ಭಾರತದ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ; ಉಭಯ ತಂಡಗಳ ಆಡುವ ಬಳಗ ಹೀಗಿದೆ
India vs Bangladesh: ಬಾಂಗ್ಲಾದೇಶ ವಿರುದ್ಧದ ಗೆಲುವು ಭಾರತ ಕ್ರಿಕೆಟ್ ತಂಡದ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಲಿದೆ. ಮುಂದೆ ಭಾರತವು ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲಿದೆ.
ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಜೂನ್ 22ರ ಶನಿವಾರವಾದ ಇಂದು ಭಾರತ ಮತ್ತು ಬಾಂಗ್ಲಾದೇಶ (India vs Bangladesh) ತಂಡಗಳು ಮುಖಾಮುಖಿಯಾಗುತ್ತಿವೆ. ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಂದಿನ ಪಂದ್ಯಕ್ಕೆ ಭಾರತದ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಿರಾಟ್ ಕೊಹ್ಲಿ ಆರಂಭಿಕರಾಗಿ ಮುಂದುವರೆಯಲಿದ್ದು, ಮೊಹಮ್ಮದ್ ಸಿರಾಜ್ ಇಂದು ಕೂಡಾ ತಂಡದಿಂದ ಹೊರಗುಳಿದಿದ್ದಾರೆ. ಅತ್ತ ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ತಸ್ಕಿನ್ ಅಹ್ಮದ್ ಇಂದು ತಂಡದಿಂದ ಹೊರಗುಳಿದಿದ್ದಾರೆ.
ಸೂಪರ್ 8 ಹಂತದಲ್ಲಿ ಈಗಾಗಲೇ ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ, ಇಂದು ಬಾಂಗ್ಲಾದೇಶ ವಿರುದ್ಧ ಗೆದ್ದರೆ ಸೆಮಿಫೈನಲ್ ಸುತ್ತಿಗೆ ಬಹುತೇಕ ಸಮೀಪಿಸಿದಂತಾಗುತ್ತದೆ. ಅತ್ತ ಪಂದ್ಯದಲ್ಲಿ ಸೋತರೆ ಬಾಂಗ್ಲಾದೇಶ ಕೂಡಾ ಟೂರ್ನಿಯಿಂದ ಬಹುಪಾಲು ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದಿನ ಗೆಲುವು ಅನಿವಾರ್ಯವಾಗಿದೆ.
ಟೂರ್ನಿಯ ಆರಂಭಕ್ಕೂ ಮುನ್ನ ನ್ಯೂಯಾರ್ಕ್‌ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸುಲಭ ಜಯ ಸಾಧಿಸಿತ್ತು. ಆದರೆ ಅದು ಅಭ್ಯಾಸ ಪಂದ್ಯವಷ್ಟೇ. ಇಂದು ನಡೆಯುತ್ತಿರು ಪಂದ್ಯ ನಿರ್ಣಾಯಕವಾಗಿದೆ.
ಭಾರತ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.
ಬಾಂಗ್ಲಾದೇಶ ಆಡುವ ಬಳಗ
ತಂಜಿದ್ ಹಸನ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹಿದ್ ಹೃದಯೋಯ್, ಶಕೀಬ್ ಅಲ್ ಹಸನ್, ಮಹ್ಮುದುಲ್ಲಾ, ಜೇಕರ್ ಅಲಿ, ರಿಶಾದ್ ಹೊಸೈನ್, ಮಹೇದಿ ಹಸನ್, ತಂಜಿಮ್ ಹಸನ್ ಸಾಕಿಬ್, ಮುಸ್ತಫಿಜುರ್ ರಹಮಾನ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಭಾರತ vs ಬಾಂಗ್ಲಾದೇಶ ಸೂಪರ್ 8 ಪಂದ್ಯ; ಆಂಟಿಗುವಾ ಪಿಚ್, ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ