ಬ್ರಿಸ್ಬೇನ್‌ನಲ್ಲಿ ಮಳೆ; ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್‌ಗೆ ಅಡ್ಡಿ ಸಾಧ್ಯತೆ; ಗಬ್ಬಾ ಹವಾಮಾನ ವರದಿ
India vs Australia: ಡಿಸೆಂಬರ್ 14ರಂದು ಭಾರತ vs ಆಸ್ಟ್ರೇಲಿಯಾ ತಂಡಗಳ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಪಂದ್ಯ ನಡೆಯಲಿದ್ದು, ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡು ಪಂದ್ಯಗಳು ಮುಕ್ತಾಯಗೊಂಡಿದ್ದು, ಸರಣಿ 1-1ರಲ್ಲಿ ಸಮಬಲಗೊಂಡಿದೆ. ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ 10 ವಿಕೆಟ್‌ಗಳ ಜಯ ಸಾಧಿಸಿದ್ದು, ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಟ್ಟು ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಬ್ರಿಸ್ಬೇನ್‌ನ ದಿ ಗಬ್ಬಾ ಸ್ಟೇಡಿಯಂನಲ್ಲಿ ನಡೆಯಲಿದೆ. ಕಳೆದ ಬಾರಿಯ ಆಸೀಸ್ ಪ್ರವಾಸದ ವೇಳೆ, ಗಬ್ಬಾ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಜಯ ಸಾಧಿಸಿತ್ತು. ಹೀಗಾಗಿ ಈ ಬಾರಿಯ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಡಿಸೆಂಬರ್ 14ರ ಶನಿವಾರ ಬ್ರಿಸ್ಬೇನ್‌ನಲ್ಲಿ ಟೆಸ್ಟ್ ಆರಂಭವಾಗಲಿದೆ. ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಡಿಸೆಂಬರ್ 11ರ ಬುಧವಾರ ಬೆಳಗ್ಗೆ ಬ್ರಿಸ್ಬೇನ್ ನಗರದಲ್ಲಿ ಮಳೆಯಾಗಿದೆ. ವರ್ಷದಲ್ಲಿ ಎರಡನೇ ಅತಿ ಹೆಚ್ಚು ಮಳೆ ಈ ದಿನ ದಾಖಲಾಗಿದೆ. ಹೀಗಾಗಿ ಮಳೆ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಬ್ರಿಸ್ಬೇನ್ ನಗರದಾದ್ಯಂತ ಭಾರಿ ಮಳೆಯಾಗಿದ್ದು, ಪಂದ್ಯದ ದಿನವೂ ವರುಣಾಗಮನವಾಗುವ ಸಾಧ್ಯತೆಯಿಂದ ಆತಂಕ ಹೆಚ್ಚಾಗಿದೆ.
ಆಕ್ಯುವೆದರ್ ಹವಾಮಾನ ಮುನ್ಸೂಚನಾ ವರದಿ ಪ್ರಕಾರ, ಬುಧವಾರ ಮತ್ತು ಗುರುವಾರ ಬ್ರಿಸ್ಬೇನ್‌ನಲ್ಲಿ ಮಳೆಯ ಸಾಧ್ಯತೆ ಇದೆ. ಈ ಮುನ್ಸೂಚನೆಯು, ಬ್ರಿಸ್ಬೇನ್‌ನಲ್ಲಿ ಪಂದ್ಯದ ದಿನವಾದ ಶನಿವಾರ ಭಾಗಶಃ ಮೋಡದೊಂದಿಗೆ 88 ಪ್ರತಿಶತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಭಾನುವಾರದಂದು 20 ಪ್ರತಿಶತ ಮಳೆಯಾಗುವ ಸಾಧ್ಯತೆ ಇದ್ದು, ಆ ನಂತರದ ನಾಲ್ಕು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 25ರಷ್ಟಿದೆ ಎಂದು ಹೇಳಿದೆ.
ಭಾರತಕ್ಕೆ ಪಂದ್ಯದಲ್ಲಿ ಗೆಲ್ಲೇಬೇಕಾದ ಒತ್ತಡವಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ತಂಡವು, ಫೈನಲ್ ಪ್ರವೇಶಿಸಬೇಕಾದರೆ, ಮುಂದಿನ ಮೂರೂ ಪಂದ್ಯಗಳಲ್ಲಿ ಗೆಲುವು ಒಲಿಸಬೇಕಾಗಿದೆ. ಒಂದು ಸೋಲು ಕಂಡರೂ, ಫೈನಲ್ ಅವಕಾಶವನ್ನು ಮತ್ತಷ್ಟು ಕ್ಲಿಷ್ಟಕರವಾಗಿಸಲಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ಚಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.