ಸಿಡ್ನಿ ಟೆಸ್ಟ್‌ ಕೊನೆಯ 2 ದಿನ ಭಾರಿ ಮಳೆಯ ಮುನ್ಸೂಚನೆ; ಸರಣಿ ಸಮಬಲಗೊಳಿಸುವ ಭಾರತದ ನಿರೀಕ್ಷೆಗೆ ಹವಾಮಾನ ಅಡ್ಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಡ್ನಿ ಟೆಸ್ಟ್‌ ಕೊನೆಯ 2 ದಿನ ಭಾರಿ ಮಳೆಯ ಮುನ್ಸೂಚನೆ; ಸರಣಿ ಸಮಬಲಗೊಳಿಸುವ ಭಾರತದ ನಿರೀಕ್ಷೆಗೆ ಹವಾಮಾನ ಅಡ್ಡಿ

ಸಿಡ್ನಿ ಟೆಸ್ಟ್‌ ಕೊನೆಯ 2 ದಿನ ಭಾರಿ ಮಳೆಯ ಮುನ್ಸೂಚನೆ; ಸರಣಿ ಸಮಬಲಗೊಳಿಸುವ ಭಾರತದ ನಿರೀಕ್ಷೆಗೆ ಹವಾಮಾನ ಅಡ್ಡಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್‌ ಟ್ರೋಫಿಯ ಐದನೇ ಪಂದ್ಯಕ್ಕೆ ಮಳೆಯ ಆತಂಕ ಶುರುವಾಗಿದೆ. ಸರಣಿ ಸಮಬಲಗೊಳಿಸುವ ಭಾರತದ ಕನಸಿಗೆ ಹವಾಮಾನ ಸ್ಪಂದಿಸುವ ಸಾಧ್ಯತೆ ಕಡಿಮೆ ಇದೆ. ಬಾರ್ಡರ್-ಗವಾಸ್ಕರ್‌ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಬೇಕಾದರೆ, ರೋಹಿತ್‌ ಶರ್ಮಾ ಪಡೆ ಸಿಡ್ನಿ ಟೆಸ್ಟ್‌ ಗೆಲ್ಲಲೇಬೇಕಾಗಿದೆ.

ಸಿಡ್ನಿ ಟೆಸ್ಟ್‌ ಕೊನೆಯ 2 ದಿನ ಭಾರಿ ಮಳೆಯ ಮುನ್ಸೂಚನೆ; ಭಾರತದ ನಿರೀಕ್ಷೆಗೆ ಹವಾಮಾನ ಅಡ್ಡಿ
ಸಿಡ್ನಿ ಟೆಸ್ಟ್‌ ಕೊನೆಯ 2 ದಿನ ಭಾರಿ ಮಳೆಯ ಮುನ್ಸೂಚನೆ; ಭಾರತದ ನಿರೀಕ್ಷೆಗೆ ಹವಾಮಾನ ಅಡ್ಡಿ (AFP)

ಬಾರ್ಡರ್-ಗವಾಸ್ಕರ್ ಟ್ರೋಫಿಯ (Border - Gavaskar Trophy) ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಜನವರಿ 3ರಿಂದ ಆರಂಭವಾಗಲಿದೆ. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯವು, ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 5 ಗಂಟೆಗೆ ಆರಂಭವಾಗಲಿದೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಗೆದ್ದು, ಸರಣಿ ಸಮಬಲ ಸಾಧಿಸುವುದು ಭಾರತದ ಗುರಿ. ಆ ಮೂಲಕ ಕಳೆದ ಒಂದು ದಶಕದಿಂದ ಆಸ್ಟ್ರೇಲಿಯಾಗೆ ಬಿಟ್ಟುಕೊಡದೆ ಉಳಿಸಿಕೊಂಡಿರುವ ಬಾರ್ಡರ್-ಗವಾಸ್ಕರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವುದು ಭಾರತದ ಲೆಕ್ಕಾಚಾರ. ಇದರೊಂದಿಗೆ ಡಬ್ಲ್ಯುಟಿಸಿ ಫೈನಲ್‌ ಪ್ರವೇಶಿಸುವ ಎಳ್ಳಷ್ಟು ಭರವಸೆಯೂ ತಂಡದಲ್ಲಿದೆ. ಹಾಗಿದ್ದರೆ, ಮಹತ್ವದ ಪಂದ್ಯಕ್ಕೆ ಹವಾಮಾನದ ಸಹಕಾರ ಹೇಗಿರಲಿದೆ ಎಂಬುದನ್ನು ನೋಡೋಣ.

ಎಂಸಿಜಿಯಲ್ಲಿ ಭಾರತದ ವಿರುದ್ಧದ ಬೃಹತ್ ಜಯದ ನಂತರ ಆಸ್ಟ್ರೇಲಿಯಾ ತಂಡ ಸದ್ಯ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಭಾರತವು ಪರ್ತ್ ಟೆಸ್ಟ್ ಗೆಲುವಿನ ಬಳಿಕ, ಸರಣಿಯಲ್ಲಿ ಯಾವುದೇ ಪಂದ್ಯ ಗೆದ್ದಿಲ್ಲ. ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ಸೋಲು ಕಂಡರೆ, ಗಬ್ಬಾದ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಈಗ ನಿರ್ಣಾಯಕ ಟೆಸ್ಟ್‌ ಗೆದ್ದು ಸರಣಿ ಸಮಬಲಗೊಳಿಸುವ ಅವಕಾಶ ಮಾತ್ರ ಭಾರತದ ಮುಂದಿದೆ. ಆದರೆ, ಪಂದ್ಯದ ಕೊನೆಯ ಎರಡು ದಿನಗಳಿಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಸಿಡ್ನಿ ಟೆಸ್ಟ್‌ಗೆ ಮಳೆ ಆತಂಕ

ಹವಾಮಾನ ಮುನ್ಸೂಚನೆಯ ಪ್ರಕಾರ, ಸಿಡ್ನಿ ಟೆಸ್ಟ್‌ ಪಂದ್ಯದ ಮೊದಲ ದಿನದಂದು ಶೇ.25ರಷ್ಟು ಮಳೆಯಾಗುವ ಸಂಭವವಿದೆ. ಮೊದಲ ದಿನದಾಟದಂದು ಸಂಪೂರ್ಣ ಮೋಡ ಕವಿದ ವಾತಾವರಣ ಇರಲಿದೆ ಎಂಬ ಮುನ್ಸೂಚನೆ ಇದೆ. ಎರಡನೇ ದಿನಕ್ಕೆ ಮಳೆಯ ಸಂಭವ ಐದಕ್ಕೆ ಇಳಿಕೆಯಾಗಿದೆ. ಎರಡನೇ ದಿನ ಮತ್ತು ಭಾನುವಾರದಂದು ಬಿಸಿಲು ಇರಲಿದ್ದು, ದಿನದಾಟಕ್ಕೆ ಯಾವುದೇ ಆತಂಕ ಇಲ್ಲ.

ಆದರೆ, ಪಂದ್ಯದ ಕೊನೆಯ ಎರಡು ದಿನಗಳಿಗೆ ಅನುಕೂಕರ ವಾತಾವರಣ ಇರುವ ಸಾಧ್ಯತೆ ಇಲ್ಲ. ನಾಲ್ಕನೇ ದಿನದ ಅಂತ್ಯದ ವೇಳೆಗೆ ತುಂತುರು ಮಳೆ ಸಾಧ್ಯತೆ ಇದ್ದು, ರಾತ್ರಿಯವರೆಗೂ ಮುಂದುವರೆಯಲಿದೆ. ಹೀಗಾಗಿ ಟೆಸ್ಟ್‌ನ ಐದನೇ ದಿನದಾಟ ಆರಂಭದಿಂದಲೂ ನಿರಂತರ ತುಂತುರು ಮಳೆಯ ಮುನ್ಸೂಚನೆ ಇದೆ.

ಬಿಬಿಸಿ ಹವಾಮಾನ ಮುನ್ಸೂಚನೆ ಪ್ರಕಾರ, ಪಂದ್ಯದ ಆರಂಭ ದಿನ ಶುಕ್ರವಾರ ಮಧ್ಯಾಹ್ನ ಸ್ವಲ್ಪಮಟ್ಟಿಗೆ ಮಳೆ ಬೀಳುವ ಸಾಧ್ಯತೆ ಇದೆ. ಆದರೆ ವಾರಾಂತ್ಯದಲ್ಲಿ ಸಾಕಷ್ಟು ಬಿಸಿಲು ಇರುತ್ತದೆ. ಟೆಸ್ಟ್‌ನ ನಾಲ್ಕನೇ ದಿನವಾದ ಸೋಮವಾರ ರಾತ್ರಿ 68 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಆದರೂ ಆಟದ ಸಮಯದಲ್ಲಿ ಆಕಾಶ ಸ್ಪಷ್ಟವಾಗಿರುತ್ತದೆ. ಐದನೇ ದಿನದಾಟ ಭಾರಿ ಮಳೆಯೊಂದಿಗೆ ಆರಂಭವಾಗಲಿದ್ದು, ದಿನವಿಡೀ ಮುಂದುವರೆಯುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಇದೆ.

                                                               ---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner