ಭಾರತ ವಿರುದ್ಧ ಗೆದ್ದ ಆಸ್ಟ್ರೇಲಿಯಾ ಸೆಮೀಸ್ಗೆ ಲಗ್ಗೆ; ಹರ್ಮನ್ ಪಡೆಯ ಸೆಮಿಫೈನಲ್ ಕನಸು ಬಹುತೇಕ ಭಗ್ನ
ICC Womens T20 World Cup 2024: ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡವು 9 ರನ್ಗಳ ಸೋಲು ಕಂಡಿದ್ದು, ಸೆಮಿಫೈನಲ್ ಕನಸು ಬಹುತೇಕ ಭಗ್ನಗೊಂಡಿದೆ.

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸೆಮಿಫೈನಲ್ ಕನಸು ಬಹುತೇಕ ಭಗ್ನಗೊಂಡಿದೆ. ತನ್ನ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 9 ರನ್ಗಳ ಸೋಲು ಅನುಭವಿಸಿದೆ. ಆದರೆ, ಆಸೀಸ್ ಲೀಗ್ ಹಂತದಲ್ಲಿ ಸತತ 4 ಪಂದ್ಯಗಳನ್ನೂ ಗೆದ್ದು ದಾಖಲೆಯ ಸೆಮೀಸ್ಗೆ ಪ್ರವೇಶಿಸಿದೆ. ಭಾರತ ಸೋತರೂ ನಾಲ್ಕರ ಘಟ್ಟಕ್ಕೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಇರುವ ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಸೋತರೆ ಮಾತ್ರ ಭಾರತ ತಂಡವು ಮುಂದಿನ ಹಂತಕ್ಕೆ ಹೋಗಲು ಅವಕಾಶ ಇದೆ.
ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ತಲಾ 2 ವಿಕೆಟ್ ಉರುಳಿಸಿದ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ಬೌಲಿಂಗ್ ಅಬ್ಬರದ ನಡುವೆಯೂ ಗ್ರೇಸ್ ಹ್ಯಾರಿಸ್ (40), ಎಲಿಸ್ ಪೆರ್ರಿ (32), ತಹಿಲಾ ಮೆಗ್ರಾಥ್ (32) ಮಿಂಚಿನ ಪ್ರದರ್ಶನ ನೀಡಿದರು. ಈ ಗುರಿ ಬೆನ್ನಟ್ಟಿದ ಭಾರತ 20 ಓವರ್ಗಳು ಆಡಿದರೂ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, ನಾಯಕಿ ಹರ್ಮನ್ಪ್ರೀತ್ ಕೌರ್ ಅಜೇಯ ಅರ್ಧಶತಕದ ನಡುವೆಯೂ ಪಂದ್ಯವನ್ನು ಗೆದ್ದುಕೊಳ್ಳಲು ಭಾರತ ವಿಫಲವಾಯಿತು.
ಭಾರತದ ಸೆಮಿಫೈನಲ್ ಹಾದಿ ಹೇಗಿದೆ?
ಟೀಮ್ ಇಂಡಿಯಾಗೆ ಸೆಮಿಫೈನಲ್ ಹಾದಿ ಇನ್ನೂ ಜೀವಂತವಾಗಿದೆ. ನ್ಯೂಜಿಲೆಂಡ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಸೋಲಬೇಕು. ಪ್ರಸ್ತುತ ಆಸೀಸ್ ನಾಲ್ಕಕ್ಕೆ ನಾಲ್ಕು ಗೆದ್ದು 8 ಅಂಕಗಳೊಂದಿಗೆ ಆಡಿದ 9 ಆವೃತ್ತಿಗಳಲ್ಲೂ ಸೆಮಿಫೈನಲ್ಗೆ ಪ್ರವೇಶಿಸಿದ ದಾಖಲೆ ಬರೆದಿದೆ. 2ನೇ ಸ್ಥಾನದಲ್ಲಿರುವ ಭಾರತ ತಂಡವು ಆಡಿರುವ 4ರಲ್ಲಿ 2 ಗೆಲುವು, 2 ಸೋಲು ಕಂಡಿದೆ. ನೆಟ್ ರನ್ ರೇಟ್ +0.322. ಮೂರನೇ ಸ್ಥಾನದಲ್ಲಿರುವ ಕಿವೀಸ್, 3 ಪಂದ್ಯಗಳಲ್ಲಿ 2 ಗೆಲುವು, 1 ಗೆಲುವು ಸಾಧಿಸಿದೆ. ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಪಾಕಿಸ್ತಾನ ವಿರುದ್ಧ ಆಡಬೇಕಿದೆ. ಒಂದು ವೇಳೆ ಗೆದ್ದರೆ ಎ ಗುಂಪಿನಲ್ಲಿ ಎರಡನೇ ತಂಡವಾಗಿ ಸೆಮಿಫೈನಲ್ಗೇರಲಿದೆ.
ಸ್ಥಾನ (ಗುಂಪು ಎ) | ತಂಡ | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|---|
1. | ಆಸ್ಟ್ರೇಲಿಯಾ (ಪ್ರ) | 4 | 4 | 0 | 8 | +2.223 |
2. | ಭಾರತ | 4 | 2 | 2 | 4 | +0.322 |
3. | ನ್ಯೂಜಿಲೆಂಡ್ | 3 | 2 | 1 | 4 | +0.282 |
4. | ಪಾಕಿಸ್ತಾನ | 3 | 1 | 2 | 2 | -0.488 |
5. | ಶ್ರೀಲಂಕಾ | 4 | 0 | 4 | 0 | -2.173 |
ಸ್ಥಾನ (ಗುಂಪು ಬಿ) | ತಂಡ | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|---|
1. | ಇಂಗ್ಲೆಂಡ್ | 3 | 3 | 0 | 6 | +1.716 |
2. | ದಕ್ಷಿಣ ಆಫ್ರಿಕಾ | 4 | 3 | 1 | 6 | +1.382 |
3. | ವೆಸ್ಟ್ ಇಂಡೀಸ್ | 3 | 2 | 1 | 4 | +1.708 |
4. | ಬಾಂಗ್ಲಾದೇಶ | 4 | 1 | 3 | 2 | -0.844 |
5. | ಸ್ಕಾಟ್ಲೆಂಡ್ | 4 | 0 | 4 | 0 |