5 ವಿಕೆಟ್ ಪಡೆದು ಮಿಂಚಿದ ಶಮಿ; ಭಾರತದ ಗೆಲುವಿಗೆ 277 ರನ್ ಸ್ಪರ್ಧಾತ್ಮಕ ಗುರಿ ನೀಡಿದ ಆಸ್ಟ್ರೇಲಿಯಾ
India vs Australia 1st ODI: ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ಬ್ಯಾಟರ್‌ಗಳು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, ಟೀಮ್ ಇಂಡಿಯಾಗೆ ಸ್ಪರ್ಧಾತ್ಮಕ ಸವಾಲು ನೀಡಿದೆ. ವೇಗಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆಯುವುದರೊಂದಿಗೆ ಬೃಹತ್ ಮೊತ್ತ ಕಲೆಹಾಕುವ ಕಮಿನ್ಸ್ ಬಳಗದ ಯೋಜನೆಗೆ ಅಡ್ಡಿಯಾದರು.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ನಿಗದಿತ 50 ಓವರ್‌ಗಳಲ್ಲಿ 276 ರನ್ ಗಳಿಸಿ ಆಲೌಟ್ ಆಗಿದೆ. ಆ ಮೂಲಕ ಭಾರತಕ್ಕೆ 277 ರನ್‌ಗಳ ಸ್ಪಾರ್ಧಾತ್ಮಕ ಗುರಿ ನೀಡಿದೆ.
ಸ್ಪರ್ಧಾತ್ಮಕ ಗುರಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ವೇಗಿ ಮೊಹಮ್ಮದ್ ಶಮಿ ಅಡ್ಡಿಯಾದರು. ಒಂದು ಬೌಂಡರಿ ಗಳಿಸಿದ್ದ ಮಿಚೆಲ್ ಮಾರ್ಷ್ ಅವರನ್ನು ಮೊದಲ ಓವರ್‌ನಲ್ಲೇ ಪೆವಿಲಿಯನ್ ಕಳುಹಿಸಿದರು. ಈ ವೇಳೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಜೊತೆಗೂಡಿದ ಅನುಭವಿ ಸ್ಟೀವ್ ಸ್ಮಿತ್, ಜವಾಬ್ದಾರಿಯುತ ಆಟವಾಡಿದರು. ಈ ಜೋಡಿ 90ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿತು. 53 ಎಸೆತಗಳಲ್ಲಿ ಎರಡು ಸಿಕ್ಸರ್ ಸಹಿತ 52 ರನ್ ಸಿಡಿಸಿದ ವಾರ್ನರ್, ಜಡೇಜಾ ಎಸೆತದಲ್ಲಿ ಶುಭ್ಮನ್‌ಗೆ ಕ್ಯಾಚ್ ನೀಡಿ ಔಟಾದರು. ಅವರ ಬೆನ್ನಲ್ಲೇ 41 ರನ್ ಗಳಿಸಿದ್ದ ಸ್ಮಿತ್ ಕೂಡಾ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಮಾರ್ನಸ್ ಲ್ಯಾಬುಶೇನ್ 39 ರನ್ ಗಳಿಸಿ ಔಟಾದರೆ, ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಕ್ಯಾಮರೂನ್ ಗ್ರೀನ್ 31 ರನ್ ಗಳಿಸಿ ರನೌಟ್ ಆದರು. ಈ ನಡುವೆ ಜೋಶ್ ಇಂಗ್ಲಿಸ್ ಎಸೆತಕ್ಕೊಂದರಂತೆ 45 ರನ್ ಕಲೆ ಹಾಕಿದರು. ಡೆತ್ ಓವರ್‌ಗಳಲ್ಲಿ ಅಬ್ಬರಿಸಲು ಮುಂದಾದ ಸ್ಟೋಯ್ನಿಸ್, 29 ರನ್ ಗಳಿಸಿ ಶಮಿ ಎಸೆತದಲಿ ಕ್ಲೀನ್ ಬೋಲ್ಡ್ ಆದರು. ಅಂತಿಮ ಹಂತದಲ್ಲಿ ನಾಯಕ ಕಮಿನ್ಸ್ 21 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಝಂಪಾ ರನೌಟ್ ಆಗುವುದರೊಂದಿಗೆ ತಂಡ ಆಲೌಟ್ ಆಯ್ತು.
ಶಮಿ ದಾಖಲೆಯ ಐದು ವಿಕೆಟ್
ಭಾರತದ ಪರ ವೇಗಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಆಸೀಸ್ ವಿರುದ್ಧ ಒಟ್ಟು 37 ವಿಕೆಟ್ ಗಳಿಕೆಸಿದ ಸಾಧನೆ ಮಾಡಿದರು. ಇದು ಭಾರತೀಯ ಬೌಲರ್‌ಗಳ ಪೈಕಿ ಎರಡನೇ ಅತಿ ಹೆಚ್ಚು ವಿಕೆಟ್. ಉಳಿದಂತೆ ಬುಮ್ರಾ, ಅಶ್ವಿನ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಭಾರತ ತಂಡದ ಕಾಯಂ ನಾಯಕ ರೋಹಿತ್ ಶರ್ಮಾ, ಅನುಭವಿ ಆಟಗಾರ ವಿರಾಟ್ ಕೊಹ್ಲಿ, ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಮೊದಲೆರಡು ಏಕದಿನ ಪಂದ್ಯಗಳನ್ನು ಆಡುತ್ತಿಲ್ಲ. ಹೀಗಾಗಿ ಕನ್ನಡಿಗ ಕೆಎಲ್ ರಾಹುಲ್‌ಗೆ ತಂಡದ ನಾಯಕತ್ವದ ಜವಾಬ್ದಾರಿ ಸಿಕ್ಕಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಏಕದಿನ ವಿಶ್ವಕಪ್‌ಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಬೇಕು. ಹೀಗಾಗಿ ನಾವು ಮೊದಲ ಎರಡು ಏಕದಿನ ಪಂದ್ಯಗಳಿಗೆ ಅವರಿಗೆ ವಿಶ್ರಾಂತಿ ನೀಡಿದ್ದೇವೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಆಡುವ ಬಳಗ
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯ್ನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ.
ಭಾರತ ಆಡುವ ಬಳಗ
ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.