ಅಂಡರ್-19 ಏಷ್ಯಾಕಪ್: ಶ್ರೀಲಂಕಾ ಸೋಲಿಸಿದ ಭಾರತ ಫೈನಲ್ಗೆ ಪ್ರವೇಶ; ಪ್ರಶಸ್ತಿ ಸುತ್ತಿನಲ್ಲಿ ಬಾಂಗ್ಲಾದೇಶ ಎದುರಾಳಿ
India vs Sri Lanka Semi Final: ಅಂಡರ್-19 ಏಷ್ಯಾಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಕಿರಿಯರ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ. ಪ್ರಶಸ್ತಿ ಸುತ್ತಿನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಅಂಡರ್-19 ಏಷ್ಯಾಕಪ್ ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಬಗ್ಗುಬಡಿದ ಟೀಮ್ ಇಂಡಿಯಾ, ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 13 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಭವ ಮತ್ತು ಚೇತನ್ ಶರ್ಮಾ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಲಂಕಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ಭಾರತ ತಂಡ, ಏಕಪಕ್ಷೀಯವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 173 ರನ್ಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತ 22 ಓವರ್ಗಳಲ್ಲೇ ಜಯದ ನಗೆ ಬೀರಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ, ಆರಂಭಿಕ ಆಘಾತಕ್ಕೆ ಒಳಗಾಯಿತು. ದುಲ್ನಿತ್ ಸಿಗೇರಾ (2), ಪುಲಿಂದು ಪೆರೇರಾ (6), ವಿಮತ್ ದಿನಸಾರ (0) ಬೇಗನೇ ವಿಕೆಟ್ ಒಪ್ಪಿಸಿದರು. ಚೇತನ್ ಶರ್ಮಾ 2 ವಿಕೆಟ್ ಪಡೆದರು. ಆದರೆ ಪೆರೇರಾ ರನೌಟ್ ಆದರು. 8 ರನ್ಗೆ ಮೊದಲ ಮೂರು ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಘಾತ ಬಳಿಕ ರಕ್ಷಣಾತ್ಮಕ ಆಟಕ್ಕೆ ನೀಡಿದ್ದು ಶರುಜನ್ ಷಣ್ಮುಗನಾಥನ್ ಮತ್ತು ಲಕ್ವಿನ್ ಅಬೆಸಿಂಗ್. ಈ ಜೋಡಿ 4ನೇ ವಿಕೆಟ್ಗೆ 93 ರನ್ಗಳ ಕಾಣಿಕೆ ನೀಡಿತು. ಅಬೆಸಿಂಗ್ ಅರ್ಧಶತಕ (69) ಸಿಡಿಸಿದರೆ, ಶರುಜನ್ (42) ಅರ್ಧಶತಕದ ಅಂಚಿನಲ್ಲಿ ಎಡವಿದರು.
ಈ ಇಬ್ಬರ ಬಳಿಕ ಉಳಿದ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಭಾರತೀಯ ಕಿರಿಯ ಬೌಲರ್ಗಳ ಅಬ್ಬರಕ್ಕೆ ಲಂಕನ್ನರು ಪೆವಿಲಿಯನ್ ಪರೇಡ್ ನಡೆಸಿದರು. ಕವಿಜಾ ಗಮಗೆ 10 ರನ್, ವಿಹಾಸ್ ಥೇವ್ಮಿಕಾ 14 ರನ್, ವೀರನ್ ಚಾಮುದಿತ 8, ಪ್ರವೀಣ್ ಮನೀಶಾ 5, ರಂಜಿತ್ ಕುಮಾರ್ 5 ರನ್ ಗಳಿಸಿ ಔಟಾದರು. ಭಾರತದ ಪರ ಚೇತನ್ ಶರ್ಮಾ 3 ವಿಕೆಟ್ ಪಡೆದರೆ, ಕಿರಣ್ ಚೋರ್ಮಲೆ, ಆಯುಷ್ ತಲಾ 2 ವಿಕೆಟ್, ಯುಧಾಜಿತ್ ಗುಹಾ, ಹಾರ್ದಿಕ್ ರಾಜ್ ತಲಾ 1 ವಿಕೆಟ್ ಕಿತ್ತರು. ಅಂತಿಮವಾಗಿ ಶ್ರೀಲಂಕಾ 46.2 ಓವರ್ಗಳಲ್ಲಿ 173 ರನ್ಗಳಿಗೆ ಆಲೌಟ್ ಆಯಿತು.
ಅಬ್ಬರಿಸಿದ ವೈಭವ್ ಸೂರ್ಯವಂಶಿ
ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಅದ್ಭುತ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 91 ರನ್ ಹರಿದುಬಂತು. ಬೌಲಿಂಗ್ನಲ್ಲಿ 2 ವಿಕೆಟ್ ಪಡೆದ ಆಯುಷ್ ಬ್ಯಾಟಿಂಗ್ನಲ್ಲೂ 34 ರನ್ಗಳ ಕಾಣಿಕೆ ನೀಡಿದರು. ಮತ್ತೊಬ್ಬ ಆರಂಭಿಕ ಆಟಗಾರ 13 ವರ್ಷದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಐಪಿಎಲ್ನಲ್ಲಿ 1.10 ಕೋಟಿಗೆ ಬಿಕರಿಯಾಗಿರುವ ವೈಭವ್, 36 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಿತ 67 ರನ್ ಗಳಿಸಿ ಗೆಲುವಿನ ಪ್ರಮುಖ ಪಾತ್ರವಹಿಸಿದರು. ಆ್ಯಂಡ್ರೆ ಸಿದ್ದಾರ್ಥ್ 22, ಮೊಹಮ್ಮದ್ ಅಮಾನ್ 25, ಕೆಪಿ ಕಾರ್ತಿಕೇಯ 11 ರನ್ಗಳ ಕಾಣಿಕೆ ನೀಡಿದರು.
ಭಾರತ ಮತ್ತು ಬಾಂಗ್ಲಾದೇಶ ಫೈನಲ್
ಮತ್ತೊಂದು ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಬಾಂಗ್ಲಾದೇಶ ತಂಡ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ 37 ಓವರ್ಗಳಲ್ಲಿ 116 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ 22.1 ಓವರ್ಗಳಲ್ಲಿ ಗುರಿ ತಲುಪಿತು. ಇದರೊಂದಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಬಾಂಗ್ಲಾದೇಶ, ಡಿಸೆಂಬರ್ 8ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡದೊಂದಿಗೆ ಸೆಣಸಾಟ ನಡೆಸಲಿದೆ.