ಬಿಟ್ಟೂ ಬಿಡದೆ ಕಾಡುತ್ತಿರುವ ಟ್ರಾವಿಸ್ ಹೆಡ್; ಸೋಲಿನ ಭೀತಿಗೆ ಸಿಲುಕಿದ ಭಾರತ, ಆಸೀಸ್ ಹಿಡಿತದಲ್ಲಿ ಪಿಂಕ್ ಬಾಲ್ ಟೆಸ್ಟ್
India vs Australia 2nd Test Day 2: ಬಾರ್ಡರ್ ಗವಾಸ್ಕರ್ ಟ್ರೋಫಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಭೀತಿಗೆ ಸಿಲುಕಿದೆ. ಆಸ್ಟ್ರೇಲಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದೆ.
ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ. ಪ್ರಥಮ ಇನ್ನಿಂಗ್ಸ್ ಬಳಿಕ ದ್ವಿತೀಯ ಇನ್ನಿಂಗ್ಸ್ನಲ್ಲೂ ಕೆಟ್ಟ ಬ್ಯಾಟಿಂಗ್ ಪ್ರದರ್ಶನದ ಕಾರಣ ಆಸೀಸ್ ನೆಲದಲ್ಲಿ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಕನಸು ಕಮರುವ ಸ್ಥಿತಿಗೆ ಬಂದಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 128 ರನ್ ಗಳಿಸಿರುವ ಭಾರತ, ಇನ್ನೂ 29 ರನ್ಗಳ ಹಿನ್ನಡೆಯಲ್ಲಿದೆ. ಭಾರತ ತಂಡವನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಟ್ರಾವಿಸ್ ಹೆಡ್, ಭರ್ಜರಿ ಶತಕ ಸಿಡಿಸಿ ಶೋಚನಿಯ ಸ್ಥಿತಿಗೆ ತಂದಿಟ್ಟಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಸಂಪೂರ್ಣ ಆಸೀಸ್ ಹಿಡಿತದಲ್ಲಿದೆ
ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 180ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಆಸೀಸ್ ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು. ಇಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಕಾಂಗರೂ ಪಡೆ ಆರಂಭಿಕ ಡಬಲ್ ಆಘಾತಕ್ಕೆ ಒಳಗಾಯಿತು. ಸ್ಟೀವ್ ಸ್ಮಿತ್ (02) ಮತ್ತು ನಾಥನ್ ಮೆಕ್‌ಸ್ವೀನಿ (39) ಅವರು ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಔಟಾದರು. ಆದರೆ ಆ ಬಳಿಕ ಒಂದಾದ ಮಾರ್ನಸ್ ಲಬುಶೇನ್ ಮತ್ತು ಟ್ರಾವಿಸ್ ಹೆಡ್ ಜೋಡಿ, 4ನೇ ವಿಕೆಟ್ಗೆ 65 ರನ್ಗಳ ಜೊತೆಯಾಟವಾಡಿದರು. ಲಬುಶೇನ್ 64 ರನ್ ಸಿಡಿಸಿ ನಿತೀಶ್ ರೆಡ್ಡಿ ಬೌಲಿಂಗ್ನಲ್ಲಿ ಹೊರನಡೆದರು.
ಇದರ ನಡುವೆಯೂ ಅಬ್ಬರಿಸಿದ ಟ್ರಾವಿಸ್ ಹೆಡ್, ಭಾರತೀಯ ಬೌಲರ್ಗಳ ಚಳಿ ಬಿಡಿಸಿ ಶತಕವನ್ನೂ ಬಾರಿಸಿದರು. ಪಿಂಕ್ ಬಾಲ್ ಟೆಸ್ಟ್ನಲ್ಲಿ ವೇಗದ ಶತಕ ಬಾರಿಸಿದ ಹೆಗ್ಗಳಿಕೆಗೂ ಪಾತ್ರರಾದರು. 5ನೇ ವಿಕೆಟ್ಗೆ 40, 6ನೇ ವಿಕೆಟ್ಗೆ 74 ರನ್ಗಳ ಭರ್ಜರಿ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು. 141 ಎಸೆತಗಳಲ್ಲಿ 140 ರನ್ ಸಿಡಿಸಿ ಔಟಾದರು. ಹೆಡ್ ಅಬ್ಬರಿಸುತ್ತಿದ್ದರೆ ಮಿಚೆಲ್ ಮಾರ್ಷ್ 9, ಅಲೆಕ್ಸ್ ಕ್ಯಾರಿ 15, ಪ್ಯಾಟ್ ಕಮಿನ್ಸ್ 12, ಮಿಚೆಲ್ ಸ್ಟಾರ್ಕ್ 18 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಆಸೀಸ್ 87.3 ಓವರ್ಗಳಲ್ಲಿ 337 ರನ್ಗಳಿಸಿ ಆಲೌಟ್ ಆಗಿದ್ದಲ್ಲದೆ, 157 ರನ್ಗಳ ಮುನ್ನಡೆ ಪಡೆಯಿತು. ಸಿರಾಜ್, ಬುಮ್ರಾ ತಲಾ 4 ವಿಕೆಟ್ ಪಡೆದು ಮಿಂಚಿದರು.
ಸಂಕಷ್ಟದಲ್ಲಿ ಭಾರತ ತಂಡ
157 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಮತ್ತೆ ಕಳಪೆ ಬ್ಯಾಟಿಂಗ್ ಮುಂದುವರೆಸಿದೆ. ಘಟಾನುಘಟಿ ಬ್ಯಾಟರ್ಗಳೇ ಇದ್ದರೂ ಆಸೀಸ್ ಬೌಲರ್ಗಳ ಮುಂದೆ ಮಂಕಾಗಿದ್ದಾರೆ. ರನ್ ಗಳಿಸಲು ಪರದಾಡುತ್ತಿದ್ದಾರೆ. ಕೆಎಲ್ ರಾಹುಲ್ 7 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 24, ಶುಭ್ಮನ್ ಗಿಲ್ 28 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಇನ್ನಿಂಗ್ಸ್ನಲ್ಲಾದರೂ ಮಿಂಚುತ್ತಾರೆ ಎಂದು ನಿರೀಕ್ಷೆ ಹುಟ್ಟು ಹಾಕಿದ್ದ ವಿರಾಟ್ ಕೊಹ್ಲಿ 11, ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾದರು. ಪ್ರಸ್ತುತ ರಿಷಭ್ ಪಂತ್ 28, ನಿತೀಶ್ ಕುಮಾರ್ ರೆಡ್ಡಿ 15 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸ್ಕಾಟ್ ಬೋಲ್ಯಾಂಡ್, ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್, ಸ್ಟಾರ್ಕ್ 1 ವಿಕೆಟ್ ಪಡೆದಿದ್ದಾರೆ. 2ನೇ ದಿನದ ಅಂತ್ಯಕ್ಕೆ ಭಾರತ 128 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದು, 29 ರನ್ಗಳ ಹಿನ್ನಡೆಯಲ್ಲಿದೆ.
ಭಾರತ ತಂಡಕ್ಕೆ ಮತ್ತೆ ಕಾಡಿದ ಟ್ರಾವಿಸ್ ಹೆಡ್
2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮತ್ತು ಅದೇ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಟ್ರೋಫಿ ಗೆಲುವಿಗೆ ಅಡ್ಡಿಯಾಗಿದ್ದ ಟ್ರಾವಿಸ್ ಹೆಡ್ ಇದೀಗ ಪಿಂಕ್ ಬಾಲ್ ಟೆಸ್ಟ್ನಲ್ಲೂ ಮತ್ತೆ ಕಾಡಿದ್ದಾರೆ. ಈ ಹಿಂದೆ ಎರಡು ಪ್ರಮುಖ ಪಂದ್ಯಗಳಲ್ಲಿ ಕಾಡಿದ್ದ ಹೆಡ್, ಎರಡನೇ ಟೆಸ್ಟ್ನಲ್ಲಿ 141 ಎಸೆತಗಳಲ್ಲಿ 17 ಬೌಂಡರಿ, 4 ಸಿಕ್ಸರ್ ಸಹಿತ 140 ರನ್ ಬಾರಿಸಿ ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕಳೆದ ಪಂದ್ಯಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದ ಹೆಡ್, ಇದೀಗ ಲಯಕ್ಕೆ ಮರಳಿದ್ದು ಮುಂದಿನ ಪಂದ್ಯಗಳಲ್ಲೂ ಇದೇ ಆಟವನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಟೀಮ್ ಇಂಡಿಯಾ ಮುಂದಿರುವ ಅವಕಾಶವೇನು?
ಪ್ರಸ್ತುತ ಟೀಮ್ ಇಂಡಿಯಾ ಮುಂದೆ ಒಂದೇ ಒಂದು ಅವಕಾಶ ಇದೆ. ಅದು ಏನೆಂದರೆ ರಿಷಭ್ ಪಂತ್, ಭಾರತ ತಂಡವನ್ನು ರಕ್ಷಿಸಿ ಬೃಹತ್ ಗುರಿ ನೀಡುವುದು. ಹೌದು, ಪ್ರಸ್ತುತ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿರುವ ಭಾರತಕ್ಕೆ ರಿಷಭ್ ಪಂತ್ ಆಸರೆಯಾಗಬೇಕು. ಈ ಪಿಚ್ಗಳಲ್ಲಿ ಆಡಿರುವ ಅನುಭವ ಹೊಂದಿರುವ ಪಂತ್, ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಬೇಕು. ಅವರಿಗೆ ನಿತೀಶ್ ಕುಮಾರ್ ರೆಡ್ಡಿ ಸಾಥ್ ನೀಡಬೇಕು. ವಿಕೆಟ್ ಕಾಪಾಡಿಕೊಳ್ಳಬೇಕು. ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ 300 ರನ್ಗಳ ಗುರಿ ನೀಡಿದರೆ ಗೆಲ್ಲುವ ಸಾಧ್ಯತೆ ಇದೆ. ರವಿಚಂದ್ರನ್ ಅಶ್ವಿನ್ ಕೂಡ ಇವರಿಗೆ ಸಾಥ್ ಕೊಡಬೇಕು.