ಸೂಪರ್ ಓವರ್ನಲ್ಲೂ ಪಂದ್ಯ ಟೈ; 'ಮೋಯೆ ಮೋಯೆ' ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ, ವಿಡಿಯೋ ವೈರಲ್
Virat Kohli Dance: ಅಫ್ಘಾನಿಸ್ತಾನ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಮೊದಲ ಓವರ್ನಲ್ಲೂ ಟೈ ಕಂಡ ನಂತರ ಮೈದಾನದಲ್ಲಿ ಡಿಜೆಯಲ್ಲಿ ಮೊಯೆ ಮೊಯೆ ಹಾಡಲು ಪ್ಲೇ ಮಾಡಲಾಗಿತ್ತು. ಈ ವೇಳೆ ವಿರಾಟ್ ಕೊಹ್ಲಿ ಸಿಗ್ನೇಚರ್ ಸ್ಟೆಪ್ಸ್ ಹಾಕಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು (India Vs Afghanistan 3rd T20I) ಸಾಧಿಸಿತು. 2ನೇ ಸೂಪರ್ ಓವರ್ನಲ್ಲಿ 10 ರನ್ಗಳಿಂದ ಗೆದ್ದ ರೋಹಿತ್ ಪಡೆ 3-0 ಅಂತರದಿಂದ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿಕೊಂಡಿತು. ಆದರೆ ಪಂದ್ಯ ಟೈ ಆದ ಬಳಿಕ ಸೂಪರ್ ಓವರ್ಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮೊಯೆ ಮೊಯೆ ಹಾಡಿಗೆ ವಿರಾಟ್ ಕೊಹ್ಲಿ (Virat Kohli) ಸಿಗ್ನೇಚರ್ ಸ್ಪೆಪ್ಸ್ ಹಾಕಿದ್ದಾರೆ.
ಸೂಪರ್ ಓವರ್ನಲ್ಲಿ ಸೂಪರ್ ಗೆಲುವು
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ಗಳ ಬೃಹತ್ ಮೊತ್ತ ಪೇರಿಸಿತು. ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಜೋಡಿ ಐದನೇ ವಿಕೆಟ್ಗೆ 190 ರನ್ಗಳ ಜೊತೆಯಾಟವಾಡಿ ಅಫ್ಘನ್ ಎದುರು ದೊಡ್ಡ ಮೊತ್ತ ಸಿಡಿಸಲು ಸಾಧ್ಯವಾಯಿತು. ಆದರೆ ಈ ಗುರಿ ಬೆನ್ನಟ್ಟಿದ ಅಫ್ಘನ್, 6 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ಗಳನ್ನು ಗಳಿಸಿ ಪಂದ್ಯವನ್ನು ಟೈಗೊಳಿಸಿತು.
ಮೊದಲ ಸೂಪರ್ ಓವರ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ಭರ್ಜರಿ 16 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ, ರೋಹಿತ್ ಶರ್ಮಾ 2 ಸಿಕ್ಸರ್ ಸಿಡಿಸಿದ ಹೊರತಾಗಿಯೂ ಮತ್ತೆ ಟೈನಲ್ಲಿ ಅಂತ್ಯವಾಯಿತು. ಹಾಗಾಗಿ, ಫಲಿತಾಂಶ ನಿರ್ಧರಿಸಲು ಮತ್ತೊಂದು ಸೂಪರ್ ಓವರ್ ಮೊರೆ ಹೋಗಬೇಕಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 11 ರನ್ ಗಳಿಸಿತು. ಅಫ್ಘನ್ 1 ರನ್ ಗಳಿಸಿ 10 ರನ್ಗಳಿಂದ ರೋಹಿತ್ ಪಡೆಗೆ ಶರಣಾಯಿತು.
ವಿರಾಟ್ ಡ್ಯಾನ್ಸ್ ವಿಡಿಯೋ ವೈರಲ್
ಪಂದ್ಯದ ನಂತರ ಮೊದಲ ಸೂಪರ್ ಓವರ್ನಲ್ಲೂ ಫಲಿತಾಂಶ ಬಾರದ ಕಾರಣಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಜೆಯಲ್ಲಿ ವಿಶಿಷ್ಟವಾದ 'ಮೋಯೆ ಮೋಯೆ' ಹಾಡನ್ನು ಹಾಕಲಾಯಿತು. ಇದು ನಿರ್ದಿಷ್ಟ ವ್ಯಕ್ತಿ ಅಥವಾ ತಂಡಕ್ಕೆ ತಪ್ಪಾಗಿರುವ ಸನ್ನಿವೇಶವನ್ನು ಗೇಲಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಹಾಡನ್ನು ಬಳಸಲಾಗುತ್ತದೆ. ಈ ಹಾಡನ್ನು ಪ್ಲೇ ಮಾಡಿದ ನಂತರ ವಿರಾಟ್ ಕೊಹ್ಲಿ ಈ ಐಕಾನಿಕ್ ಮೀಮ್ಗೆ ಡ್ಯಾನ್ಸ್ ಮಾಡಿ ಇನ್ನಷ್ಟು ತಮಾಷೆ ಮಾಡಿದ್ದಾರೆ.
ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಈ ಹಾಡಿಗೆ ನಿಂತಲ್ಲೇ ಕೂತಲ್ಲೇ ಸ್ಟೆಪ್ಸ್ ಹಾಕಿದರು. ಮೊಯೆ ಮೊಯೆ ಎಂದು ಇಡೀ ಮೈದಾನವೇ ಪ್ರತಿಧ್ವನಿಸಿತು. ಹಾಡನ್ನು ಪ್ಲೇ ಮಾಡುತ್ತಿದ್ದಂತೆ ಕೊಹ್ಲಿ ಕಣ್ಮುಚ್ಚಿಕೊಂಡು ಸೊಂಟ ಬಳುಕಿಸಿದ್ದಾರೆ. ಈ ಹಾಡಿಗೆ ಸೊಂಟ ಬಳುಕಿಸುವುದೇ ಸಿಗ್ನೇಚರ್ ಸ್ಟೆಪ್ಸ್ ಆಗಿದೆ. ಸಹ ಆಟಗಾರರು ಸಹ ಈ ಡ್ಯಾನ್ಸ್ ನೋಡಿ ಬಿದ್ದು ಬಿದ್ದು ನಕ್ಕರು. ವಿರಾಟ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ವಿಭಿನ್ನ ಕಮೆಂಟ್ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಒಂದು ಹಂತದಲ್ಲಿ ಮೆನ್ ಇನ್ ಬ್ಲೂ 22 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಆ ಬಳಿಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಅವರು ದಾಖಲೆ 190 ರನ್ಗಳ ಜೊತೆಯಾಟವಾಡಿದರು. ಇದು ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟ. ಮತ್ತೊಂದೆಡೆ 5ನೇ ಟಿ20 ಶತಕ ಸಿಡಿಸಿದ ರೋಹಿತ್, ನಾಯಕನಾಗಿ ಹಲವು ದಾಖಲೆ ಬರೆದಿದ್ದಾರೆ.
---