ಭಾರತ ಚಾಂಪಿಯನ್ಸ್ ಟ್ರೋಫಿ ತಂಡ: ಜಸ್ಪ್ರೀತ್ ಬುಮ್ರಾ ಇನ್, ಸ್ಯಾಮ್ಸನ್ ಔಟ್; ಕರುಣ್ ನಾಯರ್ ಪರಿಗಣನೆ ಕಷ್ಟ ಎಂದ ವರದಿ
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲಾಗುತ್ತಿದ್ದು, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಸಂಜು ಸ್ಯಾಮ್ಸನ್ ಹಾಗೂ ಕನ್ನಡಿಗ ಕರುಣ್ ನಾಯರ್ ಅವರ ಪರಿಗಣನೆ ಕಷ್ಟ ಎಂದು ಹೇಳಲಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡವನ್ನು ಇಂದು (ಜನವರಿ 18, ಶನಿವಾರ) ಆಯ್ಕೆ ಮಾಡಲಾಗುತ್ತಿದೆ. ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪ್ರಮುಖ ಐಸಿಸಿ ಟೂರ್ನಿಗೆ ಸೇರ್ಪಡೆಗೊಳ್ಳಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸುವುದು ಖಚಿತವಾಗಿದೆ. ಟೂರ್ನಿಗೆ ಸಂಜು ಸ್ಯಾಮ್ಸನ್ ಅಥವಾ ಕರುಣ್ ನಾಯರ್‌ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬ ಮಾಹಿತಿ ಲಭಿಸಿದೆ.
ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯದ ಸಮಯದಲ್ಲಿ ಬುಮ್ರಾ ಗಾಯಕ್ಕೊಳಗಾಗಿದ್ದರು. ಬೆನ್ನು ನೋವಿನಿಂದಾಗಿ ಚಾಂಪಿಯನ್ಸ್ ಟ್ರೋಫಿಗೆ ಅವರ ಲಭ್ಯತೆ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಚರ್ಚೆಗಳು ನಡೆದವು. ಆದರೆ, ಐಸಿಸಿ ಟೂರ್ನಿಗೆ ತಂಡದಲ್ಲಿ ಸೇರಿಸಲಾಗುತ್ತಿದೆ. ಅವರ ಭಾಗವಹಿಸುವಿಕೆಯು “ಫಿಟ್ನೆಸ್‌ಗೆ ಒಳಪಟ್ಟಿರುತ್ತದೆ” ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
“ಬುಮ್ರಾ ಅವರ ಫಿಟ್ನೆಸ್ ಕುರಿತು ನಿರ್ಣಯಿಸಲು ಹಾಗೂ ಅಂತಿಮ ನಿರ್ಧಾರಕ್ಕೆ ಬರಲು ಚಾಂಪಿಯನ್ಸ್ ಟ್ರೋಫಿಗೆ ಮೊದಲು ಕನಿಷ್ಠ ಒಂದು ಸ್ಪರ್ಧಾತ್ಮಕ ಪಂದ್ಯವನ್ನು ಆಡಬೇಕೆಂದು ಆಯ್ಕೆದಾರರು ಬಯಸುತ್ತಾರೆ” ಎಂದು ವರದಿ ಹೇಳಿದೆ. ವರದಿಯ ಪ್ರಕಾರ, ಸಂಜು ಸ್ಯಾಮ್ಸನ್ ಅಥವಾ ಕರುಣ್ ನಾಯರ್‌ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ.
ಕರುಣ್ ನಾಯರ್ ಪರಿಗಣನೆ ಕಷ್ಟಸಾಧ್ಯ
ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ಪರ ಆಡುತ್ತಿರುವ ಕನ್ನಡಿಗ ಕರುಣ್ ನಾಯರ್, ಆಯ್ಕೆದಾರರ ಮನಗೆದ್ದಿದ್ದಾರೆ. ಈವರೆಗೆ ಆಡಿದ 8 ಪಂದ್ಯಗಳಲ್ಲಿ 752 ರನ್ ಗಳಿಸಿ, ಮುಂಬರುವ ಟೂರ್ನಿಗೆ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. 752ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಅವರು ಏಳು ಇನ್ನಿಂಗ್ಸ್‌ಗಳಲ್ಲಿ ದಾಖಲೆಯ ಐದು ಶತಕ ಸಿಡಿಸಿದ್ದಾರೆ. “2017ರಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ನಾಯರ್ ಅವರನ್ನು ಪ್ರಮುಖ ಟೂರ್ನಿಯ ಸಮಯದಲ್ಲಿ ತಂಡಕ್ಕೆ ಕರೆಸಿಕೊಳ್ಳುವುದು ಸರಿಯಲ್ಲ ಎಂದು ಆಯ್ಕೆದಾರರು ಭಾವಿಸುತ್ತಾರೆ” ಎಂದು ವರದಿ ಹೇಳಿಕೊಂಡಿದೆ.
ದೇಶೀಯ ಕ್ರೆಕೆಟ್ ಕಡೆಗಣನೆ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು, ಇದೀಗ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡುವುದು ಅನುಮಾನ. ವರದಿಯ ಪ್ರಕಾರ, ಅವರನ್ನು ಮುಂಬರುವ ಎರಡೂ ಟೂರ್ನಿಗೆ ಆಯ್ಕೆ ಮಾಡುವ ಸಾಧ್ಯತೆ ಇಲ್ಲ. ವಿಜಯ್ ಹಜಾರೆ ಟ್ರೀಫಿಯಲ್ಲಿ ಅವರು ಆಡದಿರುವುದು ಕೂಡಾ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಟೀಮ್ ಇಂಡಿಯಾ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಭಾಗವಹಿಸುವಂತೆ ಬಿಸಿಸಿಐ ಹೇಳಿದೆ. ಆದರೆ, ಆಟಗಾರರು ಅದನ್ನು ನಿರ್ಲಕ್ಷಿಸಿದ್ದಾರೆ. ಆಟಗಾರರ ಅನುಪಸ್ಥಿತಿಯಿಂದ ಆಯ್ಕೆದಾರರು ಅತೃಪ್ತರಾಗಿದ್ದಾರೆ ಎಂದು ವರದಿ ತಿಳಿಸಿದೆ.
