ಯಶಸ್ವಿ ಜೈಸ್ವಾಲ್ ಇನ್, ಶಿವಂ ದುಬೆ ಔಟ್; ಯುಎಸ್‌ಎ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
IND vs USA T20 World Cup 2024: ವಿಶ್ವದ ನಂಬರ್ ವನ್ ಟಿ20 ತಂಡ ಭಾರತವು, ಚುಟುಕು ವಿಶ್ವಕಪ್‌ನಲ್ಲಿ ವಿಶ್ವದ 18ನೇ ಶ್ರೇಯಾಂಕಿತ ಆತಿಥೇಯ ಅಮೆರಿಕ ವಿರುದ್ಧ ಸೆಣಸಲು ಸಜ್ಜಾಗಿದೆ. ಮುಂಬರುವ ಪಂದ್ಯಕ್ಕೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಾವಳಿಯಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡುತ್ತಿದೆ. ಐರ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಆಡಿದ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ಮಣಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಬಾಬರ್ ಅಜಮ್ ಬಳಗದ ವಿರುದ್ಧ ರೋಚಕ ಜಯ ಸಾಧಿಸಿತ್ತು. ಇದೀಗ ರೋಹಿತ್ ಶರ್ಮಾ ಬಳಗವು ಆತಿಥೇಯ ಯುಎಸ್‌ಎ ವಿರುದ್ಧ ಸೆಣಸಲು ಸಜ್ಜಾಗಿದೆ. ನಾಳೆ (ಜೂನ್ 12, ಬುಧವಾರ) ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಮೈದಾನದಲ್ಲಿ ಭಾರತ ಮತ್ತು ಅಮೆರಿಕ (India vs USA) ತಂಡಗಳು ವಿಶ್ವಕಪ್ ಗ್ರೂಪ್ ಎ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿದ್ದ ಅಮೆರಿಕ, ಭಾರತದ ಮುಂದೆಯೂ ತೊಡೆ ತಟ್ಟಿ ಆಡಲು ಸಜ್ಜಾಗಿದೆ.
ಇಂಡೋ-ಅಮೆರಿಕ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಸೂಪರ್ 8 ಹಂತಕ್ಕೆ ಪ್ರವೇಶಿಸಲಿದೆ. ಈಗಾಗಲೇ ಈ ಎರಡು ತಂಡಗಳು ತಲಾ 2 ಪಂದ್ಯಗಳಲ್ಲಿ ಗೆದ್ದು, ಮುಂದಿನ ದಾರಿ ಸುಗಮವಾಗಿಸಿಕೊಂಡಿದೆ. ಸದ್ಯ ಮಹತ್ವದ ಪಂದ್ಯಕ್ಕೆ ಉಭಯ ತಂಡಗಳ ಆಡುವ ಬಳಗದಲ್ಲಿ ಬದಲಾವಣೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಐಪಿಎಲ್‌ನಲ್ಲಿ ಅಬ್ಬರಿಸಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ಯುವ ಆಲ್‌ರೌಂಡರ್ ಶಿವಂ ದುಬೆ, ಟೂರ್ನಿಯಲ್ಲಿ ವಿಫಲರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 9 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಅಮೆರಿಕ ವಿರುದ್ಧದ ಪಂದ್ಯದಿಂದ ದುಬೆ ಹೊರಗುಳಿಯುವ ಸಾಧ್ಯತೆ ಇದೆ.
ಶಿವಂ ದುಬೆ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಈವರೆಗೆ ನಡೆದ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ, ಐರ್ಲೆಂಡ್ ಹಾಗೂ ಪಾಕ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಕೊಹ್ಲಿ ರನ್ ಗಳಿಸಲು ವಿಫಲರಾದರು. ಒಂದಂಕಿ ಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಹೀಗಾಗಿ ಭಾರತ ತಂಡಕ್ಕೆ ಉತ್ತಮ ಆರಂಭ ಕೊಡಬಲ್ಲ ಆಟಗಾರನ ಅಗತ್ಯವಿದೆ. ಅದಕ್ಕೆ ಜೈಸ್ವಾಲ್ ಸೂಕ್ತ ವ್ಯಕ್ತಿಯಾಗಿದ್ದಾರೆ.
ವಿಫಲರಾಗಿರುವ ಸಿಎಸ್‌ಕೆ ಆಟಗಾರನನ್ನು ಹೊರಗಿಟ್ಟು, ಆರಂಭಿಕರಾಗಿ ಜೈಸ್ವಾಲ್ ಕಣಕ್ಕಿಳಿಸುವುದು ಸದ್ಯದ ಲೆಕ್ಕಾಚಾರ. ಹೀಗಾಗಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೆ, ಪಂತ್ ನಂತರದ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದಾಗಿದೆ. ಕಠಿಣ ನ್ಯೂಯಾರ್ಕ್ ಪಿಚ್‌ನಲ್ಲಿ ಈವರೆಗಿನ ಎರಡೂ ಪಂದ್ಯಗಳಲ್ಲಿ ಪಂತ್ ನಿರ್ಣಾಯಕ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಪ್ರದರ್ಶನ ತಂಡಕ್ಕೆ ನಿರ್ಣಾಯಕವಾಗಿದೆ. ಉಳಿದಂತೆ ಬೌಲರ್‌ಗಳಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಟೂರ್ನಿಯಲ್ಲಿ ಭಾರತೀಯ ವೇಗಿಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಬುಮ್ರಾ ಎರಡೂ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಪಂದ್ಯಕ್ಕೆ ಭಾರತ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | IND vs PAK: ಕಳಪೆ ಪ್ರದರ್ಶನ ನೀಡಿ ಭಾರತವೇ ಪಾಕಿಸ್ತಾನಕ್ಕೆ ನೆರವಾಯ್ತು, ಆದರೆ...; ರಮೀಜ್ ರಾಜಾ ಟೀಕೆ