. ಆದರೆ ಯಾವ ಪಂದ್ಯದಲ್ಲೂ ಟಾಸ್ ಗೆದ್ದಿರಲಿಲ್ಲ. ಇದೀಗ ಭಾರತದ ಮುಂದಿನ ಏಕದಿನ ಪಂದ್ಯವು ಚಾಂಪಿಯನ್ಸ್ ಟ್ರೋಫಿಯಲ್ಲೇ ಇದ್ದು, ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಅವತ್ತಾದರೂ ಟಾಸ್ ಗೆಲ್ಲುತ್ತಾ ಕಾದುನೋಡಬೇಕು.

ಕೊನೆಯದಾಗಿ ಮುಖಾಮುಖಿ

ಈ ಎರಡೂ ತಂಡಗಳು ಪ್ರಸ್ತುತ ಐಸಿಸಿ-ಎಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಎದುರಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು 259 ದಿನಗಳ ನಂತರ ಪರಸ್ಪರ ಎದುರಾಗುತ್ತಿವೆ. ಉಭಯ ತಂಡಗಳು ಕೊನೆಯ ಬಾರಿಗೆ 2024ರ ಜೂನ್ 9 ರಂದು ಟಿ20 ವಿಶ್ವಕಪ್ ಸಮಯದಲ್ಲಿ ಎದುರಾಗಿದ್ದವು. ಏಕದಿನ ಕ್ರಿಕೆಟ್​ನಲ್ಲಿ ಇಂಡೋ-ಪಾಕ್ ಕೊನೆಯದಾಗಿ ಪರಸ್ಪರ ಮುಖಾಮುಖಿಯಾಗಿದ್ದು, 2023ರ ಅಕ್ಟೋಬರ್ 14 ರಂದು ನಡೆದ ಏಕದಿನ ವಿಶ್ವಕಪ್​ನಲ್ಲಿ. ಈ ಎರಡೂ ಪಂದ್ಯಗಳಲ್ಲಿ ಭಾರತ ಗೆದ್ದಿತ್ತು.

ಭಾರತ ಪ್ಲೇಯಿಂಗ್ XI

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.

ಪಾಕಿಸ್ತಾನ ಪ್ಲೇಯಿಂಗ್ XI

ಇಮಾಮ್-ಉಲ್-ಹಕ್, ಬಾಬರ್ ಅಜಮ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ಕೀಪರ್, ನಾಯಕ), ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್, ಅಬ್ರಾರ್ ಅಹ್ಮದ್.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.