ರೋಹಿತ್ ಶರ್ಮಾ ಔಟ್, ಜಸ್ಪ್ರೀತ್ ಬುಮ್ರಾ ನಾಯಕ; ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದ ಗೆಲ್ಲುವು ಭಾರತ ತಂಡಕ್ಕೆ ಅನಿವಾರ್ಯವಾಗಿದೆ. ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವುದು ಒಂದೆಡೆಯಾದರೆ, ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲು ಈ ಗೆಲುವು ತಂಡಕ್ಕೆ ಅಗತ್ಯವಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ನಡೆದಿದ್ದು, ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯವು ಜನವರಿ 3ರ ಶುಕ್ರವಾರದಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ, ಆ ನಂತರದ ಮೂರು ಪಂದ್ಯಗಳಲ್ಲಿ ದಿಟ್ಟ ಹೋರಾಟ ನಡೆಸುವಲ್ಲಿ ವಿಫಲವಾಗಿದೆ. ಅನುಭವಿ ಬ್ಯಾಟರ್‌ಗಳು ತಂಡಕ್ಕೆ ಬಲ ತುಂಬುತ್ತಿಲ್ಲ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಆಡುವ 11ರ ಬಳಗದಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಎಂಸಿಜಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ 184 ರನ್‌ಗಳಿಂದ ಗೆದ್ದಿತು. ಸೋಲಿನ ನಂತರ, ಟೀಮ್ ಇಂಡಿಯಾ ಆಡುವ ಬಳಗದ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿವೆ. ತಂಡದ ಕುರಿತು ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದರಲ್ಲಿ ಪ್ರಮುಖವಾಗಿ ನಾಯಕನನ್ನು ಹೊರಗಿಡುವುದು. ಜೊತೆಗೆ ಕೆಲ ಬೌಲರ್‌ಗಳನ್ನು ಕೈಬಿಡುವುದು.
ಸಿಡ್ನಿ ಟೆಸ್ಟ್ ಗೆಲುವು ಎರಡು ಕಾರಣದಿಂದ ಭಾರತಕ್ಕೆ ಪ್ರಮುಖವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅರ್ಹತೆ ಪಡೆಯುವ ಆಸೆ ಜೀವಂತವಾಗಿರಬೇಕಾದರೆ, ಅಂತಿಮ ಟೆಸ್ಟ್ ಗೆಲ್ಲಲೇಬೇಕಾಗಿದೆ. ಇನ್ನೊಂದು ಕಡೆ, ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನಲ್ಲೇ ಉಳಿಯಲು ಈ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ತಂಡದ ಆಡುವ 11ರ ಬಳಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಸಕಾರಾತ್ಮಕ ಪರಿಣಾಮ ಬೀರಲಿದೆ.
ರೋಹಿತ್ ಶರ್ಮಾರನ್ನು ಕೈಬಿಡುವುದು
ಪರ್ತ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿತ್ತು. ಆಗ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿದ್ದರು. ಆದರೆ, ನಾಯಕನಾಗಿ ರೋಹಿತ್ ಶರ್ಮಾ ತಂಡಕ್ಕೆ ಮರಳಿದ ಬಳಿಕ ತಂಡ ಗೆಲುವೇ ಕಾಣದಂತಾಗಿದೆ. ಅಲ್ಲದೆ ಹಿಟ್‌ಮ್ಯಾನ್ ಕೂಡಾ ಸತತ ಒಂದಂಕಿ ಮೊತ್ತ ಗಳಿಸುವ ಮೂಲಕ ತೀರಾ ಕಳಪೆ ಫಾರ್ಮ್‌ನಲ್ಲಿದ್ದಾರೆ. ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಕೇವಲ 31 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ, ಪಾಕಿಸ್ತಾನ ತಂಡ ತನ್ನ ನಾಯಕನನ್ನು ಕೈಬಿಟ್ಟಂತೆ ರೋಹಿತ್ ಶರ್ಮಾ ಅವರನ್ನು ಆಡುವ ಬಳಗದಿಂದ ಹೊರಗಿಡುವ ಸಾಧ್ಯತೆ ದಟ್ಟವಾಗಿದೆ. ಸತತ ವೈಫಲ್ಯಗಳ ಹೊರತಾಗಿಯೂ, ನಾಯಕನಾಗಿರುವ ಕಾರಣದಿದಾಗಿ ರೋಹಿತ್ ಆಡುವ ಬಳಗದ ಭಾಗವಾಗಿದ್ದಾರೆ. ಇವರ ಬದಲು ಬೇರೆ ಅರ್ಹ ಆಟಗಾರನಿಗೆ ಸ್ಥಾನ ನೀಡಬಹುದು. ರೋಹಿತ್ ಅವರನ್ನು ಕೈಬಿಟ್ಟು ಜಸ್ಪ್ರೀತ್ ಬುಮ್ರಾಗೆ ನಾಯಕತ್ವವನ್ನು ಹಸ್ತಾಂತರಿಸುವುದು ಭಾರತದ ಮುಂದಿರುವ ಮೊದಲ ಆಯ್ಕೆ.
ಕೆಎಲ್ ರಾಹುಲ್ ಮತ್ತೆ ಓಪನಿಂಗ್
ಯಶಸ್ವಿ ಜೈಸ್ವಾಲ್ ಜೊತೆಗೂಡಿ ಕೆಎಲ್ ರಾಹುಲ್ ಮತ್ತೆ ಇನ್ನಿಂಗ್ಸ್ ಆರಂಭಿಸಬಹುದು. ಮಧ್ಯಮ ಕ್ರಮಾಂಕಕ್ಕೆ ಶುಭ್ಮನ್ ಗಿಲ್ ಅವರನ್ನು ಮರಳಿ ಆಡಿಸಿದರೆ, ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಪರ್ತ್‌ನಲ್ಲಿ ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ ಕೂಡ ರನ್‌ಗಳಿಗಾಗಿ ಹೆಣಗಾಡುತ್ತಿದ್ದಾರೆ. ಆದರೆ ಆಡುವ ಬಳಗದಲ್ಲಿ ಕೊಹ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇಲ್ಲ. ರಿಷಬ್ ಪಂತ್ ಕೂಡಾ ತಂಡದಲ್ಲಿ ಉಳಿಯಲಿದ್ದಾರೆ.
ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಮತ್ತೆ ಮುಂದುವರೆಯಲಿದ್ದಾರೆ. ಇವರಲ್ಲಿ ನಿತೀಶ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇಲ್ಲ. ಎಂಸಿಜಿ ಟೆಸ್ಟ್‌ನಲ್ಲಿ ನಿತೀಶ್ ಅದ್ಭುತ ಶತಕ ಗಳಿಸಿ ದಾಖಲೆ ಬರೆದಿದ್ದರು. ಅತ್ತ, ಸಿಡ್ನಿ ಪಿಚ್ ಆಗಾಗ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಹೀಗಾಗಿ ಕನಿಷ್ಠ ಇಬ್ಬರು ಸ್ಪಿನ್ನರ್‌ಗಳ ಅಗತ್ಯ ತಂಡಕ್ಕಿದೆ. ಜಸ್ಪ್ರೀತ್ ಬುಮ್ರಾ ಭಾರತದ ವೇಗದ ದಾಳಿಯ ಜೊತೆಗೆ ತಂಡವನ್ನು ಮುನ್ನಡೆಸಲಿದ್ದಾರೆ. ಅವರಿಗೆ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಸಾಥ್ ನೀಡಲಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ನಾಯಕ), ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope