ಇಂಡೋ-ಆಸೀಸ್ ಪಿಂಕ್ ಬಾಲ್ ಟೆಸ್ಟ್: ಅಡಿಲೇಡ್ ಓವಲ್ ಪಿಚ್ ರಿಪೋರ್ಟ್, ಹವಾಮಾನ ವರದಿ, ಪ್ಲೇಯಿಂಗ್ 11, ಮುಖಾಮುಖಿ ದಾಖಲೆ ವಿವರ
India vs Australia 2nd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಡಿಲೇಡ್‌ನ ಓವಲ್ ಮೈದಾನದಲ್ಲಿ ನಡೆಯಲಿದೆ. ಇಲ್ಲಿನ ವೆದರ್ ರೆಪೋರ್ಟ್, ಪಿಚ್ ರಿಪೋರ್ಟ್ ಹೇಗಿದೆ ಎಂಬುದನ್ನು ತಿಳಿಯೋಣ.
ಬಾರ್ಡರ್ ಗವಾಸ್ಕರ್ ಟ್ರೋಫಿಯ 2ನೇ ಪಂದ್ಯ ಡಿಸೆಂಬರ್ 6 ರಿಂದ ಶುರುವಾಗಲಿದೆ. ಅಡಿಲೇಡ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯ, ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ. ಕಳೆದ ಬಾರಿ ಆಸೀಸ್ ನೆಲದಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್ನಲ್ಲಿ ಇದೇ ಮೈದಾನದಲ್ಲಿ ಭಾರತ ತಂಡ ಕೇವಲ 36 ರನ್ಗಳಿಗೆ ಆಲೌಟ್ ಆಲೌಟ್ ಆಗಿತ್ತು. ಅಲ್ಲದೆ, ಹೀನಾಯ ಸೋಲಿಗೆ ಶರಣಾಗಿತ್ತು. ಪ್ರಸ್ತುತ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದಿರುವ ಭಾರತ 2ನೇ ಟೆಸ್ಟ್ನಲ್ಲೂ ಜಯದ ನಗೆ ಬೀರುವ ವಿಶ್ವಾಸದಲ್ಲಿದೆ. ಆಸೀಸ್ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ಪಂದ್ಯಕ್ಕೂ ಮುನ್ನ ಅಡಿಲೇಡ್ ಓವಲ್‌ನ ಪಿಚ್‌ನ ಸ್ಥಿತಿ ಮತ್ತು ಹವಾಮಾನ ಪರಿಸ್ಥಿತಿ ತಿಳಿಯೋಣ.
ಅಡಿಲೇಡ್ ಓವಲ್ ಪಿಚ್ ರಿಪೋರ್ಟ್
ಅಡಿಲೇಡ್‌ನ ಪಿಚ್‌ನಲ್ಲಿ ಆರು ಮಿಲಿಮೀಟರ್ ಹುಲ್ಲು ಕಾಣಿಸುತ್ತದೆ. ಇದು ಚೆಂಡು ಬೌನ್ಸ್ ಆಗಲು ನೆರವಾಗುತ್ತದೆ. ವೇಗದ ಬೌಲರ್‌ಗಳಿಗೆ ಸಹಾಯಕವಾಗುವ ಈ ಪಿಚ್‌ನಲ್ಲಿ ಸಂಜೆ ಬೀಸುವ ಗಾಳಿಯ ನಂತರ ಚೆಂಡಿಗೆ ಸ್ವಿಂಗ್ ಮತ್ತು ಸೀಮ್ ನೀಡುತ್ತದೆ. ಕಳೆದ ಬಾರಿ ಭಾರತ ಇಲ್ಲಿ ಆಡಲು ಬಂದಾಗ ಮೂರು ದಿನಗಳಲ್ಲಿ ಪಂದ್ಯ ಮುಗಿದಿತ್ತು. ಇಲ್ಲಿ ಬೌಲರ್ಗಳು ಮೇಲುಗೈ ಸಾಧಿಸಿದರೆ, ಬ್ಯಾಟರ್ಗಳು ರನ್ ಗಳಿಸಲು ಕಷ್ಟಪಡಬೇಕಾಗುತ್ತದೆ. ಹಗಲು ರಾತ್ರಿ ಟೆಸ್ಟ್ನಲ್ಲಿ ಚೆಂಡು ಸ್ವಿಂಗ್ ಆಗಲಿದ್ದು, ಅಡಿಲೇಡ್ ಓವಲ್ ಪರಿಸ್ಥಿತಿಗಳು ಬ್ಯಾಟ್ಸ್ಮನ್ಗಳಿಗೆ ಈ ಸವಾಲು ಹೆಚ್ಚಿಸುವ ನಿರೀಕ್ಷೆಯಿದೆ. ಓವಲ್ನಲ್ಲಿ ಟಾಸ್ ಜಯಿಸಿದ ತಂಡಗಳಿಗೆ ಮಿಶ್ರ ಫಲಿತಾಂಶ ಕಂಡಿದೆ. ಇಲ್ಲಿ ಆಡಿದ 6 ಹಗಲು/ರಾತ್ರಿ ಟೆಸ್ಟ್‌ಗಳಲ್ಲಿ ಟಾಸ್ ಗೆದ್ದ ತಂಡವು ಕೇವಲ ಮೂರು ಬಾರಿ ಮಾತ್ರ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ತಂಡಗಳೇ ಮೂರರಲ್ಲಿ ಗೆದ್ದಿವೆ.
ಹವಾಮಾನ ಸ್ಥಿತಿ: ಮಳೆ ಬರುವುದು ಖಚಿತ
ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲ ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 6 ರಂದು 88 ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. accuweather.com ಪ್ರಕಾರ, ಮೋಡ ಕವಿದ ವಾತಾವರಣ ಇರಲಿದೆ. ಪಂದ್ಯ ಆರಂಭವಾಗುವ ಸಮಯಕ್ಕೆ ಸರಿಯಾಗಿ ಗುಡುಗು ಸಹಿತ ಮಳೆ ಕಾಣಿಸಿಕೊಳ್ಳಲಿದೆ. ಐದು ದಿನಗಳಲ್ಲಿ (ಡಿಸೆಂಬರ್ 6 ರಿಂದ ಡಿಸೆಂಬರ್ 10 ರವರೆಗೆ) ಹವಾಮಾನವು ಭಾಗಶಃ ಮೋಡ ಕವಿದ ವಾತಾವರಣವೇ ಇರುತ್ತದೆ. ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಮಳೆಯಾದರೆ ಪಿಚ್‌ನ ನಡವಳಿಕೆಯ ಮೇಲೆ ಪರಿಣಾಮ ಬೀರಬಹುದು.
ಅಡಿಲೇಡ್‌ನಲ್ಲಿ ಭಾರತದ ದಾಖಲೆ
ಭಾರತ ಅಡಿಲೇಡ್‌ನ ಓವಲ್ ಮೈದಾನದಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇಲ್ಲಿ ಕೇವಲ ಕೇವಲ 2ರಲ್ಲಿ ಗೆದ್ದಿರುವ ಭಾರತ ತಂಡ, 8 ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ. 3 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ಒಟ್ಟು 82 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 45ರಲ್ಲಿ ಗೆದ್ದಿದೆ, 18ರಲ್ಲಿ ಸೋತಿದೆ ಮತ್ತು 19 ಡ್ರಾ ಆಗಿದೆ.
ಇಂಡೋ-ಆಸೀಸ್ನಲ್ಲಿ ಮುಖಾಮುಖಿ ದಾಖಲೆ
ಒಟ್ಟು ಪಂದ್ಯ: 108
ಭಾರತ ಗೆಲುವು: 33
ಆಸ್ಟ್ರೇಲಿಯಾ ಗೆಲುವು: 45
ಡ್ರಾ ಪಂದ್ಯ: 29
ಟೈ - 01
ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್/ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.
ಆಸ್ಟ್ರೇಲಿಯಾ ತಂಡ (2ನೇ ಟೆಸ್ಟ್ಗೆ ಪ್ರಕಟ)
ನಾಥನ್ ಮೆಕ್‌ಸ್ವೀನಿ, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.