ಭಾರತ vs ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಟಿಕೆಟ್ ಸೋಲ್ಡ್ ಔಟ್; ಎಂಸಿಜಿಯಲ್ಲಿ ಟೆಸ್ಟ್ ಪಂದ್ಯ ವೀಕ್ಷಣೆಗೆ ಫ್ಯಾನ್ಸ್ ಆಸಕ್ತಿ
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದ ಟಿಕೆಟ್‌ಗಳೆಲ್ಲವೂ ಸೋಲ್ಡ್ ಔಟ್ ಆಗಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಡಿಸೆಂಬರ್ 26ರಿಂದ ಆರಂಭವಾಗಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲೇ ಅತಿ ರೋಚಕ ಸರಣಿ ಬಾರ್ಡರ್-ಗವಾಸ್ಕರ್ ಟ್ರೋಫಿ. ಭಾರತ ಮತ್ತು ಆಸ್ಟ್ರೇಲಿಯಾ (Australia vs India) ತಂಡಗಳ ನಡುವೆ ನಡೆಯುವ ಟೆಸ್ಟ್ ಸರಣಿಗೆ ಈ ಬಾರಿ ಕಾಂಗರೂ ನಾಡು ಆತಿಥ್ಯ ವಹಿಸುತ್ತಿದೆ. ಈವರೆಗೆ ನಡೆದ ಎರಡೂ ಪಂದ್ಯಗಳಿಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಣೆಗೆಂದು ಮೈದಾನಕ್ಕೆ ಹಾಜರಾಗಿದ್ದರು. ಉಭಯ ತಂಡಗಳ ನಡುವೆ ಸದ್ಯ ಸರಣಿ ಸಮಬಲಗೊಂಡಿದ್ದು, ಕೊನೆಯ ಮೂರು ಪಂದ್ಯಗಳು ಹೆಚ್ಚು ರೋಚಕವಾಗಿರಲಿದೆ. ಆಸೀಸ್ ನೆಲದಲ್ಲಿ ಹೆಚ್ಚು ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಆಸಕ್ತಿ ತೋರುತ್ತಿದ್ದಾರೆ.
ಡಿಸೆಂಬರ್ 14ರಿಂದ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್‌ನ ದಿ ಗಬ್ಬಾದಲ್ಲಿ ನಡೆಯಲಿದೆ. ಆ ಬಳಿಕ ನಾಲ್ಕನೇ ಪಂದ್ಯ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿಸೆಂಬರ್ 26ರಿಂದ ಆರಂಭವಾಗುತ್ತಿದೆ. ವಿಶೇಷವೆಂದರೆ, ಮೂರನೇ ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದ ಟಿಕೆಟ್‌ಗಳೆಲ್ಲವೂ ಸೋಲ್ಡ್ ಔಟ್ ಆಗಿವೆ.
“NRMA ಇನ್ಶುರೆನ್ಸ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದ ಎಲ್ಲಾ ಲಭ್ಯವಿರುವ ಸಾರ್ವಜನಿಕ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 'X' ಖಾತೆಯಲ್ಲಿ ಪೋಸ್ಟ್ ಮಾಡಿದೆ. “ಡಿಸೆಂಬರ್ 24ರಂದು ಕಡಿಮೆ ಸಂಖ್ಯೆಯ ಸಾರ್ವಜನಿಕ ಟಿಕೆಟ್‌ಗಳನ್ನು ಅಂತಿಮ ಹಂತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ” ಎಂದು ಅದು ಹೇಳಿದೆ.
ಗರಿಷ್ಠ ಹಾಜರಾತಿ
ಅಡಿಲೇಡ್‌ನಲ್ಲಿ ನಡೆದ ಹಗಲು ರಾತ್ರಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಒಟ್ಟು ಮೂರು ದಿನಗಳಲ್ಲಿ 135,012 ಪ್ರೇಕ್ಷಕರನ್ನು ಸೆಳೆದಿತ್ತು. ಎರಡು ತಂಡಗಳನ್ನು ಒಳಗೊಂಡ ಪಂದ್ಯದಲ್ಲಿ ಇದು ದಾಖಲೆಯ ಹಾಜರಾತಿಯಾಯ್ತು. ಭಾರತ-ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ನ ಮೊದಲ ದಿನದಲ್ಲಿ 36,225 ಅಭಿಮಾನಿಗಳು ಅಡಿಲೇಡ್ ಓವಲ್‌ನಲ್ಲಿ ಪಂದ್ಯ ವೀಕ್ಷಿಸಿದ್ದರು.
ಅಡಿಲೇಡ್‌ನಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್‌ಗೆ ಆರಂಭಿಕ ಎರಡು ದಿನಗಳಲ್ಲಿ 50,000ಕ್ಕೂ ಹೆಚ್ಚು ಅಭಿಮಾನಿಗಳು ಹಾಜರಾಗಿದ್ದರು. ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಫಲಿತಾಂಶ ಇನ್ನಷ್ಟೇ ತಿಳಿಯಬೇಕಿದೆ. ಆದರೆ, ಅದಕ್ಕೂ ಮುನ್ನವೇ ಮೆಲ್ಬೋರ್ನ್ ಟೆಸ್ಟ್ ಟೆಕೆಟ್‌ಗಳು ಸೇಲ್ ಆಗಿವೆ.
ವಿಶ್ವದ ಎರಡನೇ ಅತಿ ದೊಡ್ಡ ಕ್ರಿಕೆಟ್ ಮೈದಾನ
ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ಆಸ್ಟ್ರೇಲಿಯಾದ ಅತಿ ದೊಡ್ಡ ಹಾಗೂ ವಿಶ್ವದ ಎರಡನೇ ದೊಡ್ಡ ಕ್ರಿಕೆಟ್ ಮೈದಾನ. ಇದೇ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ. ಈ ಮೈದಾನವು ಬರೋಬ್ಬರಿ 90,000 ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ವೀಕ್ಷಿಸಬಹುದಾದ ಗರಿಷ್ಠ ಸಾಮರ್ಥ್ಯ ಹೊಂದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯ ಇದೀಗ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ, MCG ಮೈದಾನದಲ್ಲಿ ಆಶಸ್ ಅಲ್ಲದ ಬಾಕ್ಸಿಂಗ್ ಡೇ ಟೆಸ್ಟ್ ತನ್ನ ಆರಂಭಿಕ ದಿನದಂದೇ ಸ್ಟೇಡಿಯಂ ತುಂಬಾ ಅಭಿಮಾನಿಗಳನ್ನು ನೋಡಲಿದೆ. ಇನ್ನೂ ಹೆಚ್ಚಿನ ಅಭಿಮಾನಿಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಹೆಚ್ಚುವರಿ ಟಿಕೆಟ್‌ಗಳನ್ನು ಪಂದ್ಯದ ದಿನಾಂಕಕ್ಕೂ ಮುನ್ನ ಬಿಡುಗಡೆ ಮಾಡಬಹುದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.