ಅಂಡರ್-19 ವಿಶ್ವಕಪ್ ಫೈನಲ್ ತಲುಪಿದ ಭಾರತ; ಕ್ರಿಕೆಟ್ ಇತಿಹಾಸದಲ್ಲೇ ಈ ದಾಖಲೆ ಬರೆದ ಮೊದಲ ಪುರುಷರ ತಂಡ
U19 World Cup 2024 : ಅಂಡರ್-19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ಸತತ 5ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ವಿಶ್ವದಾಖಲೆ ಬರೆದಿದೆ.
ಉದಯ್ ಸಹರನ್ ನೇತೃತ್ವದ ಭಾರತ ತಂಡ (Team India) ಮಂಗಳವಾರ (ಫೆಬ್ರವರಿ 6) ಐಸಿಸಿ ಅಂಡರ್-19 ವಿಶ್ವಕಪ್ 2024 (ICC World Cup 2024) ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಬೆನೊನಿಯ ವಿಲೋಮೋರ್ ಪಾರ್ಕ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ, ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ 2 ವಿಕೆಟ್‌ಗಳ ಜಯ ದಾಖಲಿಸಿತು. ಅಲ್ಲದೆ, ವಿಶ್ವ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿ ದಕ್ಷಿಣ ಆಫ್ರಿಕಾ ತನ್ನ ಸ್ಕೋರ್ ಬೋರ್ಡ್‌ನಲ್ಲಿ ಒಟ್ಟು 245 ಪೋಸ್ಟ್ ಮಾಡಿತು. ನಂತರ ಮೆನ್ ಇನ್ ಬ್ಲೂ ರಣ ರೋಚಕ ಹೋರಾಟ ನಡೆಸಿತು. ಭಾರತದ ಅಗ್ರ ಕ್ರಮಾಂಕ 32ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು. ದೊಡ್ಡ ತೊಂದರೆಗೆ ಸಿಲುಕಿದ್ದ ಭಾರತಕ್ಕೆ ಕೊನೆಗೂ ಪಾರಾಯಿತು. ನಾಯಕ ಉದಯ್ ಸಹರನ್ ಮತ್ತು ಸಚಿನ್ ದಾಸ್ ಅವರ ಅಮೋಘ ಆಟದಿಂದ ಗೆಲುವಿನ ನಗೆ ಬೀರಿತು.
ನಾಯಕ ಸಹರನ್ ಮತ್ತು ಬಲಗೈ ಬ್ಯಾಟರ್ ಸಚಿನ್ ಅವರು 5ನೇ ವಿಕೆಟ್ಗೆ 171 ರನ್‌ಗಳ ಅದ್ಭುತ ಜೊತೆಯಾಟವಾಡಿ ದಾಖಲೆ ಬರೆದರು. ಅಲ್ಲದೆ, ಭಾರತ ತಂಡವನ್ನು ಸೋಲಿನಿಂದ ಗೆಲುವಿನ ಟ್ರ್ಯಾಕ್‌ಗೆ ಸೇರಿಸಿದರು. ಆದರೆ ದಾಸ್ ಕೇವಲ 4ರನ್‌ಗಳ ಅಂತರದಿಂದ ಶತಕ ವಂಚಿತರಾದರು. ಕೈಯಲ್ಲಿ 2 ವಿಕೆಟ್, ಎಂಟು ಎಸೆತಗಳು ಬಾಕಿ ಇರುವಂತೆಯೇ ಭಾರತ ಗೆದ್ದು ಫೈನಲ್ಗೆ ಅದ್ಧೂರಿ ಪ್ರವೇಶ ನೀಡಿತು.
ಬೃಹತ್ ಸಾಧನೆ ಮಾಡಿದ ಮೊದಲ ತಂಡ ಭಾರತ
ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ 2016ರಿಂದ 2024ರವರೆಗೂ ಸತತ 5ನೇ ಆವೃತ್ತಿಯಲ್ಲೂ ಭಾರತ ಫೈನಲ್ಗೆ ಪ್ರವೇಶಿಸಿದೆ. 2016ರಲ್ಲಿ ಇಶಾನ್ ಕಿಶನ್ ನೇತೃತ್ವದ ನಾಯಕತ್ವದಲ್ಲಿ, 2018ರಲ್ಲಿ ಪೃಥ್ವಿ ಶಾ, 2020ರಲ್ಲಿ ಪ್ರಿಯಂ ಗರ್ಗ್, 2022ರಲ್ಲಿ ಯಶ್ ಧುಲ್ ಅವರ ಸಾರಥ್ಯದಲ್ಲಿ ಭಾರತ ಫೈನಲ್ಗೆ ಎಂಟ್ರಿಕೊಟ್ಟಿತ್ತು. 2018 ಮತ್ತು 2022ರಲ್ಲಿ ಚಾಂಪಿಯನ್ ಆದರೆ, ಭಾರತ 2016 ಮತ್ತು 2020ರಲ್ಲಿ ರನ್ನರ್ಅಪ್ ಆಗಿತ್ತು.
ಇದೀಗ ಸತತ 5ನೇ ಬಾರಿಗೆ ಉದಯ್ ಸಹರನ್ ನೇತೃತ್ವದಲ್ಲಿ ಫೈನಲ್ ಪ್ರವೇಶಿಸಿ ದಾಖಲೆ ಬರೆದಿದೆ. ಅಲ್ಲದೆ, ಭಾರತ 6ನೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. ಸದ್ಯ ಭಾರತ ಸತತ ಐದನೇ ಬಾರಿಗೆ ಪುರುಷರ ಐಸಿಸಿ ಈವೆಂಟ್ ಪ್ರಶಸ್ತಿಯ ಫೈನಲ್ ತಲುಪಿದ ಮೊದಲ ತಂಡವಾಗಿದೆ. ಹಿಂದೆ ಆಸ್ಟ್ರೇಲಿಯಾ ಸತತವಾಗಿ 4 ಬಾರಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಫೈನಲ್ ತಲುಪಿ (1996, 1999, 2003, ಮತ್ತು 2007) ದಾಖಲೆ ಬರೆದಿತ್ತು. ಈ ದಾಖಲೆಯನ್ನು ಯಂಗ್ ಇಂಡಿಯಾ ಅಳಿಸಿ ಹಾಕಿತ್ತು.
ಮಹಿಳಾ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಹೊಸ ದಾಖಲೆ ಬರೆದಿದೆ. 2010ರಿಂದ ಸತತ 7 ಬಾರಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಸ್ಟ್ರೇಲಿಯಾದ ಮಹಿಳಾ ತಂಡದ ನಂತರ ಭಾರತವು 3ನೇ ಬಾರಿ ಈ ಸಾಧನೆ ಮಾಡಿದೆ. 1973, 1978, 1982, ಮತ್ತು 1988ರಲ್ಲಿ ಆಸೀಸ್ ಮಹಿಳಾ ತಂಡ, 1973, 1978, 1982, 1998, ಮತ್ತು 1993ರಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಸತತ ಏಕದಿನ ವಿಶ್ವಕಪ್ ಆಡಿತ್ತು.
ಒಟ್ಟು 9 ಬಾರಿ ಭಾರತ ಫೈನಲ್ಗೆ
ಸತತ 5 ಬಾರಿ ಸೇರಿ ಭಾರತ ಒಟ್ಟು 9 ಬಾರಿ ಅಂಡರ್-19 ವಿಶ್ವಕಪ್ ಫೈನಲ್ ತಲುಪಿದೆ. 2024 ಸೇರಿ ಟೀಮ್ ಇಂಡಿಯಾ ಈ ಹಿಂದೆ 2000, 2006, 2008, 2012, 2016, 2018, 2020 ಮತ್ತು 2022ರಲ್ಲಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಆಡಿದೆ. ಆ ಮೂಲಕ ಅಂಡರ್-19 ವಿಶ್ವಕಪ್ನಲ್ಲಿ ಭಾರತ ಕಿರಿಯರ ತಂಡ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ವಿಶ್ವದ ಮೊದಲ ತಂಡ ಎಂಬ ವಿಶ್ವ ದಾಖಲೆ ಬರೆದಿದೆ.
1988 ರಿಂದ 2022 ಅಂಡರ್-19 ವಿಶ್ವಕಪ್ ಗೆದ್ದ ಮತ್ತು ರನ್ನರ್ಅಪ್ ತಂಡಗಳ ಪಟ್ಟಿ | ||
---|---|---|
ವರ್ಷ | ವಿಜೇತ | ರನ್ನರ್ಅಪ್ |
2022 | ಭಾರತ | ಇಂಗ್ಲೆಂಡ್ |
2020 | ಬಾಂಗ್ಲಾದೇಶ | ಭಾರತ |
2018 | ಭಾರತ | ಆಸ್ಟ್ರೇಲಿಯಾ |
2016 | ವೆಸ್ಟ್ ಇಂಡೀಸ್ | ಭಾರತ |
2014 | ದಕ್ಷಿಣ ಆಫ್ರಿಕಾ | ಪಾಕಿಸ್ತಾನ |
2012 | ಭಾರತ | ಆಸ್ಟ್ರೇಲಿಯಾ |
2010 | ಆಸ್ಟ್ರೇಲಿಯಾ | ಪಾಕಿಸ್ತಾನ |
2008 | ಭಾರತ | ದಕ್ಷಿಣ ಆಫ್ರಿಕಾ |
2006 | ಪಾಕಿಸ್ತಾನ | ಭಾರತ |
2004 | ಪಾಕಿಸ್ತಾನ | ವೆಸ್ಟ್ ಇಂಡೀಸ್ |
2002 | ಆಸ್ಟ್ರೇಲಿಯಾ | ದಕ್ಷಿಣ ಆಫ್ರಿಕಾ |
2000 | ಭಾರತ | ಶ್ರೀಲಂಕಾ |
1998 | ಇಂಗ್ಲೆಂಡ್ | ನ್ಯೂಜಿಲ್ಯಾಂಡ್ |
1988 | ಆಸ್ಟ್ರೇಲಿಯಾ | ಪಾಕಿಸ್ತಾನ |