ಬಾಂಗ್ಲಾದೇಶ ಸೋಲಿಸಲು ವ್ಯೂಹವೊಂದನ್ನು ರಚಿಸಿದ ಟೀಮ್ ಇಂಡಿಯಾ; ಆದರೆ ಇದರ ಹಿಂದಿರೋ ಉದ್ದೇಶವೇ ಬೇರೆ!
India vs Bangladesh 1st Test: ಬಾಂಗ್ಲಾದೇಶ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ವ್ಯೂಹವೊಂದನ್ನು ರಚಿಸುತ್ತಿದೆ. ಎದುರಾಳಿಗೆ ಸೋಲಿನ ಆಘಾತ ನೀಡಲು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಪಿಚ್ ಬದಲಾವಣೆ ನಿರ್ಧಾರಕ್ಕೆ ಬಂದಿದ್ದಾರೆ.
India vs Bangladesh 1st Test: ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಭಾರೀ ಕಸರತ್ತು ನಡೆಸುತ್ತಿದೆ. ಚೊಚ್ಚಲ ಟೆಸ್ಟ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ತೀವ್ರ ಅಭ್ಯಾಸ ನಡೆಸುತ್ತಿದೆ. ಸೆಪ್ಟೆಂಬರ್ 19ರಿಂದ ಮೊದಲ ಟೆಸ್ಟ್ ಶುರುವಾಗಲಿದ್ದು, ಇತ್ತೀಚೆಗೆ ಪಾಕಿಸ್ತಾನ ತಂಡದ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದು ಐತಿಹಾಸಿಕ ಚರಿತ್ರೆ ನಿರ್ಮಿಸಿದ ಬಾಂಗ್ಲಾ ತಂಡವನ್ನು ಹಗುರವಾಗಿ ಪರಿಗಣಿಸದೆ ಟೀಮ್ ಇಂಡಿಯಾ ವ್ಯೂಹವೊಂದನ್ನು ರಚಿಸುತ್ತಿದೆ. ಎದುರಾಳಿಗೆ ಸೋಲಿನ ಆಘಾತ ನೀಡಲು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಸಮರಕ್ಕೆ ಕೆಂಪು ಮಣ್ಣಿನ ಪಿಚ್ ಸಿದ್ದ
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಕದನಕ್ಕೆ ಚೆಪಾಕ್ ಸ್ಟೇಡಿಯಂ ಪಿಚ್ ತಯಾರಿಯಲ್ಲಿ ಭಾರತ ತಂಡ ಕೆಂಪು ಮಣ್ಣನ್ನು ಹೆಚ್ಚು ಬಳಕೆ ಮಾಡಲು ನಿರ್ಧಾರ ತೆಗೆದುಕೊಂಡಿದೆಯಂತೆ. ಇಲ್ಲಿ ಸಾಮಾನ್ಯವಾಗಿ ಕಪ್ಪು ಜೇಡಿ ಮಣ್ಣು ಬಳಸಲಾಗುತ್ತಿದ್ದರೂ ಈ ಪಂದ್ಯಕ್ಕಾಗಿ ಭಾರತ ಕೆಂಪು ಮಣ್ಣನ್ನು ಬಳಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ. ಅದಕ್ಕೆ ಕಾರಣ ಬಾಂಗ್ಲಾ ಇತ್ತೀಚೆಗೆ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು. ಬಾಂಗ್ಲಾ ಸ್ಪಿನ್ ವಿಭಾಗವು ಭಾರತದಂತೆ ಉತ್ತಮವಾಗಿ ಕಾಣುತ್ತಿರುವ ಕಾರಣ ಸ್ಪಿನ್ ಟ್ರ್ಯಾಕ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎನ್ನುವ ಭಾವನೆ ಭಾರತದ್ದಾಗಿದೆ.
ಹೀಗಾಗಿ ಕೆಂಪು ಮಣ್ಣಿನ ಪಿಚ್ನಲ್ಲಾದರೆ ಬಾಂಗ್ಲಾದೇಶ ಗೆಲ್ಲಲು ತಿಪ್ಪರಲಾಗ ಹಾಕಬೇಕಾಗುತ್ತದೆ ಎನ್ನವ ಕಾರಣಕ್ಕೆ ಈ ನಿರ್ಧಾರಕ್ಕೆ ಟೀಮ್ ಮ್ಯಾನೇಜ್ಮೆಂಟ್ ಬಂದಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಬಾಂಗ್ಲಾದೇಶವನ್ನು ಮಣಿಸಲು ಕೆಂಪು ಮಣ್ಣಿನ ಪಿಚ್ ಮೊರೆಹೋಗುತ್ತಿದೆ ಎನ್ನಲಾಗಿದೆ. ಕೆಂಪು ಮಣ್ಣಿನ ಪಿಚ್ ಸ್ಪಿನ್ಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ವೇಗದ ಬೌಲರ್ಗಳು ಉತ್ತಮ ಬೌನ್ಸರ್ ಪಡೆಯಲು ನೆರವಾಗುತ್ತದೆ. ಹೀಗಾಗಿ ಬಾಂಗ್ಲಾ ಬ್ಯಾಟರ್ಗಳು ಭಾರತದ ವೇಗಿಗಳನ್ನು ಎದುರಿಸಲು ಕಷ್ಟಪಡಬಹುದು ಎಂಬುದು ಅವರ ನಿಲುವಾಗಿದೆ. ಮತ್ತೊಂದೆಡೆ ಬಾಂಗ್ಲಾ ವೇಗದ ವಿಭಾಗ ಸ್ವಲ್ಪ ದುರ್ಬಲವಾಗಿದೆ. ಇವೆಲ್ಲವನ್ನೂ ಪರಿಗಣಿಸಿ ಭಾರತ ಮೊದಲ ಟೆಸ್ಟ್ಗೆ ರೆಡ್ ಕ್ಲೇ ವಿಕೆಟ್ ನೀಡಲು ನಿರ್ಧರಿಸಿದಂತಿದೆ.
ಆಸೀಸ್ ಸರಣಿಗೆ ಈಗಿನಿಂದಲೇ ತಯಾರಿ
ಕೆಂಪು ಮಣ್ಣಿನ ಪಿಚ್ ಅಳವಡಿಕೆಗೆ ಬಾಂಗ್ಲಾ ತಂಡವನ್ನು ಮಣಿಸಲು ಮಾತ್ರವಲ್ಲ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ತಯಾರಿಗೂ ಈಗಿನಿಂದಲೇ ಯೋಜನೆ ರೂಪಿಸಿದೆ. ಅದರ ಪರಿಣಾಮ ಪಿಚ್ ಬದಲಾವಣೆಗೆ ನಿರ್ಧರಿಸಿದೆ ಎಂದು ವರದಿಯಾಗಿದೆ. ಬಾಂಗ್ಲಾ ಮುಖ್ಯ ಎನ್ನುವುದಕ್ಕಿಂತ ಆಸೀಸ್ ನೆಲದಲ್ಲಿ ಕಾಂಗರೂ ಬೇಟೆ ಮುಖ್ಯ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಏಕೆಂದರೆ ಆಸೀಸ್ ಪಿಚ್ಗಳು ಬಹುತೇಕ ಕೆಂಪು ಮಣ್ಣಿನ ಪಿಚ್ಗಳು. ಅದಕ್ಕಾಗಿ ಇಲ್ಲಿಂದಲೇ ಸಿದ್ಧತೆ ಆರಂಭಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ನವೆಂಬರ್ 22 ರಿಂದ 2025ರ ಜನವರಿ 3ರ ತನಕ ಬಾರ್ಡರ್-ಗವಾಸ್ಕರ್ ಟ್ರೋಫಿ ನಡೆಯಲಿದೆ. ಆದರೆ ಇದರ ನಡುವೆ ಟೀಕೆಯೂ ವ್ಯಕ್ತವಾಗಿದೆ.
ಬಾಂಗ್ಲಾದೇಶ ಸ್ಪಿನ್ನರ್ಗಳನ್ನು ಎದುರಿಸಲು ಭೀತಿಗೆ ಸಿಲುಕಿದ ಕಾರಣಕ್ಕೆ ಪಿಚ್ ಬದಲಾವಣೆ ಮಾಡಲಾಗಿದೆ ಎಂದು ಮಾಜಿ ಕ್ರಿಕೆಟರ್ಸ್ ಆರೋಪ ಮಾಡುತ್ತಿದ್ದಾರೆ. ಇಷ್ಟಕ್ಕೂ ಪಿಚ್ ಬದಲಿಸುವ ಅವಶ್ಯಕತೆ ಏನಿತ್ತು? ಪಾಕ್ನಂತೆ ಭಾರತಕ್ಕೂ ಸೋಲುವ ಭೀತಿ ಉಂಟಾಗಿದ್ಯಾ? ಸುಖಾ ಸುಮ್ಮನೆ ಬಾರ್ಡರ್-ಗವಾಸ್ಕರ್ ಸರಣಿಗೆ ಸಿದ್ಧತೆಯ ಭಾಗ ಎಂದು ಇಲ್ಲಿ ಹೇಳಿ ಬಾಂಗ್ಲಾ ಭೀತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಅವರದ್ಧೇ ನೆಲದಲ್ಲಿ 2-0 ಅಂತರದಲ್ಲಿ ಬಾಂಗ್ಲಾ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಪಾಕ್ ಎದುರು ಬಾಂಗ್ಲಾ ಗೆದ್ದ ಮೊದಲ ಟೆಸ್ಟ್ ಸರಣಿ ಇದಾಗಿತ್ತು.
ನೆಟ್ಸ್‌ನಲ್ಲಿ ಬೆವರಿಳಿಸಿದ ವಿರಾಟ್ ಕೊಹ್ಲಿ
ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಡೆಯಲಿರುವ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾರತದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಮೊದಲ ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬಹಳ ಹೊತ್ತು ಬೆವರು ಹರಿಸಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ಮರು ಎಂಟ್ರಿ ಕೊಟ್ಟಿರುವ ಪಂತ್ ಅಭ್ಯಾಸವನ್ನೂ ನಡೆಸಿದರು. ಇತರ ಆಟಗಾರರು ಕೂಡ ತಯಾರಿ ನಡೆಸಿದ್ದಾರೆ. ಭಾರತ- ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಿಂದ ನಡೆಯಲಿದೆ. 2ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ನಡೆಯಲಿದೆ. ಅದರ ನಂತರ, ಅಕ್ಟೋಬರ್ 6 ರಿಂದ ಅಕ್ಟೋಬರ್ 12 ರ ನಡುವೆ ಎರಡೂ ತಂಡಗಳು 3 ಟಿ20 ಪಂದ್ಯಗಳನ್ನು ಆಡಲಿವೆ.