ಕೊನೆಗೂ ಅಬ್ಬರಿಸಿದ ವಿರಾಟ್ ಕೊಹ್ಲಿ; ಸೌತ್ ಆಫ್ರಿಕಾ ಚೊಚ್ಚಲ ಟ್ರೋಫಿ ಗೆಲ್ಲಲು ಬೇಕು 177 ರನ್, ಭಾರತ 176/7
India vs South Africa Final : ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 176 ರನ್ ಗಳಿಸಿದೆ. ಸೌತ್ ಆಫ್ರಿಕಾ 177 ರನ್ ಗಳಿಸಬೇಕಿದೆ.
ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಆಟ ಮತ್ತು ಅಕ್ಷರ್ ಪಟೇಲ್ (47) ಅವರ ಸ್ಫೋಟಕ ಆಟದ ನೆರವಿನಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 176 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಆಫ್ರಿಕಾ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲು 177 ರನ್ಗಳ ಗುರಿ ಪಡೆದಿದೆ. ಇದು ಟಿ20 ವಿಶ್ವಕಪ್ ಫೈನಲ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಮೊತ್ತ.
ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿತು. ಆರಂಭಿಕ ಓವರ್ನಲ್ಲೇ ಕೊಹ್ಲಿ 3 ಬೌಂಡರಿ ಮತ್ತು ಎರಡನೇ ಓವರ್ನಲ್ಲಿ ರೋಹಿತ್ ಶರ್ಮಾ 2 ಬೌಂಡರಿ ಸಿಡಿಸಿ ಬಿರುಸಿನ ಆರಂಭ ಪಡೆದರು. ಆದರೆ ನಾಯಕ ರೋಹಿತ್ (9) ಔಟಾಗಿ ನಿರಾಸೆ ಮೂಡಿಸಿದರು. ಟೂರ್ನಿಯದ್ದಕ್ಕೂ ಅಬ್ಬರಿಸಿ ಫೈನಲ್ನಲ್ಲಿ ಮುಗ್ಗರಿಸಿದರು. ಕೇಶವ್ ಮಹಾರಾಜ್ ಎಸೆದ ಎರಡನೇ ಓವರ್ನಲ್ಲೇ ರಿಷಭ್ ಪಂತ್ ಡಕೌಟ್ ಆಗಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ದಕ್ಷಿಣ ಆಫ್ರಿಕಾ ಭರ್ಜರಿ ಮುನ್ನಡೆ ಪಡೆಯಿತು. 2 ಓವರ್ ಮುಕ್ತಾಯಕ್ಕೆ 23 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು.
ತದನಂತರ ಸೂರ್ಯಕುಮಾರ್ ಭಾರತ ತಂಡವನ್ನು ರಕ್ಷಿಸುವ ಭರವಸೆ ಮೂಡಿಸಿದ್ದರು. ಆದರೆ, ಆತನೂ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸೂರ್ಯಕುಮಾರ್ 4 ಎಸೆತಗಳಲ್ಲಿ 3 ರನ್ ಗಳಿಸಿ ಪವರ್ಪ್ಲೇನಲ್ಲೇ ಔಟಾದರು. ಇದರೊಂದಿಗೆ ಭಾರತ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಐದನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸಲಾಯಿತು. ಪವರ್ಪ್ಲೇನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತು. ಆಗ ಕೊಹ್ಲಿ 25 ರನ್ ಗಳಿಸಿದ್ದರು. ತದನಂತರ ಕೊಹ್ಲಿ ಮತ್ತು ಅಕ್ಷರ್ ಜವಾಬ್ದಾರಿಯುತ ಆಟಕ್ಕೆ ಒತ್ತು ಕೊಟ್ಟರು.
ವಿರಾಟ್ - ಅಕ್ಷರ್ ಮಿಂಚು
ವಿರಾಟ್ ಮತ್ತು ಅಕ್ಷರ್ ಸೌತ್ ಆಫ್ರಿಕಾ ಬೌಲರ್ಗಳ ಎದುರು ದಿಟ್ಟ ಹೋರಾಟ ನಡೆಸಿದರು. ಅಕ್ಷರ್ ಸಿಕ್ಸರ್ಗಳ ಸುರಿಮಳೆಗೈದರೆ, ಕೊಹ್ಲಿ ಸಿಂಗಲ್, ಡಬಲ್ ಮೂಲಕ ಸ್ಟ್ರೈಕ್ ರೋಟೆಟ್ ಮಾಡಿದರು. ಅಲ್ಲದೆ, ಈ ಜೋಡಿ 4ನೇ ವಿಕೆಟ್ಗೆ ಭರ್ಜರಿ ಅರ್ಧಶತಕದ ಜೊತೆಯಾಟವಾಡಿತು. ಆರಂಭದಲ್ಲಿ ಮಿಂಚಿದ ಬೌಲರ್ಗಳು ನಂತರ ದಂಡಿಸಿಕೊಂಡರು. ಇದೇ ವೇಳೆ ಅಕ್ಷರ್ ಪಟೇಲ್ ಅನಗತ್ಯ ರನ್ ಓಡಲು ಯತ್ನಿಸಿ ರನೌಟ್ ಆದರು. 31 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 47 ರನ್ ಗಳಿಸಿದರು.
ವಿರಾಟ್ ಕೊಹ್ಲಿ ಅರ್ಧಶತಕ
ಟೂರ್ನಿಯುದ್ದಕ್ಕೂ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ವಿಕೆಟ್ ಕಾಪಾಡುವುದರ ಜೊತೆಗೆ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಕೊನೆಗೂ ಅರ್ಧಶತಕ ಸಿಡಿಸಿ ಮಿಂಚಿದರು. 47 ಎಸೆತಗಳಲ್ಲಿ 50 ರನ್ ಬಾರಿಸಿದರು. ಟೂರ್ನಿಯಲ್ಲಿ ಅವರ ಮೊದಲ ಅರ್ಧಶತಕವಾಗಿದೆ. ನಂತರ ಶಿವಂ ದುಬೆ ಕಣಕ್ಕಿಳಿದು ಬಿರುಸಿನ ಬ್ಯಾಟಿಂಗ್ ನಡೆಸಿದರು. ಹಾಫ್ ಸೆಂಚುರಿ ಬಳಿಕ ಕೊಹ್ಲಿ ಕೂಡ ಬ್ಯಾಟಿಂಗ್ ವೇಗವವನ್ನು ಹೆಚ್ಚಿಸಿದರು. ಈ ಜೋಡಿ ಕೂಡ ಹಾಫ್ ಸೆಂಚುರಿ ಜೊತೆಯಾಟವಾಡಿತು.
ಆದರೆ ಕೊಹ್ಲಿ 19ನೇ ಓವರ್ನಲ್ಲಿ ಔಟಾದರು. 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 76 ರನ್ ಗಳಿಸಿ ಮಾರ್ಕೋ ಜಾನ್ಸನ್ ಬೌಲಿಂಗ್ನಲ್ಲಿ ರಬಾಡೆ ಕ್ಯಾಚ್ ನೀಡಿದರು. ಉಳಿದ ಕೊನೆಯ ಓವರ್ನಲ್ಲಿ 9 ರನ್ ಬಂತು. ಶಿವಂ ದುಬೆ 27ರನ್, ಹಾರ್ದಿಕ್ ಪಾಂಡ್ಯ 5 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಆಫ್ರಿಕಾ ಪರ ಕೇಶವ್ ಮಹಾರಾಜ್, ನೋಕಿಯಾ ತಲಾ 2 ವಿಕೆಟ್, ರಬಾಡ ಮತ್ತು ಜಾನ್ಸನ್ ತಲಾ 1 ವಿಕೆಟ್ ಪಡೆದರು.
