ಕನ್ನಡ ಸುದ್ದಿ  /  Cricket  /  India Vs Australia 2nd T20 Thiruvananthapuram Kerala Weather Forecast November 26 Rain Threat Looms Large Ind Vs Aus Prs

ಇಂಡೋ-ಆಸೀಸ್ 2ನೇ ಟಿ20 ಇಂದು ನಡೆಯುವುದೇ ಅನುಮಾನ; ತಿರುವನಂತಪುರಂನಲ್ಲಿ ಬಿಟ್ಟೂ ಬಿಡದೆ ಕಾಡ್ತಿದೆ ಮಳೆ

India vs Australia 2nd T20: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯ ನಡೆಯುವುದೇ ಅನುಮಾನ ಎಂದು ಹೇಳಲಾಗುತ್ತಿದೆ.

ಮೈದಾನದಲ್ಲಿ ಮಳೆ ಸುರಿದಿರುವ ದೃಶ್ಯ,
ಮೈದಾನದಲ್ಲಿ ಮಳೆ ಸುರಿದಿರುವ ದೃಶ್ಯ,

ಆಸ್ಟ್ರೇಲಿಯಾ ಎದುರಿನ ಮೊದಲ ಟಿ20ಯಲ್ಲಿ ಹೈಸ್ಕೋರಿಂಗ್ ಕದನ ಗೆದ್ದಿರುವ ಭಾರತ, ಇದೀಗ ಎರಡನೇ ಪಂದ್ಯಕ್ಕೆ (India vs Australia 2nd T20) ಸಜ್ಜಾಗಿದೆ. ಕೇರಳದ ತಿರುವನಂತಪುರಂನ ಗ್ರೀನ್​ಫೀಲ್ಡ್ ಇಂಟರ್​​ನ್ಯಾಷನಲ್​ ಮೈದಾನದಲ್ಲಿ (Greenfield International Stadium, Thiruvananthapuram) ಇಂದು (ನವೆಂಬರ್ 26) ಇಂಡೋ-ಆಸೀಸ್​ ನಡುವೆ 2ನೇ ಚುಟುಕು ಕದನ ನಡೆಯಲಿದೆ. ಆದರೆ, ಈ ಪಂದ್ಯ ಜರುಗುವುದೇ ಅನುಮಾನ.

ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್ ಬಲದಿಂದ ಟೀಮ್ ಇಂಡಿಯಾ ಗೆದ್ದರೂ ಬೌಲಿಂಗ್​​ನಲ್ಲಿ ನೀರಸ ಪ್ರದರ್ಶನ ತೋರಿತು. ಹಾಗಾಗಿ ಹಲವು ಬದಲಾವಣೆಯೊಂದಿಗೆ ಆಸೀಸ್​ ಬ್ಯಾಟಿಂಗ್ ಲೈನಪ್ ಎದುರಿಸಲು ಭಾರತ ಸಿದ್ಧವಾಗಿದೆ. ರನ್​ ಲೀಕ್​ ಮಾಡುವುದನ್ನು ನಿಲ್ಲಿಸುವುದರ ಜೊತೆಗೆ ಆಸೀಸ್​​ ಬ್ಯಾಟಿಂಗ್ ವೇಗಕ್ಕೆ ಕಡಿವಾಣಕ್ಕೆ ಹಾಕಲು ಸಜ್ಜಾಗಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಇಂದು ತಿರುವನಂತಪುರಂನಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ 60 ರಷ್ಟು ಇದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ನಿನ್ನೆಯೂ ಭಾರಿ ಮಳೆ ಸುರಿದಿದೆ. ಇತ್ತೀಚಿಗೆ ಹಲವು ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಅದೇ ರೀತಿ ಇಂದು (ನವೆಂಬರ್ 26) ಸಹ ಗುಡುಗು ಸಹಿತ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ.

ಅದರಲ್ಲೂ ರಾತ್ರಿ ವೇಳೆಯೇ ವರುಣನ ಆಗಮನ ಹೆಚ್ಚಿರಲಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಶೇ 55 ರಿಂದ 60ರವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ. ಶೇ 11ರಷ್ಟು ಗುಡುಗು ಸಹಿತ ಮಳೆ ಬೀಳುವ ನಿರೀಕ್ಷೆ ಇದೆ. ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೌಲರ್​ಗಳಿಗೆ ನೆರವು ಈ ಪಿಚ್​

ಗ್ರೀನ್​ಫೀಲ್ಡ್​ ಅಂತಾರಾಷ್ಟ್ರೀಯ ಮೈದಾನವು ಬೌಲರ್​​​ಗಳಿಗೆ ಹೆಚ್ಚು ನೆರವು ನೀಡಲಿದೆ. ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಗುವುದಿಲ್ಲ. ಈ ಮೈದಾನದಲ್ಲಿ ಮೊದಲ ಮತ್ತು ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ 114. ಈವರೆಗೂ 3 ಟಿ20 ಪಂದ್ಯಗಳು ಜರುಗಿದ್ದು, ಮೊದಲು ನಡೆಸಿದ ತಂಡಗಳು ಎರಡು ಬಾರಿ ಗೆದ್ದಿವೆ. ಈ ಮೈದಾನದಲ್ಲಿ ಗರಿಷ್ಠ ಸ್ಕೋರ್ 173/2.

ಇಂಡೋ - ಆಸೀಸ್​ ಟಿ20 ಮುಖಾಮುಖಿ ದಾಖಲೆ

  • ಒಟ್ಟು ಪಂದ್ಯಗಳು - 27
  • ಭಾರತ - 16
  • ಆಸ್ಟ್ರೇಲಿಯಾ - 10
  • ಫಲಿತಾಂಶ ಇಲ್ಲ - 1

2ನೇ ಟಿ20ಗೆ ಭಾರತ ಸಂಭಾವ್ಯ ತಂಡ

ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ವಾಷಿಂಗ್ಟನ್ ಸುಂದರ್.

2ನೇ ಟಿ20ಗೆ ಆಸ್ಟ್ರೇಲಿಯಾ ಸಂಭಾವ್ಯ ತಂಡ

ಮ್ಯಾಥ್ಯೂ ಶಾರ್ಟ್ / ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆರನ್ ಹಾರ್ಡಿ / ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್/ನಾಯಕ), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ / ಆ್ಯಡಂ ಜಂಪಾ.

ಭಾರತ vs ಆಸ್ಟ್ರೇಲಿಯಾ T20 ಸರಣಿ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ 1ನೇ ಟಿ20: ನ.​ 23, ವಿಶಾಖಪಟ್ಟಣ (ಭಾರತ ತಂಡಕ್ಕೆ 2 ವಿಕೆಟ್​ ಗೆಲುವು)

ಭಾರತ vs ಆಸ್ಟ್ರೇಲಿಯಾ 2ನೇ ಟಿ20: ನ. 26, ತಿರುವನಂತಪುರ

ಭಾರತ vs ಆಸ್ಟ್ರೇಲಿಯಾ 3ನೇ ಟಿ20: ನ. 28, ಗುವಾಹಟಿ

ಭಾರತ vs ಆಸ್ಟ್ರೇಲಿಯಾ 4ನೇ T20: ಡಿ. 1, ನಾಗ್ಪುರ

ಭಾರತ vs ಆಸ್ಟ್ರೇಲಿಯಾ 5ನೇ ಟಿ20: ಡಿ. 3, ಹೈದರಾಬಾದ್‌