ಭಾರತ vs ಬಾಂಗ್ಲಾದೇಶ ಏಷ್ಯಾಕಪ್ ಸೆಮಿಫೈನಲ್ ಪಂದ್ಯ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಬಾಂಗ್ಲಾದೇಶ ಏಷ್ಯಾಕಪ್ ಸೆಮಿಫೈನಲ್ ಪಂದ್ಯ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ

ಭಾರತ vs ಬಾಂಗ್ಲಾದೇಶ ಏಷ್ಯಾಕಪ್ ಸೆಮಿಫೈನಲ್ ಪಂದ್ಯ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ

ಮಹಿಳಾ ಏಷ್ಯಾಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಟೂರ್ನಿಯಲ್ಲಿ ಅಜೇಯ ಯಾತ್ರೆ ನಡೆಸುತ್ತಿರುವ ಹರ್ಮನ್‌ಪ್ರೀತ್‌ ಕೌರ್‌ ಬಳಗವು, ಬಾಂಗ್ಲಾ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಮಹತ್ವದ ಪಂದ್ಯಕ್ಕೆ ತಂಡದಲ್ಲೂ ಬದಲಾವಣೆಯಾಗಲಿದೆ.

ಭಾರತ vs ಬಾಂಗ್ಲಾದೇಶ ಏಷ್ಯಾಕಪ್ ಸೆಮಿಫೈನಲ್ ಪಂದ್ಯ
ಭಾರತ vs ಬಾಂಗ್ಲಾದೇಶ ಏಷ್ಯಾಕಪ್ ಸೆಮಿಫೈನಲ್ ಪಂದ್ಯ (PTI)

ದಾಖಲೆಯ 7 ಬಾರಿಯ ಏಷ್ಯಾ ಚಾಂಪಿಯನ್‌ ಆಗಿರುವ ಭಾರತ ವನಿತೆಯರ ಕ್ರಿಕೆಟ್‌ ತಂಡವು, ಎಂಟನೇ ಏಷ್ಯಾಕಪ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಸೆಮಿಫೈನಲ್‌ ಪ್ರವೇಶಿಸಿರುವ ಹರ್ಮನ್‌ಪ್ರೀತ್‌ ಕೌರ್‌ ಪಡೆಯು, ಜುಲೈ 26ರಂದು ನಡೆಯುತ್ತಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿದೆ. ಏಷ್ಯಾಕಪ್‌ ಇತಿಹಾಸದಲ್ಲಿ ಭಾರತವನ್ನು ಹೊರತುಪಡಿಸಿ ಕಪ್‌ ಗೆದ್ದಿರುವ ಮತ್ತೊಂದು ತಂಡವಿದ್ದರೆ ಅದು ಬಾಂಗ್ಲಾದೇಶ ಮಾತ್ರ. 2018ರಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಅಜೇಯ ತಂಡ ಭಾರತವನ್ನು ಮಣಿಸಿದ್ದ ಬಾಂಗ್ಲಾ ಚೊಚ್ಚಲ ಹಾಗೂ ಏಕೈಕ ಏಷ್ಯಾಕಪ್‌ ಗೆದ್ದಿತ್ತು. ಹೀಗಾಗಿ ಬಾಂಗ್ಲಾ ಹೆಣ್ಣು ಹುಲಿಗಳನ್ನು ಭಾರತ ಲಘುವಾಗಿ ಪರಿಗಣಿಸುವಂತಿಲ್ಲ.

ಗುಂಪು ಹಂತದುದ್ದಕ್ಕೂ ಅಸಾಧಾರಣ ಪ್ರದರ್ಶನ ತೋರಿದ್ದ ಭಾರತ ಮಹಿಳಾ ತಂಡವು, ಸಹಜವಾಗಿ ಗೆಲ್ಲುವ ಫೇವರೆಟ್‌ ತಂಡವಾಗಿ ಸೆಮೀಸ್‌ ಆಡುತ್ತಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿದ್ದ ತಂಡ, ಆ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳ ವಿರುದ್ಧ ಸುಲಭ ಜಯ ಸಾಧಿಸಿತ್ತು.

ಮೊದಲ ಸೆಮಿಕದನಲ್ಲಿ ಭಾರತ ತಂಡವು ಈಗ ಬಾಂಗ್ಲಾದೇಶವನ್ನು ಎದುರಿಸಲಿದೆ. ನಿಗರ್ ಸುಲ್ತಾನಾ ಪಡೆಯು ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್‌ಗಳಿಂದ ಸೋತರೆ, ನಂತರ ಥೈಲ್ಯಾಂಡ್ ಮತ್ತು ಮಲೇಷ್ಯಾವನ್ನು ಸೋಲಿಸಿ ಸೆಮಿಫೈನಲ್ ತಲುಪಿದೆ.

ಮೊದಲ ಸೆಮಿಫೈನಲ್‌ ಪಂದ್ಯವು ಜುಲೈ 26ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಶ್ರೀಲಂಕಾದ ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಭಾರತ vs ಬಾಂಗ್ಲಾದೇಶ ಮುಖಾಮುಖಿ ದಾಖಲೆ

ಉಭಯ ತಂಡಗಳು ಈವರೆಗೆ ಒಟು 13 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಮೇಲುಗೈ ಸಾಧಿಸಿದೆ.

ಕೊನೆಯ 5 ಪಂದ್ಯಗಳ ಫಲಿತಾಂಶ

ತಂಡಫಲಿತಾಂಶ
ಭಾರತNR W W W W
ಬಾಂಗ್ಲಾದೇಶL L L W W

ಡಂಬುಲ್ಲಾ ಪಿಚ್ ವರದಿ

ಡಂಬುಲ್ಲಾ ಪಿಚ್‌ ದ್ವಿತೀಯಾರ್ಧದ ವೇಳೆ ನಿಧಾನವಾಗಿ ವರ್ತಿಸುತ್ತದೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಉಭಯ ತಂಡಗಳು ಮೊದಲು ಬ್ಯಾಟಿಂಗ್‌ ನಡೆಸಿ ಮೊತ್ತವನ್ನು ಡಿಫೆಂಡ್‌ ಮಾಡಲು ಪ್ರಯತ್ನಿಸಲಿವೆ. ಪಂದ್ಯ ಮಧ್ಯಾಹ್ನ ನಡೆಯುವುದರಿಂದ, ಇಬ್ಬನಿಯು ಪಂದ್ಯದ ಮೇಲೆ ಪ್ರಭಾವ ಬೀರುವ ಸಾದ್ಯತೆ ಇಲ್ಲ. ಕಳೆದ ವಾರ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಯುಎಇ ವಿರುದ್ಧ ಭಾರತವು ಚುಟುಕು ಸ್ವರೂಪದಲ್ಲಿ ಮೊದಲ ಬಾರಿಗೆ 200+ ಸ್ಕೋರ್ ದಾಖಲಿಸಿತ್ತು. ಹೀಗಾಗಿ ಮತ್ತೊಮ್ಮೆ ಬೃಹತ್‌ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದೆ.

ಹವಾಮಾನ ವರದಿ

ಡಂಬುಲ್ಲಾದಲ್ಲಿ ಪಂದ್ಯದ ಸಮಯದಲ್ಲಿ ಮೋಡ ಮತ್ತು ಬಿಸಿಲಿನ ಸಂಯೋಜನೆಯ ಮುನ್ಸೂಚನೆ ಇದೆ. ತಾಪಮಾನವು ಸುಮಾರು 29 ಡಿಗ್ರಿ ಸೆಲ್ಸಿಯಸ್‌ ಎಂದು ಹವಾಮಾನ ವರದಿ ತಿಳಿಸಿದೆ.

ಲೈವ್ ಸ್ಟ್ರೀಮಿಂಗ್ ವಿವರ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಷ್ಯಾಕಪ್‌ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದಾಗಿದೆ.

ಭಾರತ ಸಂಭಾವ್ಯ ತಂಡ

ನೇಪಾಳ ವಿರುದ್ಧದ ಕೊನೆಯ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಹಾಗೂ ಪೂಜಾ ವಸ್ತ್ರಾಕರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅವರು ಆಡುವ ಬಳಗಕ್ಕೆ ಮರಳಲಿದ್ದಾರೆ.

ಶಫಾಲಿ ವರ್ಮಾ, ಸ್ಮೃತಿ ಮಂಧಾನ, ದಯಾಲನ್ ಹೇಮಲತಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್‌ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್, ತನುಜಾ ಕನ್ವರ್‌

ಬಾಂಗ್ಲಾದೇಶ ಸಂಭಾವ್ಯ ತಂಡ

ದಿಲಾರಾ ಅಕ್ಟರ್, ಮುರ್ಷಿದಾ ಖಾತುನ್, ಇಶ್ಮಾ ತಂಜಿಮ್, ರಿತು ಮೋನಿ, ರುಮಾನಾ ಅಹ್ಮದ್, ನಿಗರ್ ಸುಲ್ತಾನಾ (ನಾಯಕಿ & ವಿಕೆಟ್‌ ಕೀಪರ್), ರಬೆಯಾ ಖಾನ್, ಶೋರ್ನಾ ಅಕ್ಟರ್, ಜಹಾನಾರಾ ಆಲಂ, ನಹಿದಾ ಅಕ್ಟರ್, ಸಬಿಕುನ್ ನಹರ್.

Whats_app_banner