ರೋಹಿತ್ ಶರ್ಮಾ ನಾಯಕ, ಶಮಿ-ಪಾಂಡ್ಯ ಕಂಬ್ಯಾಕ್, ನಿತೀಶ್‌ಗೆ ಸ್ಥಾನ; ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುವುದು ಬಹುತೇಕ ಖಚಿತ. ಇದೇ ವೇಳೆ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ತಂಡಕ್ಕೆ ಕಂಬ್ಯಾಕ್ ಮಾಡಲು ಕಾಯುತ್ತಿದ್ದಾರೆ. ಈ ಬಾರಿ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಮುಕ್ತಾಯವಾಗಿದ್ದು, ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ವಿಫಲವಾಗಿದೆ. ಮುಂದೆ ಟೀಮ್ ಇಂಡಿಯಾ ತಂಡವು ಇಂಗ್ಲೆಂಡ್ ವಿರುದ್ಧದ ವೈಟ್ ಬಾಲ್ ಸರಣಿ ಆಡಲು ಸಜ್ಜಾಗಿದೆ. ಜನವರಿ 22ರಿಂದ ಐದು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆದರೆ, 2025ರಲ್ಲಿ ನಡೆಯುವ ಮಹತ್ವದ ಐಸಿಸಿ ಟೂರ್ನಿ ಎಂದರೆ ಚಾಂಪಿಯನ್ಸ್ ಟ್ರೋಫಿ. ಹೀಗಾಗಿ ಏಕದಿನ ಕ್ರಿಕೆಟ್‌ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಚಾಂಪಿಯನ್ಸ್ ಟ್ರೋಫಿಗೆ ತಂಡ ಘೋಷಣೆಗೆ ಒಂದು ವಾರದ ಗಡುವು ಇದೆ. ಹೀಗಾಗಿ ಈ ತಿಂಗಳೊಳಗೆ ಬಿಸಿಸಿಐ ತಂಡವನ್ನು ಅಂತಿಮಗೊಳಿಸಲಿದೆ.
ಭಾರತವು 2024ರ ಕ್ಯಾಲೆಂಡರ್ ವರ್ಷದಲ್ಲಿ ಕೇವಲ ಮೂರು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಿದೆ. 2023ರ ಏಕದಿನ ವಿಶ್ವಕಪ್ ಮುಗಿದ ಬಳಿಕ ಈ ಸ್ವರೂಪಕ್ಕೆ ಹೆಚ್ಚು ಒತ್ತು ನೀಡಿಲ್ಲ. ಹೀಗಾಗಿ ತಂಡವನ್ನು ಆಯ್ಕೆಮಾಡುವಲ್ಲಿ ಆಯ್ಕೆದಾರರಿಗೆ ಕಠಿಣ ಸವಾಲು ಇರಲಿದೆ. ಅಲ್ಲದೆ ಅನುಭವಿ ಆಟಗಾರರು ಫಾರ್ಮ್ ಸಮಸ್ಯೆ ಎದುರಿಸುತ್ತಿರುವುದು ಕಾಳಜಿಯ ವಿಷಯವಾಗಿದೆ.
ಫೆಬ್ರುವರಿಯಲ್ಲಿ ತವರಿನಲ್ಲಿಯೇ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡುತ್ತಿರುವುದು ಭಾರತ ತಂಡಕ್ಕೆ ಅಭ್ಯಾಸ ಪಂದ್ಯದಂತಾಗಲಿದೆ. ಈ ಸರಣಿಯು, ಚಾಂಪಿಯನ್ಸ್ ಟ್ರೋಫಿಗೆ ತಂಡದ ಆಯ್ಕೆಯ ಗಡುವಿನ ನಂತರ ನಡೆಯಲಿದೆ. ಹೀಗಾಗಿ ದ್ವಿಪಕ್ಷೀಯ ಸರಣಿ ಮತ್ತು ಮೆಗಾ ಈವೆಂಟ್‌ಗೆ ಬಿಸಿಸಿಐ ಒಂದೇ ಬಾರಿ ತಂಡವನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ. ಅಲ್ಲದೆ ತಂಡದಲ್ಲಿ ಹೆಚ್ಚು ಬದಲಾವಣೆಯನ್ನೂ ನಿರೀಕ್ಷಿಸುವಂತಿಲ್ಲ. ಏಕೆಂದರೆ ಆಡುವ ಬಳಗವನ್ನು ಅಂತಿಮಗೊಳಿಸುವ ಸವಾಲು ಆಯ್ಕೆದಾರರ ಮೇಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜನವರಿ 11ರಂದು ತಂಡವನ್ನು ಪ್ರಕಟಿಸುವ ನಿರೀಕ್ಷೆ ಇದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಜನವರಿ 12ರೊಳಗೆ ತಮ್ಮ ಅಂತಿಮ ತಂಡವನ್ನು ಸಲ್ಲಿಸುವ ನಿರೀಕ್ಷೆಯಿದೆ.
ರೋಹಿತ್ ಶರ್ಮಾ ನಾಯಕ
ಕಳಪೆ ಫಾರ್ಮ್‌ನ ಹೊರತಾಗಿಯೂ, ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ. ಇದೇ ವೇಳೆ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಕೈಬಿಡುವುದು ಕೂಡಾ ಕಷ್ಟ ಸಾಧ್ಯ. ಕೊಹ್ಲಿಯ ನೆಚ್ಚಿನ ಸ್ವರೂಪದ ಆಟ ಏಕದಿನ ಕ್ರಿಕೆಟ್. ಈ ಸ್ವರೂಪದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನನ್ನು ತಂಡದ ಹೊರಗಿಡುವುದು ಕಷ್ಟ.
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಈಗಾಗಲೇ ತಾನು ಟಿ20 ಹಾಗೂ ಟೆಸ್ಟ್ ಸ್ವರೂಪದಲ್ಲೂ ತಾನೊಬ್ಬ ಅತ್ಯುತ್ತಮ ಬ್ಯಾಟರ್ ಎಂಬುದನ್ನು ತೋರಿಸಿದ್ದಾರೆ. ಆದರೆ, ಅವರು ಇನ್ನೂ ಏಕದಿನ ಪಂದ್ಯ ಆಡಿಲ್ಲ. ಅವರನ್ನು ಈಗ ಆಯ್ಕೆ ಮಾಡುವ ಸಾಧ್ಯತೆ ಇಲ್ಲ. ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಜೊತೆಗಿದ್ದ ಶುಭ್ಮನ್ ಗಿಲ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದು. ಏಕದಿನ ಸ್ವರೂಪದಲ್ಲಿ ಗಿಲ್ ಫಾರ್ಮ್ ಉತ್ತಮವಾಗಿದ್ದು, 58.2ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಶ್ರೇಯಸ್ ಅಯ್ಯರ್-ಕೆಎಲ್ ರಾಹುಲ್ ಆಯ್ಕೆ
ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರ ಶ್ರೇಯಸ್ ಅಯ್ಯರ್. ಇತರ ಎರಡು ಸ್ವರೂಪಗಳಲ್ಲಿ ಅವರು ತಂಡದಲ್ಲಿರದಿದ್ದರೂ, ಏಕದಿನ ಕ್ರಿಕೆಟ್‌ಗೆ ಅವರನ್ನು ನಿರ್ಲಕ್ಷಿಸುವುದು ಕಷ್ಟ. ಹೀಗಾಗಿ ಅವರು ನಾಲ್ಕನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು. ತಂಡಕ್ಕೆ ಕಷ್ಟಕಾಲದಲ್ಲಿ ಆಸರೆಯಾಗುವ ಆಪದ್ಬಾಂಧವ ಕೆಎಲ್ ರಾಹುಲ್. ಈ ಬಾರಿ ಕನ್ನಡಿಗನಿಗೆ ರಿಷಬ್ ಪಂತ್ ಪೈಪೋಟಿ ನೀಡಲಿದ್ದಾರೆ. ಜೊತೆಗೆ ಸಂಜು ಸ್ಯಾಮ್ಸನ್ ಕೂಡಾ ವಿಕೆಟ್ ಕೀಪರ್ ಸ್ಥಾನಕ್ಕೆ ನಾನಿದ್ದೇನೆ ಎಂದು ಮುಂದೆ ಬರಲಿದ್ದಾರೆ.
ಹಾರ್ದಿಕ್‌ಗೆ ನಿತೀಶ್ ರೆಡ್ಡಿ ಬ್ಯಾಕಪ್
2023ರ ಏಕದಿನ ವಿಶ್ವಕಪ್ ಸಮಯದಲ್ಲಿ ಗಾಯಗೊಂಡ ನಂತರ, ಹಾರ್ದಿಕ್ ಪಾಂಡ್ಯ ಯಾವುದೇ ಏಕದಿನ ಕ್ರಿಕೆಟ್ ಆಡಿಲ್ಲ. ಆದರೆ ಸ್ಟಾರ್ ಆಲ್‌ರೌಂಡರ್‌ಗೆ ಆಯ್ಕೆದಾರರರು ಮಣೆ ಹಾಕಲಿದ್ದಾರೆ. ಫಿಟ್ ಆಗಿದ್ದರೆ ಪಾಂಡ್ಯ ಆಯ್ಕೆ ಬಹುತೇಕ ಖಚಿತ. ಒಂದು ವೇಳೆ ಪಾಂಡ್ಯಗೆ ಬ್ಯಾಕ್‌ಅಪ್ ಆಟಗಾರನಿದ್ದರೆ, ಉದಯೋನ್ಮುಖ ಆಟಗಾರ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗಬಹುದು.
ಸ್ಪಿನ್ನರ್ ವಿಚಾರಕ್ಕೆ ಬಂದರೆ, ಕುಲ್ದೀಪ್ ಯಾದವ್ ಮೊದಲ ಆಯ್ಕೆಯ ಮಣಿಕಟ್ಟಿನ ಸ್ಪಿನ್ನರ್ ಆಗಬಹುದು. ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಇನ್ನಷ್ಟೇ ಫಿಟ್ ಆಗಬೇಕಿದೆ. ಇವರ ಅನುಪಸ್ಥಿತಿಯಲ್ಲಿ ರವಿ ಬಿಷ್ಣೋಯ್ ಆಯ್ಕೆಯಾಗಬಹುದು. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಂಡದ ಆದ್ಯತೆ ಸ್ಪಿನ್ ಆಲ್‌ರೌಂಡರ್‌ಗಳು. ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡಬಹುದು. ಇವರಲ್ಲಿ ಜಡೇಜಾ ಮತ್ತು ಅಕ್ಸರ್ ಆಯ್ಕೆಯಾಗಬಹುದು.
2023ರ ವಿಶ್ವಕಪ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದ ವೇಗಿಗಳು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್. ಶಮಿ ಫಿಟ್ ಆದರೆ, ತಂಡಕ್ಕೆ ಆಯ್ಕೆಯಾಗುವುದು ಖಚಿತ. ವಿಶ್ವಕಪ್ ನಂತರ ಶಮಿ ಭಾರತದ ಪರ ಆಡಿಲ್ಲ. ಈ ಬಾರಿ ತಂಡಕ್ಕೆ ಕಂಬ್ಯಾಕ್ ಮಾಡಲು ಕಾಯುತ್ತಿದ್ದಾರೆ. ಇವರಿಗೆ ಅರ್ಷದೀಪ್ ಸಿಂಗ್ ಬ್ಯಾಕಪ್ ಆಟಗಾರನಾಗಿ ಇರಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್/ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.