302 ರನ್ಗಳ ವಿಶ್ವದಾಖಲೆಯ ಜಯದೊಂದಿಗೆ 8ನೇ ಬಾರಿಗೆ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಭಾರತ; ಲಂಕಾ ಬಹುತೇಕ ಔಟ್
India vs Sri Lanka: ಏಕದಿನ ವಿಶ್ವಕಪ್ ಟೂರ್ನಿಯ 33ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ, ಭರ್ಜರಿ ಗೆಲುವು ಸಾಧಿಸಿದೆ. ವಾಂಖೆಡೆ ಮೈದಾನದಲ್ಲಿ ಜರುಗಿದ ಈ ಪಂದ್ಯದಲ್ಲಿ ರೋಹಿತ್ ಪಡೆ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಶ್ರೀಲಂಕಾ ವಿರುದ್ಧವೂ ಗೆದ್ದ ಭಾರತ ಸತತ 7 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. ಆ ಮೂಲಕ ವಿಶ್ವಕಪ್ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಅಧಿಕೃತ ಪ್ರವೇಶ ಪಡೆದಿದೆ. ಅಲ್ಲದೆ, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲೂ ಮತ್ತೆ ಅಗ್ರಸ್ಥಾನಕ್ಕೆ ಏರಿದೆ. ಮತ್ತೊಂದೆಡೆ ಸೋತ ಲಂಕಾ ಬಹುತೇಕ ಸೆಮೀಸ್ ರೇಸ್ನಿಂದ ಹೊರಬಿದ್ದಿದೆ.
ಸಿಂಹಳೀಯರ ವಿರುದ್ಧ 302 ರನ್ಗಳ ಗೆಲುವು ದಾಖಲಿಸಿದ ರೋಹಿತ್ ಪಡೆ, ಸತತ ನಾಲ್ಕನೇ ಬಾರಿ (2011, 2015, 2019 ಮತ್ತು 2023) ಹಾಗೂ ಒಟ್ಟು 8ನೇ ಸಲ ಏಕದಿನ ವಿಶ್ವಕಪ್ ಸೆಮಿಫೈನಲ್ಗೆ ಪ್ರವೇಶಿಸಿದ ದಾಖಲೆ ಬರೆದಿದೆ. 302 ರನ್ಗಳಿಂದ ಲಂಕಾವನ್ನು ದಹನ ಮಾಡಿ, ಟೀಮ್ ಇಂಡಿಯಾ ವಿಶ್ವದಾಖಲೆ ಬರೆದಿದೆ. ವಿಶ್ವಕಪ್ ಇತಿಹಾಸದಲ್ಲಿ ಭಾರಿ ದೊಡ್ಡ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಭರ್ಜರಿ ಬ್ಯಾಟಿಂಗ್ ನಡೆಸಿತು. ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಶುಭ್ಮನ್ ಗಿಲ್ 92, ವಿರಾಟ್ ಕೊಹ್ಲಿ 88, ಶ್ರೇಯಸ್ ಅಯ್ಯರ್ 82 ರನ್ ಸಿಡಿಸಿದರು. ಈ ಗುರಿ ಬೆನ್ನತ್ತಿದ ಶ್ರೀಲಂಕಾ, ಭಾರತೀಯ ಬೌಲರ್ಗಳ ದಾಳಿಗೆ ತತ್ತರಿಸಿ ಹೋಯಿತು. 19.4 ಓವರ್ಗಳಲ್ಲಿ 55 ರನ್ಗಳಿಗೆ ಸರ್ವಪತನ ಕಂಡಿತು.
ಲಂಕಾ ದಹನ ಮಾಡಿದ ಭಾರತೀಯ ವೇಗಿಗಳು
358 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ದಾಳಿಗೆ ತತ್ತರಿಸಿತು. ಮೂವರು ವೇಗಿಗಳು ಜಿದ್ದಿಗೆ ಬಿದ್ದವರಂತೆ ವಿಕೆಟ್ ಪಡೆದರು. ಇನ್ನಿಂಗ್ಸ್ ಆರಂಭದ ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಾಂಕಗೆ ಬುಮ್ರಾ, ಶಾಕ್ ನೀಡಿದರೆ, ಸಿರಾಜ್, 2ನೇ ಓವರ್ನಲ್ಲಿ ದಿಮುತ್ ಕರಣರತ್ನೆ, ಸದೀರ ಸಮರವಿಕ್ರಮಗೆ ಗೇಟ್ಪಾಸ್ ನೀಡಿದರು. ಮತ್ತೊಂದು ಓವರ್ನಲ್ಲಿ ಕುಸಾಲ್ ಮೆಂಡಿಸ್ರನ್ನು ಕ್ಲೀನ್ ಬೋಲ್ಡ್ ಮಾಡಿದರು.
ಬುಮ್ರಾ, ಸಿರಾಜ್ ಬಳಿಕ ದಾಳಿಗಿಳಿದ ಶಮಿ, ಲಂಕಾಗೆ ಮತ್ತಷ್ಟು ಆಘಾತ ನೀಡಿದರು. ಚರಿತ್ ಅಸಲಂಕ (1), ದುಶಾನ್ ಹೇಮಂತ (0), ದುಷ್ಮಂತಾ ಚಮೀರಾಗೆ (0), ಆ್ಯಂಜಲೋ ಮ್ಯಾಥ್ಯೂಸ್ (12), ಕಸುನ್ ರಜಿತ (14) ಶಾಕ್ ನೀಡಿದರು. ಶಮಿ 5 ವಿಕೆಟ್ ಕಬಳಿಸಿ ಭಾರತದ ಪರ ಏಕದಿನ ವಿಶ್ವಕಪ್ನಲ್ಲಿ ಅಧಿಕ ವಿಕೆಟ್ ಪಡೆದ ಆಟಗಾರ ಎನಿಸಿದರು. ಆ ಮೂಲಕ ಜಹೀರ್ ಖಾನ್ ದಾಖಲೆ ಮುರಿದರು. ರವೀಂದ್ರ ಜಡೇಜಾ ಕೊನೆಯ ವಿಕೆಟ್ ಪಡೆದರು.
ಭಾರತ ಭರ್ಜರಿ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಬೇಗನೇ ಔಟಾದರೂ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ರೋಹಿತ್ 4 ರನ್ ಗಳಿಸಿ ಔಟಾದರೆ, ಗಿಲ್-ಕೊಹ್ಲಿ 2ನೇ ವಿಕೆಟ್ಗೆ 179 ರನ್ ಜೊತೆಯಾಟವಾಡಿದರು. ಆದರೆ ಇಬ್ಬರೂ ಶತಕ ವಂಚಿತರಾದರು. ಗಿಲ್ 92 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಿತ 92 ರನ್ ಗಳಿಸಿದರು.
ಮತ್ತೊಂದೆಡೆ ಕೊಹ್ಲಿ 94 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ 88 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ 49ನೇ ಏಕದಿನ ಶತಕ ತಪ್ಪಿಸಿಕೊಂಡರು. ಬಳಿಕ ಶ್ರೇಯಸ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. 56 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಹಿತ 82 ಚಚ್ಚಿದರು. ಕೆಎಲ್ ರಾಹುಲ್ 21, ರವೀಂದ್ರ ಜಡೇಜಾ 35 ರನ್ ಸಿಡಿಸಿದರು. ಬ್ಯಾಟಿಂಗ್ ಆರ್ಭಟದ ನಡುವೆಯೂ ಲಂಕಾ ಪರ ದಿಲ್ಶಾನ್ ಮಧುಶಂಕ 5 ವಿಕೆಟ್ ಪಡೆದರು.