ಟಿ20 ವಿಶ್ವಕಪ್ನಲ್ಲಿ ಯುಎಸ್ಎ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ಬಲಿಷ್ಠ ಪ್ಲೇಯಿಂಗ್ XI ಇಲ್ಲಿದೆ
USA vs India: ಟೀಮ್ ಇಂಡಿಯಾ ಮತ್ತು ಅಮೆರಿಕ ತಂಡಗಳು ಇದೇ ಮೊದಲ ಬಾರಿಗೆ ಕ್ರಿಕೆಟ್ನಲ್ಲಿ ಮುಖಾಮುಖಿಯಾಗುತ್ತಿದ್ದು, ರೋಹಿತ್ ಪಡೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 25ನೇ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ (USA vs India) ತಂಡಗಳು ಮುಖಾಮುಖಿಯಾಗುತ್ತಿವೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳಲ್ಲಿ ಯಾರೇ ಗೆದ್ದರೂ ಗ್ರೂಪ್ ಎನಲ್ಲಿ ಮೊದಲ ತಂಡವಾಗಿ ಸೂಪರ್-8ಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಯುಎಸ್ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಮೊನಾಕ್ ಪಟೇಲ್ ಈ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.
ಯುನೈಟೆಡ್ ಸ್ಟೇಟ್ಸ್ (ಪ್ಲೇಯಿಂಗ್ XI)
ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್, ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್), ಆರನ್ ಜೋನ್ಸ್ (ನಾಯಕ), ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್.
ಭಾರತ (ಪ್ಲೇಯಿಂಗ್ XI)
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಗೆದ್ದ ತಂಡವು ನೇರವಾಗಿ ಸೂಪರ್-8ಕ್ಕೆ ಪ್ರವೇಶ
ಭಾರತ ಮತ್ತು ಅಮೆರಿಕ ನಡುವೆ ಯಾವುದೇ ತಂಡ ಗೆದ್ದರೂ ಸೂಪರ್-8ಕ್ಕೆ ಪ್ರವೇಶ ಪಡೆಯಲಿದೆ. ಉಭಯ ತಂಡಗಳು ಸಹ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿವೆ. ತಲಾ 4 ಅಂಕ ಸಂಪಾದಿಸಿವೆ. ಇದೀಗ 3ನೇ ಗೆಲುವಿನೊಂದಿಗೆ ಸೂಪರ್-8ಕ್ಕೆ ಅರ್ಹತೆ ಪಡೆದುಕೊಳ್ಳಲು ಎರಡೂ ತಂಡಗಳು ತುದಿಗಾಲಲ್ಲಿ ನಿಂತಿವೆ. ಈಗಾಗಲೇ ಪಾಕ್ ತಂಡವನ್ನು ಮಣಿಸಿರುವ ಅಮೆರಿಕ, ಭಾರತ ತಂಡವನ್ನೂ ಸೋಲಿಸಲು ಸಜ್ಜಾಗಿದೆ. ಹೀಗಾಗಿ ಭಾರತ ತಂಡ ಬಹಳ ಎಚ್ಚರಿಕೆಯಿಂದ ಆಡಬೇಕಿದೆ.
ಪಾಕಿಸ್ತಾನಕ್ಕಿದೆ ಇನ್ನೂ ಸೂಪರ್-8 ಪ್ರವೇಶಿಸಲು ಅವಕಾಶ
ಭಾರತ ಅಥವಾ ಅಮೆರಿಕ ತಂಡಗಳು ತಮ್ಮ ಮುಂದಿನ ಎರಡೂ ಪಂದ್ಯಗಳನ್ನು ಸೋತರೆ ಪಾಕಿಸ್ತಾನಕ್ಕೆ ಸೂಪರ್ 8ಕ್ಕೆ ಪ್ರವೇಶಿಸುವ ಅವಕಾಶ ಇದೆ. ಬಾಬರ್ ಪಡೆ ತನ್ನ ಮುಂದಿನ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಬೇಕಿದೆ. ಆದರೆ ಭಾರತ ತಂಡ ಉಳಿದ 2ರಲ್ಲಿ ಸೋಲುವ ಸಾಧ್ಯತೆ ಕಡಿಮೆ ಇರುವ ಕಾರಣ ಅಮೆರಿಕ ಸೋಲಬೇಕೆಂದು ಪಾಕ್ ಪ್ರಾರ್ಥಿಸಬೇಕಿದೆ. ಅಮೆರಿಕ ಎರಡರಲ್ಲೂ ಸೋತು ಪಾಕ್ ಭರ್ಜರಿ ಗೆಲುವು ಸಾಧಿಸಿ ಉತ್ತಮ ರನ್ರೇಟ್ ಕಾಯ್ದುಕೊಂಡರೆ ಬಾಬರ್ ಪಡೆ, ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.
ಪಂದ್ಯ ರದ್ದಾದರೆ ಪಾಕ್ ಮನೆಗೆ
ಅಮೆರಿಕ ಮತ್ತು ಭಾರತದ ನಡುವಿನ ಪಂದ್ಯವು ಮಳೆಯಿಂದ ರದ್ದಾದರೆ ಪಾಕಿಸ್ತಾನ ಅಧಿಕೃತವಾಗಿ ಹೊರಬೀಳಲಿದೆ. ಏಕೆಂದರೆ ಮಳೆಯು ಪಂದ್ಯಕ್ಕೆ ಅಡ್ಡಿಪಡಿಸಿದರೆ ಯುಎಸ್ ಮತ್ತು ಟೀಮ್ ಇಂಡಿಯಾ ತಲಾ ಒಂದೊಂದು ಅಂಕ ಪಡೆಯಲಿವೆ. ಇದರೊಂದಿಗೆ ತಲಾ 5 ಅಂಕ ಗಳಿಸಲಿವೆ. ಹೀಗಾಗಿ, ಪಾಕಿಸ್ತಾನ ಉಳಿದೊಂದು ಪಂದ್ಯದಲ್ಲಿ ಗೆದ್ದರೂ 4 ಅಂಕ ಪಡೆಯಲಷ್ಟೇ ಶಕ್ತವಾಗಲಿದೆ. ಹೀಗಾಗಿ ಸೂಪರ್-8ಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
