ಸಿಡ್ನಿ ಟೆಸ್ಟ್ ಫಲಿತಾಂಶ ದಿನವೇ ಭಾರತಕ್ಕೆ ದೊಡ್ಡ ಹೊಡೆತ; ಬೌಲಿಂಗ್ ಮಾಡದ ಜಸ್ಪ್ರೀತ್ ಬುಮ್ರಾ, ಗಂಭೀರ ಗಾಯದ ಆತಂಕ
ಭಾರತ ತಂಡದ ಸ್ಟ್ಯಾಂಡ್ ಇನ್ ನಾಯಕ ಜಸ್ಪ್ರೀತ್ ಬುಮ್ರಾಗೆ ಬೆನ್ನು ಸೆಳೆತ ಎಂದು ತಂಡ ಹೇಳಿದೆ. ಆದರೆ, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ಬುಮ್ರಾಗೆ ಗಂಭೀರ ಗಾಯವಾಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಡ್ನಿ ಟೆಸ್ಟ್‌ನ ನಿರ್ಣಾಯಕ ಕೊನೆಯ ಇನ್ನಿಂಗ್ಸ್‌ನಲ್ಲಿ ಭಾರತೀಯ ವೇಗಿ ಬೌಲಿಂಗ್ ಮಾಡದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದು ಹಾಗೂ ಅಂತಿಮ ಟೆಸ್ಟ್ ಪಂದ್ಯವು ಮೂರೇ ದಿನಕ್ಕೆ ಅಂತ್ಯವಾಗುತ್ತಿರುವುದು ಸ್ಪಷ್ಟವಾಗಿದೆ. ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲ್ಲುವ ಸಮಾನ ಅವಕಾಶಗಳಿವೆ. ಪಂದ್ಯದಲ್ಲಿ ಆಸ್ಟ್ರೇಲಿಯಾದ ತಂಡದ ಕೊನೆಯ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಸ್ಟ್ಯಾಂಡ್-ಇನ್ ನಾಯಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡದೇ ಇರುವುದು ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ. ಭಾರತದ ಎರಡನೇ ಇನ್ನಿಂಗ್ಸ್ ವೇಳೆಗೆ ಬ್ಯಾಟಿಂಗ್ ಮಾಡಿದ್ದ ಬುಮ್ರಾ, ಬೌಲಿಂಗ್ ಮಾಡದಿರುವುದು ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಗಾಯದ ಕಾರಣದಿಂದಾಗಿ, ಎರಡನೇ ದಿನದಾಟದ ನಡುವೆಯೇ ಬುಮ್ರಾ ಬೌಲಿಂಗ್‌ನಿಂದ ಹೊರಗುಳಿದರು. ಆಸೀಸ್ ಇನ್ನಿಂಗ್ಸ್ ಸಮಯದಲ್ಲಿ ಸ್ಕ್ಯಾನಿಂಗ್‌ಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಬಳಿಕ ಮೂರನೇ ದಿನದಾಟದಲ್ಲಿ ಅವರು ಬ್ಯಾಟಿಂಗ್‌ಗೆ ಮರಳಿದರು. ಇದು ಭಾರತೀಯ ಅಭಿಮಾನಿಗಳ ಭರವಸೆ ಹೆಚ್ಚಿಸಿತು. ಆದರೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಫಿಟ್‌ನೆಸ್ ಬಗ್ಗೆ ಭಾರತೀಯ ಅಭಿಮಾನಿಗಳು ಚಿಂತಿತರಾಗಿದ್ದಾರೆ
ಮೂರನೇ ದಿನದಾಟದ ಬೆಳಗ್ಗೆ ಅವರು ಸಾಧ್ಯವಾದಷ್ಟು ಕಡಿಮೆ ರನ್-ಅಪ್ ಮಾಡುವ ಮೂಲಕ ಬೌಲ್ ಮಾಡಲು ಪ್ರಯತ್ನಿಸಿದರು. ಆದರೆ, ತನ್ನಿಂದ ಅದು ಸಾಧ್ಯವಿಲ್ಲ ಎಂದು ಅರಿತುಕೊಂಡರು. ಹೀಗಾಗಿ ಅವರು ಬೌಲಿಂಗ್ ಮಾಡಿಲ್ಲ. ಪಂದ್ಯದ ನಾಲ್ಕನೇ ಇನ್ನಿಂಗ್ಸ್ ವೇಳೆ ಮೊಹಮ್ಮದ್ ಸಿರಾಜ್ ಹೊಸ ಚೆಂಡು ಎತ್ತಿಕೊಂಡರು.
ಬೆನ್ನು ಸೆಳೆತ
ಭಾರತದ ಮತ್ತೋರ್ವ ವೇಗಿ ಪ್ರಸಿದ್ಧ್ ಕೃಷ್ಣ, ಎರಡನೇ ದಿನದಾಟದ ಕೊನೆಯಲ್ಲಿ ಬುಮ್ರಾ ಫಿಟ್‌ನೆಸ್ ಕುರಿತು ಅಪ್‌ಡೇಟ್ ನೀಡಿದರು. ಅವರು ಬೆನ್ನು ಸೆಳೆತ ಇರುವ ಬಗ್ಗೆ ಹೇಳಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಹಿರಂಗಪಡಿಸಿದ್ದರು. ಗಾಯದ ಕಾಳಜಿಯ ಹೊರತಾಗಿಯೂ, ಬುಮ್ರಾ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗಲು ಮೈದಾನಕ್ಕಿಳಿದಿದ್ದರು. ಆದರೆ, ಮೂರು ಎಸೆತ ಎದುರಿಸಿ ಡಕೌಟ್ ಆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 157 ರನ್‌ಗಳಿಗೆ ಆಲೌಟ್ ಆಗಿದ್ದು, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ 162 ರನ್‌ಗಳ ಗುರಿ ಸಿಕ್ಕಿದೆ. ಲಂಚ್ ಬ್ರೇಕ್ ವೇಳೆಗೆ ಆಸೀಸ್ 3 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿದೆ.
ಸರಣಿಯಲ್ಲಿ ದಾಖಲೆಯ ವಿಕೆಟ್
ಭಾರತ ವೇಗಿ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳೊಂದಿಗೆ ಪ್ರವಾಸವನ್ನು ಮುಗಿಸಿದರು. ಐದು ಪಂದ್ಯಗಳಿಂದ 13.06ರ ಸರಾಸರಿಯಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯದಲ್ಲಿ ಒಂದೇ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಯನ್ನೂ ಬುಮ್ರಾ ನಿರ್ಮಿಸಿದ್ದಾರೆ.
ಸ್ಕ್ಯಾನ್‌ಗೆ ಹೋಗಿ ಮರಳಿದ ಬಳಿಕ ಜಸ್ಪ್ರೀತ್ ಬುಮ್ರಾ ಅವರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಭಾರತೀಯ ಶಿಬಿರ ಹೇಳಿಕೊಂಡಿದೆ. ಆದರೆ, ಅವರು ಬೌಲಿಂಗ್ ಮಾಡದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಗಾಯವು ಭಾರತ ತಂಡ ಹೇಳಿಕೊಂಡಿದ್ದಕ್ಕಿಂತ ಕೆಟ್ಟದಾಗಿರಬಹುದು ಎಂಬ ಊಹಾಪೋಹಗಳು ಹರಡಿವೆ. ಇದಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡಾ ಪುಷ್ಠಿ ನೀಡುವ ಹೇಳಿಕೆ ಕೊಟ್ಟಿದ್ದಾರೆ.
3ನೇ ದಿನದ ಅಭ್ಯಾಸದ ಸಮಯದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡದ ಕಾರಣ, ಪಾಂಟಿಂಗ್ ಅವರು ಬುಮ್ರಾ ಗಾಯವು ಇನ್ನಷ್ಟು ಹದಗೆಟ್ಟಿರಬಹುದು ಎಂದು ಪಾಂಟಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. “ಇದು ನನಗೆ ನಿಜಕ್ಕೂ ಚಿಂತೆಯಂತೆ ತೋರಿತು” ಎಂದು ಪಾಂಟಿಂಗ್ ಚಾನೆಲ್ 7ನಲ್ಲಿ ಹೇಳಿದರು. “ಬುಮ್ರಾ ಮೆಟ್ಟಿಲು ಹತ್ತಿ ಇಳಿಯುತ್ತಾರೆ. ಮೈದಾನದಲ್ಲಿ ಓಡುತ್ತಾರೆ. ಇದು ಬೆನ್ನು ಸೆಳೆತದ ಲಕ್ಷಣಗಳಲ್ಲ. ಆದರೆ ನಾನು ಅದುವೇ ನಿಜವೆಂದು ಭಾವಿಸುತ್ತೇನೆ. ಬುಮ್ರಾ ಈ ಪಂದ್ಯದಲ್ಲಿ ಮತ್ತಷ್ಟು ಆಡುವುದನ್ನು ನೋಡಲು ನಾನು ಬಯಸುತ್ತೇನೆ,” ಎಂದು ಪಾಂಟಿಂಗ್ ಹೇಳಿದ್ದಾರೆ.