ನೇಪಾಳ ಕ್ರಿಕೆಟ್ ತಂಡಕ್ಕೆ ಭಾರತದ ನೆರವು; ಬೆಂಗಳೂರಿನ ಎನ್‌ಸಿಎಯಲ್ಲಿ 2 ವಾರಗಳ ತರಬೇತಿ ವ್ಯವಸ್ಥೆ ಮಾಡಿದ ಬಿಸಿಸಿಐ
ನೇಪಾಳ ಕ್ರಿಕೆಟ್ ತಂಡವು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎರಡು ವಾರಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ನೇಪಾಳದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಬಿಸಿಸಿಐ ಬೆಂಬಲ ನೀಡುತ್ತಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಭಾರತವೇ ದೊಡ್ಡಣ್ಣ ಎಂಬುದು ಅಲಿಖಿತ ಸತ್ಯ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಕೂಡಾ ಭಾರತದ್ದೇ. ಬಲಿಷ್ಠ ಕ್ರಿಕೆಟಿಗರನ್ನು ಹೊಂದಿರುವ ಭಾರತದಲ್ಲಿ, ವರ್ಷದಿಂದ ವರ್ಷಕ್ಕೆ ಕ್ರಿಕೆಟ್‌ಗೆ ಬೇಕಾದ ಸೌಲಭ್ಯಗಳು ಕೂಡಾ ಹೆಚ್ಚುತ್ತಿವೆ. ಜಗತ್ತಿನ ಇತರ ಕ್ರಿಕೆಟ್ ರಾಷ್ಟ್ರಗಳು ಭಾರತದೊಂದಿಗೆ ದ್ವಿಪಕ್ಷೀಯ ಸರಣಿ ಆಡುವುದನ್ನು ಪ್ರತಿಷ್ಠೆಯಾಗಿ ಪರಿಗಣಿಸುತ್ತವೆ. ಈ ನಡುವೆ ಬಿಸಿಸಿಐ, ಸಣ್ಣ ಸಣ್ಣ ರಾಷ್ಟ್ರಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನೆರವು ನೀಡುತ್ತಾ ಬಂದಿದೆ. ಇದರಲ್ಲಿ ನೇಪಾಳ ತಂಡ ಕೂಡಾ ಒಂದು. ನೇಪಾಳ ಕ್ರಿಕೆಟ್ ತಂಡವು ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿದೆ. ಸಣ್ಣ ದೇಶದಲ್ಲಿ ಕ್ರಿಕೆಟ್‌ಗೆ ಮತ್ತಷ್ಟು ಬೆಂಬಲ ನೀಡುವ ಸಲುವಾಗಿ, ಭಾರತ ನೆರೆಯ ರಾಷ್ಟ್ರದ ಜೊತೆಗೆ ನಿಂತಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎರಡು ವಾರಗಳ ತರಬೇತಿ ಕಾರ್ಯಕ್ರಮಕ್ಕೆ ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ.
ಎರಡು ವಾರಗಳ ತರಬೇತಿ ಕಾರ್ಯಕ್ರಮಕ್ಕಾಗಿ ಈಗಾಗಲೇ ನೇಪಾಳ ಕ್ರಿಕೆಟ್ ತಂಡವು ಬೆಂಗಳೂರಿಗೆ ಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ, ಈ ಅವಕಾಶ ಮಾಡಿದ್ದಾರೆ. ಹೀಗಾಗಿ ಭಾರತ ಪ್ರವಾಸಕ್ಕೆ ಅನುಕೂಲ ಮಾಡಿಕೊಟ್ಟು, ಎನ್‌ಸಿಎಯಲ್ಲಿ ತರಬೇತಿ ನೀಡಲು ಮುಂದಾದ ಭಾರತೀಯ ಕ್ರಿಕೆಟ್ ಮಂಡಳಿಗೆ ನೇಪಾಳ ಕ್ರಿಕೆಟ್ ಅಸೋಸಿಯೇಷನ್ ಕೃತಜ್ಞತೆ ಸಲ್ಲಿಸಿದೆ.
“ನೇಪಾಳ ಕ್ರಿಕೆಟ್ ತಂಡವು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎರಡು ವಾರಗಳ ತರಬೇತಿ ಕಾರ್ಯಕ್ರಮಕ್ಕೆ ಒಳಗಾಗಲಿದೆ. ಈ ಉಪಕ್ರಮಕ್ಕಾಗಿ ಜಯ್ ಶಾ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಪ್ರವಾಸದ ವ್ಯವಸ್ಥೆ ಮಾಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನೇಪಾಳವು ಕೃತಜ್ಞತೆ ಸಲ್ಲಿಸುತ್ತದೆ. ಭವಿಷ್ಯದ ಕ್ರಿಕೆಟ್ ಪ್ರವಾಸಗಳು ಮತ್ತು ಕ್ರಿಕೆಟ್ ರಾಷ್ಟ್ರವಾಗಿ ಬೆಳೆಯಲು ನಮಗೆ ಅವಕಾಶಗಳನ್ನು ಹೆಚ್ಚಿಸಲು ಇದು ನೆರವಾಗಲಿದೆ” ಎಂದು ನೇಪಾಳ ಕ್ರಿಕೆಟ್ ಅಸೋಸಿಯೇಷನ್ ಹೇಳಿದೆ.
ನೇಪಾಳ ತಂಡಕ್ಕೆ ಭಾರಿ ಬೆಂಬಲ
ಭಾರತ ಮತ್ತು ನೇಪಾಳ ತಂಡಗಳು ಈ ಹಿಂದೆ ಒಂದು ಬಾರಿ ಪರಸ್ಪರ ಮುಖಾಮುಖಿಯಾಗಿವೆ. 2023ರ ಏಷ್ಯಾಕಪ್‌ನಲ್ಲಿ ಏಕದಿನ ಸ್ವರೂಪದ ಒಂದು ಪಂದ್ಯವನ್ನು ಆಡಲಾಗಿದೆ. ಭಾರತವು ಪಂದ್ಯದಲ್ಲಿ ಸುಲಭ ಜಯ ಸಾಧಿಸಿತ್ತು. 2024ರ ಟಿ20 ವಿಶ್ವಕಪ್‌ನಲ್ಲಿಯೂ, ನೇಪಾಳ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಅಲ್ಲದೆ ತಂಡಕ್ಕೆ ಅಪಾರ ಅಭಿಮಾನಿಗಳು ಬೆಂಬಲ ನೀಡಿದ್ದರು.
ಬೆಂಗಳೂರಿನಲ್ಲಿ ನೂತನ ಎನ್‌ಸಿಎ ಶೀಘ್ರದಲ್ಲೇ ತೆರೆಯಲಿದೆ ಎಂದು ಜಯ್ ಶಾ ಇತ್ತೀಚೆಗೆ ಘೋಷಿಸಿದ್ದರು. ಇದರಲ್ಲಿ ಸಾಕಷ್ಟು ವಿಶ್ವ ದರ್ಜೆಯ ಸೌಲಭ್ಯಗಳು ಇರಲಿವೆ. 45 ಅಭ್ಯಾಸ ಪಿಚ್‌ಗಳು, ಒಳಾಂಗಣ ಕ್ರಿಕೆಟ್ ಪಿಚ್‌ಗಳು, ಒಲಿಂಪಿಕ್ ಗಾತ್ರದ ಈಜುಕೊಳ, ಚೇತರಿಕೆ ಮತ್ತು ಕ್ರೀಡಾ ವಿಜ್ಞಾನಕ್ಕೆ ಸಂಬಂಧಿಸಿದ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿದೆ ಎಂದು ಶಾ ಘೋಷಿಸಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ರೋಹಿತ್ ಶರ್ಮಾ 2027ರ ವಿಶ್ವಕಪ್ ಆಡಲ್ಲ, 2 ವರ್ಷಗಳಲ್ಲಿ ನಿವೃತ್ತಿ; ಅಚ್ಚರಿ ವಿಚಾರ ಬಹಿರಂಗಪಡಿಸಿದ ಹರ್ಭಜನ್ ಸಿಂಗ್