ಮತ್ತದೇ ರಾಗ ಅದೇ ಹಾಡು, ಯಾರಿಗೇಳೋಣ ಭಾರತ ತಂಡದ ಪಾಡು; ಸಿಡ್ನಿ ಟೆಸ್ಟ್ನಲ್ಲೂ ತತ್ತರಿಸಿದ ಬುಮ್ರಾ ಪಡೆ 185 ರನ್ಗೆ ಆಲೌಟ್
India vs Australia 5th Test: ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 185 ರನ್ಗಳಿಗೆ ಆಲೌಟ್ ಆಗಿದೆ. ಸ್ಕಾಟ್ ಬೋಲ್ಯಾಂಡ್ ಮತ್ತು ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ, ಅಲ್ಪ ಮೊತ್ತಕ್ಕೆ ಕುಸಿದಿದೆ.
ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡದ ಪರಿಸ್ಥಿತಿ ಮತ್ತದೇ ರಾಗ, ಅದೇ ಹಾಡು ಎನ್ನುವಂತಾಗಿದೆ. ಟೀಮ್ ಇಂಡಿಯಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಆಸ್ಟ್ರೇಲಿಯಾ ಬೌಲರ್ಗಳ ದಾಳಿಗೆ ತತ್ತರಿಸಿ ಅಲ್ಪಮೊತ್ತಕ್ಕೆ ಕುಸಿದಿದೆ. ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್ರ ಸುನಾಮಿ ಬೌಲಿಂಗ್ಗೆ ಬೆದರಿದ ಭಾರತ ತಂಡವು ಐದನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 185 ರನ್ಗಳಿಗೆ ಆಲೌಟ್ ಆಗಿದೆ. ಇದು ಸರಣಿಯನ್ನು ಕಳೆದುಕೊಳ್ಳುವ ಭೀತಿಯನ್ನು ಸೃಷ್ಟಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಸೇರಿ ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿದ ಭಾರತ ತಂಡ, ಅದ್ಭುತ ಪ್ರದರ್ಶನ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಪಂದ್ಯದ ಆರಂಭದಿಂದ ಹಿಡಿದು ಆಲೌಟ್ ಆಗುವ ತನಕ ಯಾರೊಬ್ಬರೂ ಕ್ರೀಸ್ ಕಚ್ಚಿನ ನಿಲ್ಲುವ ಯತ್ನ ನಡೆಸಲಿಲ್ಲ. ಭಾರತದ ಬ್ಯಾಟರ್ಸ್ ಪ್ರಯತ್ನಿಸಿದರೂ ಅದಕ್ಕೆ ಆಸೀಸ್ ಬೌಲರ್ಗಳು ಅವಕಾಶ ನೀಡಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಯಾವೊಬ್ಬ ಬ್ಯಾಟರ್ ಸಹ ಅರ್ಧಶತಕದ ಗಡಿ ದಾಟಿಲ್ಲ. ಇದರೊಂದಿಗೆ ಬ್ಯಾಟಿಂಗ್ ವಿಭಾಗ ತೀವ್ರ ಟೀಕೆಗೆ ಗುರಿಯಾಗಿದೆ.
ಬ್ಯಾಟರ್ಗಳ ಪೆವಿಲಿಯನ್ ಪರೇಡ್
ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ಪ್ರಸ್ತುತ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇಬ್ಬರು, ತಂಡದ ಮೊತ್ತ 17 ಆಗುವಷ್ಟರಲ್ಲಿ ಜಾಗ ಖಾಲಿ ಮಾಡಿದರು. ಸ್ಟಾರ್ಕ್ ಮತ್ತು ಬೋಲ್ಯಾಂಡ್ ಬೌಲಿಂಗ್ನಲ್ಲಿ ಔಟಾದರು. ಜೈಸ್ವಾಲ್ 10, ಕೆಎಲ್ 4 ರನ್ ಗಳಿಸಿ ಪೆವಿಲಿಯನ್ ಗೂಡು ಸೇರಿಕೊಂಡರು. ನಂತರ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಒಂದಾದರು. ಇವರಿಬ್ಬರು ಮೂರನೇ ವಿಕೆಟ್ಗೆ 40 ರನ್ಗಳ ಪಾಲುದಾರಿಕೆ ನೀಡಿದರು. ಆದರೆ, ಭೋಜನ ವಿರಾಮಕ್ಕೂ ಮುನ್ನ ಒಬ್ಬರು, ಭೋಜನ ವಿರಾಮದ ನಂತರ ಇಬ್ಬೊಬ್ಬರು ಔಟಾದರು.
ಗಿಲ್ (ಭೋಜನ ವಿರಾಮಕ್ಕೂ ಮುನ್ನ) 64 ಎಸೆತಗಳಲ್ಲಿ 20 ರನ್ ಗಳಿಸಿ ನಾಥನ್ ಲಿಯಾನ್ ಬೌಲಿಂಗ್ನಲ್ಲಿ ಔಟಾದರೆ, ಕೊಹ್ಲಿ ಗೋಲ್ಡನ್ ಡಕ್ನಿಂದ ಪಾರಾಗಿದ್ದರೂ ಅದರ ಲಾಭ ಪಡೆಯದೆ 17 ರನ್ಗಳಿಗೆ ಸುಸ್ತಾದರು. ಬೋಲ್ಯಾಂಡ್ ಬೌಲಿಂಗ್ನಲ್ಲಿ ಮತ್ತೆ ಸೈಡ್ ಆಫ್ಸ್ಟಂಪ್ ಎಸೆತಕ್ಕೆ ಕ್ಯಾಚ್ ಕೊಟ್ಟು ಹೋದರು. ಈ ಹಂತದಲ್ಲಿ ಭರವಸೆ ಮೂಡಿಸಿದ್ದು ರಿಷಭ್ ಪಂತ್-ರವೀಂದ್ರ ಜಡೇಜಾ ಬ್ಯಾಟಿಂಗ್. ಸ್ಕೋರ್ ಏರಿಸುವ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಜವಾಬ್ದಾರಿ ಅರಿತು ಆಡುತ್ತಿದ್ದ ಪಂತ್ 40 ರನ್, ಜಡೇಜಾ 26 ರನ್ ಸಿಡಿಸಿ ಔಟಾದರು. ಇಬ್ಬರು ಕ್ರಮವಾಗಿ 98, 95 ಎಸೆತಗಳನ್ನು ಎದುರಿಸಿದರು. ಇಲ್ಲಿ ಸ್ಟಾರ್ಕ್, ಬೋಲ್ಯಾಂಡ್ ಮತ್ತೆ ತಮ್ಮ ತಂಡಕ್ಕೆ ಯಶಸ್ಸು ತಂದುಕೊಟ್ಟರು.
ಸ್ಟಾರ್ಕ್, ಬೋಲ್ಯಾಂಡ್ಗೆ ಕಮಿನ್ಸ್ ಸಾಥ್
ಆ ಬಳಿಕವೂ ಈ ಇಬ್ಬರು ಬೌಲರ್ಗಳ ಅಬ್ಬರ ಮುಂದುವರೆಯಿತು. ಬೋಲ್ಯಾಂಡ್, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಡಕೌಟ್ ಮಾಡಿದರೆ, ಪ್ರಸಿದ್ಧ್ ಕೃಷ್ಣಗೆ ಸ್ಟಾರ್ಕ್ ಗೇಟ್ಪಾಸ್ ಕೊಟ್ಟರು. ಇವರಿಬ್ಬರ ಮಧ್ಯೆ ಪ್ಯಾಟ್ ಕಮಿನ್ಸ್ 14 ರನ್ ಸಿಡಿಸಿದ್ದ ವಾಷಿಂಗ್ಟನ್ ಸುಂದರ್ರನ್ನು ಹೊರ ದಬ್ಬಿದರು. ಇನ್ನು ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ 22 ರನ್ಗಳ ಅಮೂಲ್ಯ ಕಾಣಿಕೆ ನೀಡಿದರು. ಇವರನ್ನು ಆಸೀಸ್ ನಾಯಕ ಕಮಿನ್ಸ್ ಔಟ್ ಮಾಡಿದರು. ಇದರೊಂದಿಗೆ ಭಾರತದ ಇನ್ನಿಂಗ್ಸ್ 185 ರನ್ಗಳಿಗೆ ಅಂತ್ಯಗೊಂಡಿತು. ಬೋಲ್ಯಾಂಡ್ 4, ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2, ನಾಥನ್ ಲಿಯಾನ್ 1 ವಿಕೆಟ್ ಪಡೆದರು.