ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಶುಭ್ಮನ್ ಗಿಲ್ ನಾಯಕ, ಕೊನೆಗೂ ಕನ್ನಡಿಗ ಕರುಣ್ ನಾಯರ್ ಆಯ್ಕೆ
ಜೂನ್ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರ ಪಡೆ ಆಂಗ್ಲರ ನೆಲದಲ್ಲಿ ಬಿಳಿ ಜೆರ್ಸಿಯಲ್ಲಿ ಆಡಲಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಆಯ್ಕೆ ಸಭೆ ನಡೆದಿದ್ದು, ಸಭೆಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 5 ಪಂದ್ಯಗಳ ಇಂಗ್ಲೆಂಡ್ ಟೆಸ್ಟ್ ಸರಣಿಗೆ (India vs England Test) ಭಾರತೀಯ ತಂಡವನ್ನು ಪ್ರಕಟಿಸಿದೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಕೆಲವೊಂದು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
18 ಸದಸ್ಯರ ತಂಡವನ್ನು ನಿರೀಕ್ಷೆಯಂತೆಯೇ ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ. ರಿಷಭ್ ಪಂತ್‌ಗೆ ಉಪನಾಯಕ ಸ್ಥಾನ ನೀಡಲಾಗಿದೆ. ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕತ್ವಕ್ಕೆ ಪರಿಗಣಿಸಿಲ್ಲ. ಧ್ರುವ್ ಜುರೆಲ್ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿರುತ್ತಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡದಿಂದ ಹಿಂದೆ ಸರಿಯಲು ನಿರ್ಧರಿಸಿರುವುದರಿಂದ, ತಂಡದಲ್ಲಿ “ಇದು ಒಂದು ದೊಡ್ಡ ಪರಿವರ್ತನೆಯಾಗಿದೆ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯು ದೊಡ್ಡ ಸವಾಲಾಗಿರುತ್ತದೆ. ಶುಭ್ಮನ್ ಗಿಲ್ ತಮ್ಮನ್ನು ತಾವು ಸಾಬೀತುಪಡಿಸಲು ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂದು ಅವರು ಹೇಳಿದ್ದಾರೆ.
ಕನ್ನಡಿಗ ಕರುಣ್ ನಾಯರ್‌ಗೆ ಅವಕಾಶ
ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ನೀಡದ ಪ್ರದರ್ಶನವನ್ನು ಪರಿಗಣಿಸಿ ಸಾಯಿ ಸುದರ್ಶನ್ ಮತ್ತು ಕನ್ನಡಿಗ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡುವ ನಿರೀಕ್ಷೆ ಇತ್ತು. ಅದರಂತೆಯೇ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ. ಕರುಣ್ ನಾಯರ್ ಒಂಬತ್ತು ರಣಜಿ ಟ್ರೋಫಿ ಪಂದ್ಯಗಳಲ್ಲಿ 850ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದರು. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ 800 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸುವ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯ ಪ್ರದರ್ಶಿಸಿದ್ದರು.
ಮೊಹಮ್ಮದ್ ಸಿರಾಜ್ ಮತ್ತೆ ಟೀಮ್ ಇಂಡಿಯಾಗೆ ಮರಳಿದ್ದಾರೆ. ಅರ್ಷದೀಪ್ ಸಿಂಗ್ ಕೂಡಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ವೈದ್ಯಕೀಯ ತಂಡವು ಮೊಹಮ್ಮದ್ ಶಮಿ ಫಿಟ್ ಆಗಿಲ್ಲ ಎಂದು ಘೋಷಿಸಿದೆ ಎಂದು ಅಜಿತ್ ಅಗರ್ಕರ್ ದೃಢಪಡಿಸಿದ್ದಾರೆ. ಆಯ್ಕೆ ಸಮಿತಿಯು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿತ್ತು. ಆದರೆ ವೈದ್ಯಕೀಯ ತಂಡದ ಪ್ರತಿಕ್ರಿಯೆ ಪಡೆದ ನಂತರ, ಅವರನ್ನು ಆಯ್ಕೆ ಮಾಡದಿರಲು ನಿರ್ಧರಿಸಲಾಗಿದೆ.
ಜಸ್ಪ್ರೀತ್ ಬುಮ್ರಾ ಸರಣಿಯ ಎಲ್ಲಾ ಐದು ಟೆಸ್ಟ್‌ಗಳಲ್ಲೂ ಆಡುವುದಿಲ್ಲ ಎಂಬುದನ್ನು ಅಜಿತ್ ಅಗರ್ಕರ್ ದೃಢಪಡಿಸಿದ್ದಾರೆ. ಬುಮ್ರಾ ನಾಲ್ಕು ಅಥವಾ ಮೂರು ಟೆಸ್ಟ್‌ಗಳನ್ನು ಆಡುತ್ತಾರೋ ಇಲ್ಲವೋ ಎಂಬುದನ್ನು ಕಾಲವೇ ಹೇಳುತ್ತದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ
ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್.