ರೋಹಿತ್ ಶರ್ಮಾ ಓಪನಿಂಗ್, ಗಿಲ್ ಬದಲಿಗೆ 3ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್; ಬಾಕ್ಸಿಂಗ್ ಡೇ ಟೆಸ್ಟ್‌ಗೆ ಭಾರತ ಆಡುವ ಬಳಗ
ಎಂಸಿಜಿಯಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ಶುಭ್ಮನ್ ಗಿಲ್ ಬದಲಿಗೆ ಕೆಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮತ್ತೆ ಮಹತ್ವದ ಬದಲಾವಣೆಯಾಗಲಿದೆ. ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರೊಂದಿಗೆ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಬದಲಿ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕಾದ ಸಂದರ್ಭ ಬರುತ್ತಿದೆ. ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ಡಿಸೆಂಬರ್ 26ರ ಗುರುವಾರ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹೀಗಾಗಿ ಕೆಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸಕ್ತ ಆವೃತ್ತಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ, ಬೇರೆ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬಂದಿಲ್ಲ. ಹೀಗಾಗಿ ಆಡುವ ಬಳಗದಲ್ಲಿ ಮಹತ್ವದ ಬದಲಾಣೆ ಮಾಡಿದರೂ ಅಚ್ಚರಿಯಿಲ್ಲ. ತಂಡದ ಭರವಸೆಯ ಬ್ಯಾಟರ್ ಶುಭ್ಮನ್ ಗಿಲ್ ಕೂಡಾ ಫಾರ್ಮ್‌ನಲ್ಲಿಲ್ಲ. 2021ರಲ್ಲಿ ಭಾರತದ ಹೊರಗೆ ಕೊನೆಯ ಟೆಸ್ಟ್ ಅರ್ಧಶತಕ ಗಳಿಸಿರುವ ಶುಭ್ಮನ್ ಗಿಲ್, ತಮ್ಮ ಮೂರನೇ ಕ್ರಮಾಂಕವನ್ನು ರಾಹುಲ್‌ಗೆ ಬಿಟ್ಟುಕೊಡಬೇಕಾಗ ಬರುತ್ತಿದೆ. ಇದರ ಬದಲಿಗೆ ಗಿಲ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕಾಗುತ್ತದೆ.
ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿರುವ ರೋಹಿತ್, ಭಯಾನಕ ಪ್ರದರ್ಶನ ನೀಡಿದ್ದಾರೆ. ಆರನೇ ಕ್ರಮಾಂಕದಲ್ಲಿ ಆಡಿರುವ ರೋಹಿತ್ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 19 ರನ್ ಮಾತ್ರ ಕಲೆ ಹಾಕಿದ್ದಾರೆ. ಇದರ ಹೊರತಾಗಿಯೂ, ಅವರು ಆರನೇ ಕ್ರಮಾಂಕದಲ್ಲಿ ಆಡಿದ 18 ಟೆಸ್ಟ್ ಪಂದ್ಯಗಳಲ್ಲಿ 48.00ರ ಸರಾಸರಿ ಹೊಂದಿದ್ದಾರೆ.
ತವರು ನೆಲದಲ್ಲಿ ನಡೆದ ಬಾಂಗ್ಲಾದೇಶ ಸರಣಿಯೊಂದಿಗೆ, ಪ್ರಸಕ್ತ ಟೆಸ್ಟ್ ಋತುವಿನಲ್ಲಿ ಹಿಟ್‌ಮ್ಯಾನ್ ಕಳಪೆ ಪ್ರದರ್ಶನ ಮುಂದುವರೆದಿದೆ. ಕೊನೆಯ ಏಳು ಪಂದ್ಯಗಳಲ್ಲಿ 11.69ರ ಸರಾಸರಿಯಲ್ಲಿ ಕೇವಲ 152 ರನ್ ಮಾತ್ರ ಗಳಿಸಿದ್ದಾರೆ. ಈ ವರ್ಷ ಅವರು 13 ಟೆಸ್ಟ್‌ನ 24 ಇನ್ನಿಂಗ್ಸ್‌ಗಳಲ್ಲಿ 26.39ರ ಸರಾಸರಿಯಲ್ಲಿ 607 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 131 ರನ್.
ರೋಹಿತ್ ಶರ್ಮಾ ಏನಂದ್ರು?
“ಯಾರು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡಿ. ನಾವು ಇಲ್ಲಿ ಚರ್ಚಿಸಬೇಕಾದ ವಿಷಯ ಅದಲ್ಲ. ತಂಡಕ್ಕೆ ಯಾವುದೇ ಉತ್ತಮವೋ ನಾವು ಅದನ್ನು ಮಾಡುತ್ತೇವೆ,” ಎಂದು ರೋಹಿತ್ ತಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ಪಂದ್ಯಗಳ ಬಳಿಕ ಸರಣಿಯು 1-1ರಿಂದ ಸಮಬಲಗೊಂಡಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು, ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ ತಂಡಕ್ಕೂ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ಅಗತ್ಯವಿದೆ.
ಭಾರತ ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ / ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.