ರಿಷಭ್ ಪಂತ್ ಇನ್, ಕೆಎಲ್ ರಾಹುಲ್-ಬುಮ್ರಾ ಔಟ್; ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ
ಫೆಬ್ರುವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಭಾರತ ಕ್ರಿಕೆಟ್ ತಂಡದ ಎಲ್ಲಾ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಟೂರ್ನಿಗೆ ಟೀಮ್ ಇಂಡಿಯಾ ಆಡುವ ಬಳಗವು ಬಹುತೇಕ ಏಕದಿನ ವಿಶ್ವಕಪ್ ತಂಡದಂತೆಯೇ ಇರಲಿದ್ದು, ಅಲ್ಪ ಬದಲಾವಣೆಯ ನಿರೀಕ್ಷೆ ಇದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಜನವರಿ 18ರ ಶುಕ್ರವಾರ ಬಿಸಿಸಿಐ ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ದುಬೈಗೆ ಹಾರಲಿದ್ದು, ಶುಭ್ಮನ್ ಗಿಲ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನೂ ಆಯ್ಕೆ ಮಾಡಲಾಗಿದ್ದು, ಅವರ ಲಭ್ಯತೆಯು ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. ಇದೇ ವೇಳೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದ್ದರೂ, ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಆಗಿದ್ದಾರೆ.
ಫೆಬ್ರುವರಿ 19ರಿಂದ ಆರಂಭವಾಗಲಿರುವ ಮಹತ್ವದ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಆದರೆ ಭಾರತ ತಂಡದ ಎಲ್ಲಾ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಸದ್ಯ ಭಾರತದ ಆಡುವ ಬಳಗ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ತಂಡವು ಬಹುತೇಕ ಏಕದಿನ ವಿಶ್ವಕಪ್ ತಂಡದಂತೆಯೇ ಇರಲಿದ್ದು, ಅಲ್ಪ ಬದಲಾವಣೆ ನಿರೀಕ್ಷಿಸಬಹುದಾಗಿದೆ.
ಗಿಲ್ ಜೊತೆಗೆ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದು, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ನಾಲ್ಕನೇ ಕ್ರಮಾಂಕ ಸಿಕ್ಕಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ ಐದನೇ ಕ್ರಮಾಂಕಕ್ಕೆ ಮರಳಲಿದ್ದಾರೆ. ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರುವುದರಿಂದ ಕೆಎಲ್ ರಾಹುಲ್‌ಗೆ ಸ್ಥಾನ ಸಿಗುವುದು ಕಷ್ಟ.
ಶಮಿ ಕಂಬ್ಯಾಕ್, ಬುಮ್ರಾ ಬದಲಿಗೆ ಅರ್ಷದೀಪ್ ಸಿಂಗ್
ವೇಗಿ ಮೊಹಮ್ಮದ್ ಶಮಿ ಐಸಿಸಿ ಏಕದಿನ ವಿಶ್ವಕಪ್ ನಂತರ ಭಾರತ ತಂಡ ಹಾಗೂ ಏಕದಿನ ಸ್ವರೂಪಕ್ಕೆ ಮರಳಿದ್ದಾರೆ. ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡುವುದು ಖಚಿತವಾಗಿದೆ. ಅಲ್ಲದೆ ಇವರೇ ವೇಗದ ಬಳಗವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಕೂಡಾ ಏಕದಿನ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬುಮ್ರಾ ಆಡುವ ಸಾಧ್ಯತೆ ಕಡಿಮೆ ಇದ್ದು, ಅವರ ಬದಲಿಗೆ ಅರ್ಷದೀಪ್ ಸಿಂಗ್ ಆಡುವ ಸಾಧ್ಯತೆ ಇದೆ.
ಆಲ್ರೌಂಡರ್ ಕೋಟಾದಲ್ಲಿ ನಾಲ್ವರು ಸ್ಥಾನ ಪಡೆದಿದ್ದಾರೆ. ಈ ಪೈಕಿ ಹಾರ್ದಿಕ್ ಪಾಂಡ್ಯ ಒಬ್ಬರು ವೇಗದ ಆಲ್ರೌಂಡರ್. ಇವರು ನೇರವಾಗಿ ಆಡುವ ಬಳಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅಕ್ಷರ್ ಪಟೇಲ್ ಕೂಡಾ ಸ್ಥಾನ ಪಡೆಯಲಿದ್ದು, ಅನುಭವಿ ಆಟಗಾರ ರವೀಂದ್ರ ಜಡೇಜಾರನ್ನು ಹೊರಗಿಡುವ ಸಾಧ್ಯತೆ ಇದೆ. ಹೀಗಾಗಿ ವಾಷಿಂಗ್ಟನ್ ಸುಂದರ್ ತಂಡಕ್ಕೆ ಎಂಟ್ರಿ ಕೊಡಬಹುದು.
ಚಾಂಪಿಯನ್ಸ್ ಟ್ರೋಫಿಗೆ ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್/ಜಸ್ಪ್ರೀತ್ ಬುಮ್ರಾ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
