ನಿತೀಶ್ ರೆಡ್ಡಿ ಶತಕದಾಟ, ಸುಂದರ್​ ಜೊತೆ 128 ರನ್​ಗಳ ಜೊತೆಯಾಟ; 4ನೇ ಟೆಸ್ಟ್​ನಲ್ಲಿ ಭಾರತ ದಿಟ್ಟ ಹೋರಾಟ, ಆದರೂ ಸಂಕಷ್ಟ
ಕನ್ನಡ ಸುದ್ದಿ  /  ಕ್ರಿಕೆಟ್  /  ನಿತೀಶ್ ರೆಡ್ಡಿ ಶತಕದಾಟ, ಸುಂದರ್​ ಜೊತೆ 128 ರನ್​ಗಳ ಜೊತೆಯಾಟ; 4ನೇ ಟೆಸ್ಟ್​ನಲ್ಲಿ ಭಾರತ ದಿಟ್ಟ ಹೋರಾಟ, ಆದರೂ ಸಂಕಷ್ಟ

ನಿತೀಶ್ ರೆಡ್ಡಿ ಶತಕದಾಟ, ಸುಂದರ್​ ಜೊತೆ 128 ರನ್​ಗಳ ಜೊತೆಯಾಟ; 4ನೇ ಟೆಸ್ಟ್​ನಲ್ಲಿ ಭಾರತ ದಿಟ್ಟ ಹೋರಾಟ, ಆದರೂ ಸಂಕಷ್ಟ

India vs Australia 4th Test Day 3: ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ನಿತೀಶ್ ರೆಡ್ಡಿ ಶತಕದಾಟ, ವಾಷಿಂಗ್ಟನ್​ ಸುಂದರ್​ ಅವರೊಂದಿಗೆ 128 ರನ್​ಗಳ ಜೊತೆಯಾಟದೊಂದಿಗೆ ದಿಟ್ಟ ಹೋರಾಟ ನಡೆಸಿರುವ ಟೀಮ್ ಇಂಡಿಯಾ ಇನ್ನೂ 116 ರನ್​ಗಳ ಹಿನ್ನಡೆಯಲ್ಲಿದೆ.

ನಿತೀಶ್ ರೆಡ್ಡಿ ಶತಕದಾಟ, ಸುಂದರ್​ ಜೊತೆ 128 ರನ್​ಗಳ ಜೊತೆಯಾಟ; 4ನೇ ಟೆಸ್ಟ್​ನಲ್ಲಿ ಭಾರತ ದಿಟ್ಟ ಹೋರಾಟ, ಆದರೂ ಸಂಕಷ್ಟ
ನಿತೀಶ್ ರೆಡ್ಡಿ ಶತಕದಾಟ, ಸುಂದರ್​ ಜೊತೆ 128 ರನ್​ಗಳ ಜೊತೆಯಾಟ; 4ನೇ ಟೆಸ್ಟ್​ನಲ್ಲಿ ಭಾರತ ದಿಟ್ಟ ಹೋರಾಟ, ಆದರೂ ಸಂಕಷ್ಟ

ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಶತಕ (105) ಮತ್ತು ವಾಷಿಂಗ್ಟನ್ ಸುಂದರ್ (50) ಅವರ ಅರ್ಧಶತಕದ ದಿಟ್ಟ ಹೋರಾಟದ ಮಧ್ಯೆ ಟೀಮ್ ಇಂಡಿಯಾ, ಮೂರನೇ ದಿನದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದೆ. ಆದರೆ ಇನ್ನು 116 ರನ್​ಗಳ ಹಿನ್ನಡೆಯಲ್ಲಿದೆ. ಭಾರತ ತಂಡ ಫಾಲೋ ಆನ್​ನಿಂದ ಪಾರಾಗಿದೆಯೇ ಹೊರತು ಸಂಕಷ್ಟದಿಂದಲ್ಲ ಎಂಬುದನ್ನು ಇದು ಸೂಚಿಸುತ್ತಿದೆ. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್​ ರೆಡ್ಡಿ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ಶತಕ ಪೂರೈಸಿದ್ದರ ಜತೆಗೆ ಸುಂದರ್ ಅವರೊಂದಿಗೆ 128 ರನ್​ಗಳ ಪಾಲುದಾರಿಕೆ ನೀಡಿದರು. ಆ ಮೂಲಕ ಭಾರತದ ಬೃಹತ್ ಮೊತ್ತದ ಹಿನ್ನಡೆಯನ್ನು ಇಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 474 ರನ್ ಕಲೆ ಹಾಕಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ 2ನೇ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಕ್ರೀಸ್​ನಲ್ಲಿದ್ದರು. ಇದೇ ಸ್ಕೋರ್​ನೊಂದಿಗೆ ಇಂದು (ಮೂರನೇ ದಿನ) ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ದಿನದಾಟದ ಮೊದಲ ಸೆಷನ್​​ನಲ್ಲೇ ಪಂತ್ (28) ಮತ್ತು ಜಡ್ಡು (17) ಅವರನ್ನು ಕಳೆದುಕೊಂಡಿತು. ಇದು ಒತ್ತಡ ಹೆಚ್ಚಳಕ್ಕೆ ಕಾರಣವಾಯಿತು. ಮೊದಲ ಸೆಷನ್​ನಲ್ಲಿ ಪ್ರಮುಖ 2 ವಿಕೆಟ್ ಪಡೆದ ಆಸೀಸ್ ಮೇಲುಗೈ ಸಾಧಿಸಿತು. ಆದರೆ ಈ ಹಂತದಲ್ಲಿ ಜೊತೆಯಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ದಿಟ್ಟ ಹೋರಾಟ ನಡೆಸಿದರು. ಸ್ಟಾರ್​ ಬೌಲರ್​​ಗಳ ಎದುರೇ ಜವಾಬ್ದಾರಿಯುತ ಆಟವಾಡಿ ಫಾಲೋ ಆನ್​ನಿಂದ ಪಾರು ಮಾಡಿದರು. ಇವರಿಬ್ಬರು ಜೊತೆಯಾದಾಗ ಭಾರತದ ಮೊತ್ತ ​221/7 ಆಗಿತ್ತು.

128 ರನ್​ಗಳ ಜೊತೆಯಾಟ, ಸುಂದರ್ 50, ರೆಡ್ಡಿ 105*

ಸತತ ವಿಕೆಟ್​ ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆಸ್ಟ್ರೇಲಿಯಾ ಸಹ ಬೃಹತ್ ಮುನ್ನಡೆ ಪಡೆಯುತ್ತೇವೆ ಎಂಬ ಲೆಕ್ಕಾಚಾರದಲ್ಲಿತ್ತು. ಆದರೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿಸಿದ್ದು ಮಾತ್ರ ರೆಡ್ಡಿ ಮತ್ತು ಸುಂದರ್ ಅವರ ಬೊಂಬಾಟ್ ಜೊತೆಯಾಟ. ಇದೇ ವೇಳೆ ಸುಂದರ್​ ಮನಮೋಹಕ ಅರ್ಧಶತಕ ಬಾರಿಸಿದರು. ರೆಡ್ಡಿಯೂ ತನ್ನ ಮೊದಲ ಅರ್ಧಶತಕದ ಗಡಿ ದಾಟಿ ಶತಕದ ದಾಪುಗಾಲಿಟ್ಟರು. ಆಸೀಸ್​ ಬೌಲರ್​​ಗಳನ್ನು ಸುಸ್ತುಗೊಳಿಸಿದ ಇಬ್ಬರು 8ನೇ ವಿಕೆಟ್​ಗೆ ಪೇರಿಸಿದ್ದು 128 ರನ್​ಗಳ ಪಾಲುದಾರಿಕೆ. ರೆಡ್ಡಿ ಶತಕದ ಸನಿಹದಲ್ಲಿದ್ದಾಗ, 50 ರನ್ ಗಳಿಸಿದ್ದ ಸುಂದರ್ ಅವರು ನಾಥನ್ ಲಿಯಾನ್​ ಬೌಲಿಂಗ್​​​​ನಲ್ಲಿ ಔಟಾದರು. ಬಳಿಕ ಜಸ್ಪ್ರೀತ್ ಬುಮ್ರಾ ಸಹ ಡಕೌಟ್ ಆದರು. ಇದರ ಬೆನ್ನಲ್ಲೇ ನಿತೀಶ್ ಅವರು 115ನೇ ಓವರ್​​ನ 3ನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ತಮ್ಮ ಚೊಚ್ಚಲ ಶತಕವನ್ನು ಪೂರೈಸಿ ತಂಡಕ್ಕೆ ನೆರವಾದರು.

171 ಎಸೆತಗಳಲ್ಲಿ ರೆಡ್ಡಿ ಭರ್ಜರಿ ಶತಕ

ತಾನು ಎದುರಿಸಿದ 171ನೇ ಎಸೆತದಲ್ಲಿ ಭರ್ಜರಿ ಟೆಸ್ಟ್​​​ ಶತಕ ಪೂರ್ಣಗೊಳಿಸಿದ ನಿತೀಶ್​ ರೆಡ್ಡಿ ಇನ್ನಿಂಗ್ಸ್​​ಗಲ್ಲಿ 10 ಬೌಂಡರಿ, 1 ಸಿಕ್ಸರ್​ ಇತ್ತು. ಇದರೊಂದಿಗೆ ಭಾರತ ತಂಡದ ಮೊತ್ತ 350ರ ಗಡಿ ದಾಟಿಸಿದರು. ಆದರೆ ಇದರ ಬೆನ್ನಲ್ಲೇ ಮಳೆ ಬಂದ ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತವಾಯಿತು. ಮಳೆ ನಿಲ್ಲದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. 3ನೇ ದಿನದ ಪಂದ್ಯದಲ್ಲಿ ಒಟ್ಟು ಎರಡು ಬಾರಿ ಮಳೆ ಅಡ್ಡಿಪಡಿಸಿತು. ನಿತೀಶ್ ರೆಡ್ಡಿ ಜೊತೆಗೆ 2 ರನ್ ಗಳಿಸಿರುವ ಸಿರಾಜ್ ಕ್ರೀಸ್​ನಲ್ಲಿದ್ದು, 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಆಸೀಸ್ ಪರ ಪ್ಯಾಟ್ ಕಮಿನ್ಸ್, ಸ್ಕಾಟ್ ಬೋಲ್ಯಾಂಡ್ ತಲಾ 3 ವಿಕೆಟ್, ನಾಥನ್ ಲಿಯಾನ್ 2 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಅನಿವಾರ್ಯವಾಗಿದೆ. ಆದರೆ ಪರಿಸ್ಥಿತಿ ನೋಡಿದರೆ ಡ್ರಾನಲ್ಲಿ ಅಂತ್ಯ ಕಾಣುವಂತಿದೆ. ಉಳಿದ ಎರಡು ದಿನಗಳಲ್ಲಿ ಪಂದ್ಯದ ಚಿತ್ರಣ ಏನಾಗಬಹುದು ಎಂಬುದನ್ನು ಕಾದುನೋಡೋಣ.

Whats_app_banner