ಮಹಿಳಾ ಟೆಸ್ಟ್ ಕ್ರಿಕೆಟ್; ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ನ​​ಲ್ಲಿ ಭಾರತಕ್ಕೆ 10 ವಿಕೆಟ್​​ಗಳ ಭರ್ಜರಿ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ಮಹಿಳಾ ಟೆಸ್ಟ್ ಕ್ರಿಕೆಟ್; ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ನ​​ಲ್ಲಿ ಭಾರತಕ್ಕೆ 10 ವಿಕೆಟ್​​ಗಳ ಭರ್ಜರಿ ಗೆಲುವು

ಮಹಿಳಾ ಟೆಸ್ಟ್ ಕ್ರಿಕೆಟ್; ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ನ​​ಲ್ಲಿ ಭಾರತಕ್ಕೆ 10 ವಿಕೆಟ್​​ಗಳ ಭರ್ಜರಿ ಗೆಲುವು

India vs South Africa Womens Test: ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಭಾರತ ಮಹಿಳಾ ತಂಡವು 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಮಹಿಳಾ ಟೆಸ್ಟ್ ಕ್ರಿಕೆಟ್; ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ನ​​ಲ್ಲಿ ಭಾರತಕ್ಕೆ 10 ವಿಕೆಟ್​​ಗಳ ಭರ್ಜರಿ ಗೆಲುವು
ಮಹಿಳಾ ಟೆಸ್ಟ್ ಕ್ರಿಕೆಟ್; ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ನ​​ಲ್ಲಿ ಭಾರತಕ್ಕೆ 10 ವಿಕೆಟ್​​ಗಳ ಭರ್ಜರಿ ಗೆಲುವು

ಶಫಾಲಿ ವರ್ಮಾ ಅವರ ದ್ವಿಶತಕ (205), ಸ್ಮೃತಿ ಮಂಧಾನ ಅವರ ಶತಕ (149) ಹಾಗೂ ಸ್ನೆಹ್ ರಾಣಾ ಅವರ ಬೌಲಿಂಗ್ (10 ವಿಕೆಟ್)​ ಬಲದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತ ಮಹಿಳಾ ತಂಡ 10 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ 37 ರನ್​​ಗಳ ಗುರಿ ಪಡೆದಿದ್ದ ಭಾರತ 9.2 ಓವರ್​​ಗಳಲ್ಲೇ ಗೆದ್ದು ಬೀಗಿತು. ಒಂದು ವಿಕೆಟ್ ಕೂಡ ಕಳೆದುಕೊಂಡಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ 24 ರನ್, ಶುಭಾ ಸತೀಶ್ 13 ರನ್​ಗಳಿಸಿ ಅಜೇಯರಾದರು.

ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ, ಐತಿಹಾಸಿಕ ಬೃಹತ್ ಮೊತ್ತ ಪೇರಿಸಿತು. ಮಹಿಳಾ ಟೆಸ್ಟ್​ ಕ್ರಿಕೆಟ್​​ನಲ್ಲಿ ಇದು ವಿಶ್ವದಾಖಲೆಯ ಮೊತ್ತವಾಗಿದೆ. ಪ್ರಥಮ ಇನ್ನಿಂಗ್ಸ್​​ನಲ್ಲಿ ಭಾರತ 115.1 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಹಿಂಬಾಲಿಸಿದ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್​​ನಲ್ಲಿ 266 ರನ್​ಗಳಿಗೆ (84.3 ಓವರ್​​) ಆಲೌಟ್ ಆಯಿತು. ಹೀಗಾಗಿ, 337 ರನ್​ಗಳ ಹಿನ್ನಡೆ ಅನುಭವಿಸಿ ಫಾಲೋ ಆನ್​ಗೆ ಗುರಿಯಾಯಿತು. ಅದರಂತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ, 373 ಪೇರಿಸಿತು. ಭಾರತ 37 ರನ್​ಗಳ ಗುರಿ ಪಡೆಯಿತು.

ಸ್ಮೃತಿ ಮಂಧಾನ ಮತ್ತು ಶಫಾಲಿ ಭರ್ಜರಿ ಆಟ

ಭಾರತದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ದ್ವಿಶತಕ ಹಾಗೂ ಸ್ಮೃತಿ ಮಂಧಾನ ಶತಕ ಸಿಡಿಸುವ ಮೂಲಕ ಭರ್ಜರಿ ಆರಂಭ ನೀಡಿದರು. ಅಲ್ಲದೆ ಮೊದಲ ವಿಕೆಟ್​ಗೆ 292 ರನ್​ಗಳ ಪಾಲುದಾರಿಕೆ ಒದಗಿಸಿದರು. ಸ್ಮೃತಿ ಮಂಧಾನ 161 ಬಾಲ್​ಗಳಲ್ಲಿ 26 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರು. ಮತ್ತೊಂದೆಡೆ ಶಫಾಲಿ ವರ್ಮಾ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ ದಾಖಲೆಯ ಹಾಗೂ ವೇಗದ ದ್ವಿಶತಕ ಸಿಡಿಸಿ ಮಿಂಚಿದರು. ಜೆಮಿಮಾ ರೋಡ್ರಿಗಸ್ 55, ಹರ್ಮನ್​ಪ್ರೀತ್ ಕೌರ್ 69, ರಿಚಾ ಘೋಷ್ 86 ರನ್ ಸಿಡಿಸಿದರು. ಡಾಲ್ಮಿ ಟಕ್ಕರ್​ 2, ನಾಡಿನ್ ಡಿ ಕ್ಲರ್ಕ್, ಸೆಖುಖುನೆ, ನಾನ್ಕುಲುಲೇಕೋ ಮ್ಲಾಬಾ ತಲಾ 1 ವಿಕೆಟ್ ಪಡೆದರು.

ಸ್ನೇಹ್ ರಾಣಾ ಮಿಂಚಿನ ಬೌಲಿಂಗ್

ಸೌತ್ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸುವ ವೇಳೆ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರ ನಡುವೆಯೂ ಸುನೆ ಲೂಸ್ (65) ಮತ್ತು ಮರಿಜಾನ್ನೆ ಕಪ್ (74) ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದರು. ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಸ್ನೇಹ್​ ರಾಣಾ 8 ವಿಕೆಟ್ ಕಿತ್ತರು. ವೋಲ್ವಾರ್ಡ್ (20), ಅನ್ನೆಕೆ ಬಾಷ್ (39), ನಾಡಿನ್ ಡಿ ಕ್ಲರ್ಕ್ (39) ಎರಡಂಕಿ ದಾಟುವಲ್ಲಿ ಯಶಸ್ವಿಯಾದರು. 84.3 ಓವರ್​​​ಗಳಲ್ಲಿ 266 ರನ್​​ಗಳಿಗೆ ಆಲೌಟ್ ಆಯಿತು. 337 ರನ್​ಗಳ ಹಿನ್ನಡೆ ಅನುಭವಿಸಿತು. ಹೀಗಾಗಿ ಭಾರತ ಫಾಲೋಆನ್ ಹೇರಿತು.

ವೋಲ್ವಾರ್ಡ್ ಮತ್ತು ಸುನೆ ಲೂಸ್ ಶತಕ

337 ರನ್​ಗಳ ಹಿನ್ನಡೆ ಅನುಭವಿಸಿದ ಸೌತ್ ಆಫ್ರಿಕಾ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಲಾರಾ ವೋಲ್ವಾರ್ಡ್ ಮತ್ತು ಸುನೆ ಲೂಸ್ ಶತಕ ಸಿಡಿಸಿ ಗಮನ ಸೆಳೆದರು. ಲಾರಾ ವೋಲ್ವಾರ್ಡ್ 314 ಎಸೆತಗಳಲ್ಲಿ 16 ಬೌಂಡರಿ ಸಹಿತ 122 ರನ್ ಗಳಿಸಿದರು. ಸುನೆ ಲೂಸ್ 203 ಎಸೆತಗಳಲ್ಲಿ 18 ಬೌಂಡರಿ ಸಹಿತ 109 ರನ್ ಗಳಿಸಿದರು. ನಾಡಿನ್ ಡಿ ಕ್ಲರ್ಕ್ (61) ಅರ್ಧಶತಕ ಸಿಡಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ 8 ವಿಕೆಟ್ ಕಿತ್ತಿದ್ದ ಸ್ನೆಹ್ ರಾಣಾ ಎರಡನೇ ಇನ್ನಿಂಗ್ಸ್​​ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್, ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದರು.

2ನೇ ಇನ್ನಿಂಗ್ಸ್​​ನಲ್ಲಿ 36 ರನ್​ಗಳಿಗೆ ಮುನ್ನಡೆ ಸಾಧಿಸಿದ ಸೌತ್ ಆಫ್ರಿಕಾ, ಭಾರತಕ್ಕೆ 37 ರನ್​​ಗಳ ಗುರಿ ನೀಡಿತು. 4ನೇ ದಿನದಾಟದ ಕೊನೆಯಲ್ಲಿ ಸಾಧಾರಣ ಗುರಿ ಬೆನ್ನಟ್ಟಿದ ಭಾರತ 9.2 ಓವರ್​​​ಗಳಲ್ಲೇ 37 ರನ್ ಗಳಿಸಿತು. ಟೆಸ್ಟ್ ಸರಣಿಗೂ ಮುನ್ನ ಸೌತ್ ಆಫ್ರಿಕಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯು ಭಾರತ ಗೆದ್ದುಕೊಂಡಿತು. ಮೂರು ಪಂದ್ಯಗಳಲ್ಲೂ ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಮೂರು ಪಂದ್ಯಗಳಲ್ಲಿ ಎರಡು ಶತಕ, 1 ಅರ್ಧಶತಕ ಸಿಡಿಸಿದ್ದರು. ಟೆಸ್ಟ್​ನಲ್ಲೂ ಶತಕ ಬಾರಿಸಿದ್ದಾರೆ.

Whats_app_banner