ಜಸ್ಪ್ರೀತ್ ಬುಮ್ರಾ ಮತ್ತಷ್ಟು ದಾಖಲೆ; ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 30 ವಿಕೆಟ್ ಪಡೆದ ಮೊದಲ ವೇಗಿ, ಹರ್ಭಜನ್‌ ರೆಕಾರ್ಡ್‌ ಬ್ರೇಕ್‌ ಸನಿಹ
ಕನ್ನಡ ಸುದ್ದಿ  /  ಕ್ರಿಕೆಟ್  /  ಜಸ್ಪ್ರೀತ್ ಬುಮ್ರಾ ಮತ್ತಷ್ಟು ದಾಖಲೆ; ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 30 ವಿಕೆಟ್ ಪಡೆದ ಮೊದಲ ವೇಗಿ, ಹರ್ಭಜನ್‌ ರೆಕಾರ್ಡ್‌ ಬ್ರೇಕ್‌ ಸನಿಹ

ಜಸ್ಪ್ರೀತ್ ಬುಮ್ರಾ ಮತ್ತಷ್ಟು ದಾಖಲೆ; ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 30 ವಿಕೆಟ್ ಪಡೆದ ಮೊದಲ ವೇಗಿ, ಹರ್ಭಜನ್‌ ರೆಕಾರ್ಡ್‌ ಬ್ರೇಕ್‌ ಸನಿಹ

ಎಂಸಿಜಿಯಲ್ಲಿ ಜಸ್ಪ್ರೀತ್ ಬುಮ್ರಾ ಹಲವು ದಾಖಲೆ ನಿರ್ಮಿಸಿದ್ದಾರೆ. ಬಾಕ್ಸಿಂಗ್‌ ಡೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಕಬಳಿಸಿ ಹಲವು ಮೈಲಿಗಲ್ಲು ತಲುಪಿದ್ದಾರೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ದಾಖಲೆಯ ಬೆಟ್ಟವನ್ನೇ ಮಾಡಿದ್ದಾರೆ.

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 30 ವಿಕೆಟ್ ಪಡೆದ ಮೊದಲ ವೇಗಿ ಜಸ್ಪ್ರೀತ್ ಬುಮ್ರಾ
ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 30 ವಿಕೆಟ್ ಪಡೆದ ಮೊದಲ ವೇಗಿ ಜಸ್ಪ್ರೀತ್ ಬುಮ್ರಾ (AP)

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತದ ವೇಗಿ ಜಸ್ಪ್ರೀತ್‌ ಬುಮ್ರಾ ಅಬ್ಬರ ಮುಂದುವರೆದಿದೆ. ಪ್ರಸಕ್ತ ಸರಣಿಯಲ್ಲಿ ಈವರೆಗೆ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿಯೂ ಪ್ರಬಲ ಬೌಲಿಂಗ್‌ ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರು ನಾಥನ್ ಲಿಯಾನ್ ವಿಕೆಟ್‌ ಪಡೆಯುವುದರೊಂದಿಗೆ ಮತ್ತೊಮ್ಮೆ 5 ವಿಕೆಟ್‌ ಸಾಧನೆ ಮಾಡಿದರು. ಪ್ರಸಕ್ತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿರುವ ಬುಮ್ರಾ, ಮೂರನೇ ಬಾರಿ ಐದು ವಿಕೆಟ್‌ ಗೊಂಚಲು ಪಡೆದರು. ಅಲ್ಲದೆ ಸರಣಿಯ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಒಟ್ಟು 30 ವಿಕೆಟ್‌ ಕಬಳಿಸಿದ್ದಾರೆ.

ಬುಮ್ರಾ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ವಿಶ್ವ ಕ್ರಿಕೆಟ್‌ ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಪ್ರವಾಸಿ ಬೌಲರ್‌ ಆಗಿ ಆಸ್ಟ್ರೇಲಿಯಾವನ್ನು ಕಾಡಿದ್ದಾರೆ. ಇದೇ ವೇಳೆ ದಾಖಲೆಯನ್ನು ಕೂಡಾ ಪೂರ್ಣಗೊಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸರಣಿಯೊಂದರಲ್ಲಿ 30 ವಿಕೆಟ್ ಪಡೆದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಬಿಷನ್ ಸಿಂಗ್ ಬೇಡಿ ಅವರ ಸಾಲಿಗೆ ಸೇರುವ ಮೂಲಕ ಬುಮ್ರಾ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ 30 ವಿಕೆಟ್ ಪಡೆದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಒಂದೇ ಬಾರ್ಡರ್-ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ವೇಗದ ಬೌಲರ್‌ ಎನಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷ ಆಡಿದ 13 ಟೆಸ್ಟ್‌ ಪಂದ್ಯಗಳಲ್ಲಿ 71 ವಿಕೆಟ್‌ ಕಬಳಿಸಿ ಈ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಬುಮ್ರಾ 20ಕ್ಕೂ ಹೆಚ್ಚು ವಿಕೆಟ್‌ಗಳೊಂದಿಗೆ 12.83ರ ಸರಾಸರಿ ಕಾಯ್ದುಕೊಂಡು ಯಾವುದೇ ಸರಣಿಯ ಎರಡನೇ ಅತ್ಯುತ್ತಮ ಬೌಲಿಂಗ್ ಸರಾಸರಿಯನ್ನು ಹೊಂದಿದ್ದಾರೆ. 1985ರಲ್ಲಿ ರಿಚರ್ಡ್ ಹ್ಯಾಡ್ಲೀ ಒಬ್ಬರೇ 12.15 ಸರಾಸರಿಯೊಂದಿಗೆ ಬುಮ್ರಾಗಿಂತ ಮೇಲಿದ್ದಾರೆ.

ಕೇವಲ ಮೂರನೇ ಭಾರತೀಯ

ಈ ಸರಣಿಯಲ್ಲಿ 3 ಬಾರಿ ಐದು ವಿಕೆಟ್‌ ಗೊಂಚಲು ಪಡೆದ ಬುಮ್ರಾ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಬಾರಿ ಐದು ವಿಕೆಟ್ ಸಾಧನೆ ಮಾಡಿದ ಭಾರತೀಯ ಬೌಲರ್‌ ಎನಿಸಿಕೊಂಡಿದ್ದಾರೆ. ಈ ಹಿಂದೆ ಬೇಡಿ, ಬಿ.ಎಸ್.ಚಂದ್ರಶೇಖರ್ ಮತ್ತು ಅನಿಲ್ ಕುಂಬ್ಳೆ ಮಾತ್ರ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಈ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯಾದ ವೇಗಿಗಳ ಪೈಕಿ, ಇಮ್ರಾನ್ ಖಾನ್ ಅವರೊಂದಿಗೆ ಮೂರು ಬಾರಿ ಐದು ವಿಕೆಟ್‌ ಸಾಧನೆ ಮಾಡಿದ ಆಟಗಾರನಾಗಿ ಸಮಬಲ ಸಾಧಿಸಿದ್ದಾರೆ. ಮುಂದೆ ಸಿಡ್ನಿಯಲ್ಲಿ ಮತ್ತೊಮ್ಮೆ ಅಬ್ಬರಿಸಿದರೆ, ಆಸ್ಟ್ರೇಲಿಯಾದಲ್ಲಿ ಒಂದೇ ಸರಣಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಐದು ವಿಕೆಟ್‌ ಸಾಧನೆ ಮಾಡಿದ ಕೇವಲ ಐವರು ಆಟಗಾರರ ಪಟ್ಟಿಗೆ ಸೇರಬಹುದು.

ಇನ್ನೆರಡು ವಿಕೆಟ್‌ ಪಡೆದರೆ ದಾಖಲೆ

ಬಾರ್ಡರ್-ಗವಾಸ್ಕರ್ ಟ್ರೋಫಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಬುಮ್ರಾಗೆ ಕೇವಲ ಎರಡು ವಿಕೆಟ್‌ಗಳ ಕೊರತೆಯಿದೆ. ಪ್ರಸ್ತುತ ಈ ದಾಖಲೆ ಹರ್ಭಜನ್ ಸಿಂಗ್ ಹೆಸರಲ್ಲಿದೆ. 2001ರ ಸರಣಿಯಲ್ಲಿ ಅವರು 32 ವಿಕೆಟ್‌ ಪಡೆದಿದ್ದರು.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner