ಕನ್ನಡ ಸುದ್ದಿ  /  Cricket  /  India Likely Playing Eleven For 5th Test Vs England Rajat Patidar Vs Devdutt Padikkal Kuldeep Yadav To Be Dropped Jra

ಪಾಟೀದಾರ್‌ಗೆ ಮತ್ತೊಂದು ಅವಕಾಶ‌, ಕುಲ್ದೀಪ್ ಯಾದವ್ ಡ್ರಾಪ್; ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

India vs England 5th Test: ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದಲ್ಲೂ ಭಾರತ ತಂಡದಲ್ಲಿ ರಜತ್‌ ಪಾಟೀದಾರ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ತಂಡದಲ್ಲಿ ದೇವದತ್ ಪಡಿಕ್ಕಲ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದ್ದರೂ, ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಪಾಟೀದಾರ್‌ಗೆ ಮತ್ತೊಂದು ಅವಕಾಶ ನೀಡುವ ಸುಳಿವು ಸಿಕ್ಕಿದೆ.

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ (PTI)

ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಇದರಲ್ಲಿ ಎರಡು ಬದಲಾವಣೆಯಂತೂ ಬಹುತೇಕ ಖಚಿತ. ಧರ್ಮಶಾಲಾದಲ್ಲಿ ಪಂದ್ಯ ನಡೆಯುತ್ತಿರುವುದರಿಂದ, ಮೂವರು ಸ್ಪಿನ್ನರ್‌ಗಳ ಬದಲಿಗೆ ಮೂವರು ವೇಗಿಗಳನ್ನು ಕಣಕ್ಕಿಳಿಸಬೇಕಾಗಿದೆ. ಧರ್ಮಶಾಲಾ ಪಿಚ್‌ ವೇಗಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್‌ ತಂಡ ಕೂಡಾ ಈಗಾಗಲೇ ಮೂವರು ವೇಗಿಗಳನ್ನು ಕಣಕ್ಕಿಳಿಸುವುದಾಗಿ ಖಚಿತಪಡಿಸಿದೆ. ಹಾಗಿದ್ದರೆ, ಭಾರತ ತಂಡದ ಆಡುವ ಬಳಗದ ಸಂಯೋಜನೆ ಹೇಗಿರಲಿದೆ ಎಂಬುದನ್ನು ನೋಡೋಣ.

ಕೆಎಲ್ ರಾಹುಲ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಈವರೆಗೆ ತಂಡದಲ್ಲಿ ಸ್ಥಾನ ಪಡೆದಿದ್ದ ರಜತ್ ಪಾಟೀದಾರ್‌ ಸ್ಥಾನವು ಸದ್ಯ ಅಡಕತ್ತರಿಯಲ್ಲಿದೆ. ಆದರೆ, ಸರಣಿಯ ಕೊನೆಯ ಪಂದ್ಯವಾಗಿರುವುದರಿಂದ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯೂ ಇದೆ. ಈವರೆಗೆ ಮೂರು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿರುವ ರಜತ್‌, ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 63 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿಸಹಜವಾಗಿಯೇ ಇವರ ಸ್ಥಾನ ಅನುಮಾನದಲ್ಲಿದೆ. ಅತ್ತ, ತಂಡದಲ್ಲಿ ದೇವದತ್ ಪಡಿಕ್ಕಲ್ ಇರುವುದರಿಂದ, ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವ ಕುರಿತು ಹಿಂದೂಸ್ತಾನ್‌ ಟೈಮ್ಸ್‌ಗೆ ಸುಳಿವು ಸಿಕ್ಕಿತ್ತು. ಆದರೆ, ನಾಯಕ ರೋಹಿತ್ ಶರ್ಮಾ ಅವರು ಪಾಟೀದಾರ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.

“ರಜತ್ ಪಾಟಿದಾರ್ ಉತ್ತಮ ಸಾಮರ್ಥ್ಯ ಹೊಂದಿರುವ ಆಟಗಾರ. ನಾವು ಅವರನ್ನು ಪ್ರತಿಭಾವಂತ ಆಟಗಾರನಾಗಿ ನೋಡುತ್ತೇವೆ. ಹೀಗಾಗಿ ಅವರಿಗೆ ಇನ್ನೂ ಸ್ವಲ್ಪ ಸಮಯ ನೀಡಬೇಕಾಗಿದೆ,” ಎಂದು ರೋಹಿತ್ ಗುರುವಾರ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ರಾಂಚಿ ಟೆಸ್ಟ್‌ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು, ವೇಗದ ಬಳಗವನ್ನು ಮುನ್ನಡೆಸಲಿದ್ದಾರೆ. ಮೊಹಮ್ಮದ್ ಸಿರಾಜ್ ಎರಡನೇ ವೇಗಿಯಾಗಿದ್ದಾರೆ. “ಹೆಚ್ಚುವರಿ ವೇಗಿಯನ್ನು ಆಡಿಸಲು ಉತ್ತಮ ಅವಕಾಶವಿದೆ. ನಾವು ಇನ್ನೂ ಅದರ ಬಗ್ಗೆ ಸಂಪೂರ್ಣವಾಗಿ ನಿರ್ಧರಿಸಿಲ್ಲ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಹೀಗಾಗಿ ಮೂರನೇ ವೇಗಿ ಯಾರು ಎಂಬ ಗೊಂದಲವಿದೆ. ಒಂದು ವೇಳೆ ಭಾರತವು ಮೂರನೇ ವೇಗದ ಬೌಲರ್ ಆಗಿ ಆಕಾಶ್ ದೀಪ್ ಅವರನ್ನು ಕಣಕ್ಕಿಳಿಸಿದರೆ, ಸ್ಪಿನ್ನರ್ ಕುಲ್ದೀಪ್‌ ಯಾದವ್ ಹೊರಗುಳಿಯಲಿದ್ದಾರೆ. ಏಕೆಂದರೆ ರವೀಂದ್ರ ಜಡೇಜಾ ಹಾಗೂ ಆರ್‌ ಅಶ್ವಿನ್‌ ಮೊದಲ ಎರಡು ಆಯ್ಕೆಯ ಸ್ಪಿನ್ನರ್‌ಗಳಾಗಿ ತಂಡದಲ್ಲಿ ಇರಲಿದ್ದಾರೆ.

ಸ್ಪಿನ್ನರ್‌ಗಳ ಪಾತ್ರವೂ ಮುಖ್ಯ

ಈ ಪಿಚ್ ವೇಗದ ಬೌಲರ್‌ಳಿಗೆ ಅನುಕೂಲಕರ ಎಂದು ಹೇಳಲಾದರೂ, ಸ್ಪಿನ್ನರ್‌ಗಳ ಪಾತ್ರವನ್ನು ಕಡೆಗಣಿಸುವುದು ಸಲ್ಲದು. ಈ ಹಿಂದೆ 2017ರಲ್ಲಿ ಇಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವಿನಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸಿದ್ದರು. ಹೀಗಾಗಿ ಭಾರತ ಮೂವರು ಸ್ಪಿನ್ನರ್‌ಗಳನ್ನು ಇಳಿಸಿದರೂ ಅಚ್ಚರಿಯಿಲ್ಲ.

ಇಂಗ್ಲೆಂಡ್‌ಗೆ ವಾತಾವರಣದ ಅನುಕೂಲ

ಧರ್ಮಶಾಲಾದಲ್ಲಿ ಪಂದ್ಯದ ವೇಳೆ ತಂಪಾದ ಹವಾಮಾನ ಇರಲಿದೆ. ಪಂದ್ಯಕ್ಕೆ ಮಳೆಯೊಂದಿಗೆ ಹಿಮಪಾತದ ಭೀತಿಯೂ ಇದೆ. ಹೀಗಾಗಿ ಇಲ್ಲಿನ ತಣ್ಣನೆಯ ವಾತಾವರಣವು ಆಂಗ್ಲರಿಗೆ ತವರು ನೆಲದಲ್ಲಿ ಆಡಿದ ಅನುಭವ ನೀಡಲಿದೆ. ಪಂದ್ಯಕ್ಕಾಗಿ ಬೆನ್‌ ಸ್ಟೋಕ್ಸ್‌ ಬಳಗವು ಒಂದು ದಿನ ಮುಂಚಿತವಾಗಿಯೇ ಆಡುವ ಬಳಗವನ್ನು ಪ್ರಕಟಿಸಿದೆ.

ಭಾರತ ಸಂಭಾವ್ಯ ಆಡುವ ಬಳಗ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟೀದಾರ್ / ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ / ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ | ಕೆಲವೊಬ್ಬರು ಮಾತ್ರವಲ್ಲ, ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು; ರೋಹಿತ್ ಶರ್ಮಾ ಖಡಕ್‌ ಹೇಳಿಕೆ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)