ಭಾರತ vs ಕೆನಡಾ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಆತಂಕ; ಫ್ಲೋರಿಡಾ ಹವಾಮಾನ ವರದಿ, ಪಂದ್ಯ ರದ್ದಾದರೂ ಭಾರತಕ್ಕಿಲ್ಲ ಚಿಂತೆ
India vs Canada: ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು ತನ್ನ ಕೊನೆಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಕೆನಡಾವನ್ನು ಎದುರಿಸುತ್ತಿದೆ. ಪಂದ್ಯಕ್ಕೂ ಮುನ್ನ ಫ್ಲೋರಿಡಾ ಹವಾಮಾನ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಟಿ20 ವಿಶ್ವಕಪ್ 2024ರಲ್ಲಿ ಈಗಾಗಲೇ ಸತತ ಮೂರು ಪಂದ್ಯಗಳಲ್ಲಿ ಗೆದ್ದು ಸೂಪರ್ 8 ಹಂತಕ್ಕೆ ಲಗ್ಗೆ ಇಟ್ಟಿರುವ ಭಾರತ ತಂಡವು, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕೆಳಶ್ರೇಯಾಂಕದ ಕೆನಡಾ (India vs Canada) ತಂಡವನ್ನು ಎದುರಿಸುತ್ತಿದೆ. ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಭಾರತವನ್ನು ಕೆನಡಾ ಇದೇ ಮೊದಲ ಬಾರಿಗೆ ಎದುರಿಸಲು ಸಜ್ಜಾಗಿದ್ದು, ಟೂರ್ನಿಯಲ್ಲಿ ಎರಡನೇ ಗೆಲುವು ಒಲಿಸಿಕೊಳ್ಳುವ ವಿಶ್ವಾಸದಲ್ಲಿದೆ. ಈವರೆಗಿನ ಮೂರು ಪಂದ್ಯಗಳನ್ನು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಆಡಿದ್ದ ಭಾರತವು, ಇದೀಗ ಫ್ಲೋರಿಡಾಗೆ ಪ್ರಯಾಣಿಸಿದೆ. ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ (Central Broward Regional Park Stadium Turf Ground) ಜೂನ್ 15ರ ಶನಿವಾರ ಪಂದ್ಯ ನಡೆಯುತ್ತಿದೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ರೋಹಿತ್ ಶರ್ಮಾ ಬಳಗವು ಕೆನಡಾವನ್ನು ಸುಲಭವಾಗಿ ಮಣಿಸುವ ಗುರಿ ಹಾಕಿಕೊಂಡಿದೆ. ನ್ಯೂಯಾರ್ಕ್‌ನ ಸವಾಲಿನ ಪಿಚ್‌ನಲ್ಲಿ ಈವರೆಗೆ ಭಾರತದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ತಂಡದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಭಾರತದ ಬ್ಯಾಟಿಂಗ್ ಕ್ರಮಾಂಕ ದೊಡ್ಡ ಕಾಳಜಿಯಾಗಿ ಉಳಿದಿದೆ.
ತಂಡದ ಬ್ಯಾಟಿಂಗ್ ಲೈನಪ್ ತುಂಬಾ ಬಲಿಷ್ಠವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ನಾಲ್ವರು ಎಡಗೈ ಬ್ಯಾಟರ್‌ಗಳೇ ತುಂಬಿದ್ದಾರೆ. ರಿಷಭ್ ಪಂತ್, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡದ ಭರವಸೆಯಾದರೆ, ನಾಲ್ವರು ಬಲಗೈ ಬ್ಯಾಟರ್‌ಗಳಾದ ರೋಹಿತ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ತಂಡದ ಶಕ್ತಿಯಾಗಿದ್ದಾರೆ. ಸ್ಪಿನ್ ಬೌಲರ್‌ಗಳ ವಿರುದ್ಧ ಎಡ-ಬಲ ಸಂಯೋಜನೆಯನ್ನು ಕಾಪಾಡಿಕೊಳ್ಳುವುದು ಭಾರತಕ್ಕೆ ಮುಖ್ಯವಾಗಿದೆ.
ಭಾರತಕ್ಕೆ ಕೊಹ್ಲಿ ಫಾರ್ಮ್ ದೊಡ್ಡ ಚಿಂತೆಯಾಗಿದೆ. ಟೂರ್ನಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿರುವ ಅವರು, ಐರ್ಲೆಂಡ್ ವಿರುದ್ಧ 1, ಪಾಕಿಸ್ತಾನ ವಿರುದ್ಧ 4 ಮತ್ತು ಯುಎಸ್ಎ ವಿರುದ್ಧ 0ಗೆ ಔಟಾಗಿದ್ದರು.
ಫ್ಲೋರಿಡಾ ಹವಾಮಾನ ವರದಿ
ಹವಾಮಾನ ವರದಿಗಳ ಪ್ರಕಾರ, ಫ್ಲೋರಿಡಾದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಅಮೆರಿಕ ಕಾಲಮಾನದ ಪ್ರಕಾರ, ಇಂದು ಮುಂಜಾನೆ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 50ರಷ್ಟಿದೆ. ಪಂದ್ಯ ಸಾಗುತ್ತಿದ್ದಂತೆಯೇ, ಅಂದರೆ ಮಧ್ಯಾಹ್ನದ ನಂತರ ಮಳೆಯ ಅಬ್ಬರ ಕಡಿಮೆಯಾಗುತ್ತದೆ ಎಂದು ಊಹಿಸಲಾಗಿದೆ.
ಅಗ್ರಸ್ಥಾನದಲ್ಲೇ ಉಳಿಯಲಿದೆ ಭಾರತ
ಭಾರತಕ್ಕೆ ಪಂದ್ಯ ರದ್ದಾದರೂ ಚಿಂತೆಯಿಲ್ಲ. ಏಕೆಂದರೆ ಭಾರತವು ಈಗಾಗಲೇ ಅಗ್ರಸ್ಥಾನದಲ್ಲಿದ್ದು, ಸೂಪರ್ 8 ಹಂತಕ್ಕೆ ಲಗ್ಗೆ ಹಾಕಿದೆ. ಒಂದು ವೇಳೆ ಪಂದ್ಯ ನಡೆದು ಭಾರತ ಗೆದ್ರೂ ಅಥವಾ ಸೋತರೂ ಭಾರತ 'ಎ' ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ.
ಪಂದ್ಯಕ್ಕೂ ಮುನ್ನ ಮಾತನಾಡಿದ ಭಾರತದ ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಈ ಕ್ರೀಡಾಂಗಣದಲ್ಲಿ ನಾವು ಈ ಹಿಂದೆ ಆಡಿದ್ದೇವೆ. ಹೀಗಾಗಿ ಪಿಚ್ ಪರಿಸ್ಥಿತಿಗಳ ಬಗ್ಗೆ ನಮಗೆ ಸ್ವಲ್ಪ ತಿಳಿದಿದೆ. ಇಲ್ಲಿನ ಹವಾಮಾನವು ಸವಾಲಿನದ್ದಾಗಿದೆ. ಮಳೆ ಯಾವಾಗ ಬರುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿಲ್ಲ. ಆದರೆ ನಾವು ಈ ಎಲ್ಲ ಸವಾಲುಗಳಿಗೆ ಸಿದ್ಧರಾಗಿದ್ದೇವೆ. ಹವಾಮಾನ ಪರಿಸ್ಥಿತಿಗಳನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಮ್ಮನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದೇವೆ, ಎಂದು ಅವರು ಹೇಳಿದ್ದಾರೆ.
ಟಿ20 ವಿಶ್ವಕಪ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟಿ20 ವಿಶ್ವಕಪ್: ಉಗಾಂಡಾ ವಿರುದ್ಧ 9 ವಿಕೆಟ್ ಗೆಲುವು ಸಾಧಿಸಿದರೂ ನ್ಯೂಜಿಲ್ಯಾಂಡ್ ಕೈತಪ್ಪಿದ ಸೂಪರ್ 8 ಟಿಕೆಟ್
