ಮಳೆಯಿಂದಾಗಿ ಒದ್ದೆಯಾದ ಫ್ಲೋರಿಡಾ ಸ್ಟೇಡಿಯಂ ಔಟ್‌ಫೀಲ್ಡ್; ಭಾರತ vs ಕೆನಡಾ ಪಂದ್ಯ ರದ್ದು
India vs Canada: ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡದ ವಿರುದ್ಧ ಆಡುವ ಕೆನಡಾ ಕನಸು ನನಸಾಗಲಿಲ್ಲ. ಪಂದ್ಯಕ್ಕೂ ಮುನ್ನ ಫ್ಲೋರಿಡಾದಲ್ಲಿ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಪಂದ್ಯ ಆರಂಭ ಸಾಧ್ಯವಾಗದೆ ಮ್ಯಾಚ್ ರದ್ದುಪಡಿಸಲಾಗಿದೆ.

ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಕೆನಡಾ ಮತ್ತು ಭಾರತ (India vs Canada) ತಂಡಗಳ ನಡುವಿನ ಪಂದ್ಯ ರದ್ದಾಗಿದೆ. ಪಂದ್ಯವು ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆಯಬೇಕಿತ್ತು. ಆದರೆ ಪಂದ್ಯಕ್ಕೂ ಮುನ್ನ ಫ್ಲೋರಿಡಾದಲ್ಲಿ ಮಳೆ ಸುರಿದ ಕಾರಣದಿಂದಾಗಿ ಮೈದಾನ ಒದ್ದೆಯಾಗಿತ್ತು. ಒದ್ದೆಯಾಗಿದ್ದ ಔಟ್‌ಫೀಲ್ಡ್ ಒಣಗಿಸಲು ಮೈದಾನದ ಸಿಬ್ಬಂದಿ ಹರಸಾಸಹಸ ಪಟ್ಟರು. ಆರಂಭದಲ್ಲಿ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಯ್ತು. ಭಾರತೀಯ ಕಾಲಮಾನದ ಪ್ರಕಾರ 8 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ 9 ಗಂಟೆಯಾದರೂ ಮೈದಾನ ಪೂರ್ತಿ ಒಣಗದ ಕಾರಣದಿಂದಾಗಿ ಅಂತಿಮವಾಗಿ ಅಂಫೈರ್‌ಗಳು ಪಂದ್ಯವನ್ನು ರದ್ದುಪಡಿಸಿದರು. ಟಾಸ್ ಪ್ರಕ್ರಿಯೆಯೂ ನಡೆಯದೆ ಅಭಿಮಾನಿಗಳು ನಿರಾಶೆ ಅನುಭವಿಸಿದರು.
ಪಂದ್ಯಾವಳಿಯಲ್ಲಿ ಭಾರತ ತಂಡವು ಈಗಾಗಲೇ ಸೂಪರ್ 8ರ ಹಂತಕ್ಕೆ ಪ್ರವೇಶಿಸಿದೆ. ಎ ಗುಂಪಿನಲ್ಲಿ ಭಾರತದ ಕೊನೆಯ ಪಂದ್ಯವು ಕೆನಡಾ ವಿರುದ್ಧ ನಡೆಯಬೇಕಿತ್ತು. ತನಗಿಂತ ಕೆಳಶ್ರೇಯಾಂಕದ ಕೆನಡಾ ತಂಡದ ವಿರುದ್ಧದ ಪಂದ್ಯ ರದ್ದಾದರೂ ಭಾರತ ಸೂಪರ್ 8ರ ಹಂತಕ್ಕೆ ಲಗ್ಗೆ ಹಾಕಿದೆ. ಅತ್ತ ಕೆನಡಾ ಟೂರ್ನಿಯಿಂದ ಹೊರಬಿದ್ದಿದೆ. ಭಾರತದ ವಿರುದ್ಧ ಇದೇ ಮೊದಲ ಬಾರಿಗೆ ಕೆನಡಾ ತಂಡ ಆಡುವ ಅವಕಾಶ ಪಡೆದಿತ್ತು. ವಿಶ್ವ ಕ್ರಿಕೆಟ್‌ನ ನಂಬರ್ ವನ್ ತಂಡವಾಗಿರುವ ಭಾರತದ ವಿರುದ್ಧ ಆಡುವ ಅವಕಾಶ ಕೆನಡಾಗೆ ಲಭಿಸಿತ್ತು. ಆದರೆ, ಮಳೆ ಆ ಅವಕಾಶವನ್ನು ಕಿತ್ತುಕೊಂಡಿದೆ.
ಟೂರ್ನಿಯಲ್ಲಿ ಈಗಾಗಲೇ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ, ಮುಂದೆ ಸೂಪರ್ 8ರ ಹಂತದಲ್ಲಿ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಜೂನ್ 20ರಂದು ಪಂದ್ಯ ನಡೆಯಲಿದೆ.
ಪಂದ್ಯ ರದ್ದಾದರೂ ಭಾರತಕ್ಕಿಲ್ಲ ಸಮಸ್ಯೆ
ಇಂದಿನ ಪಂದ್ಯ ಮಳೆಯಿಂದ ರದ್ದಾದರೂ ಭಾರತಕ್ಕೆ ಚಿಂತೆಯಿಲ್ಲ. ಎ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ತಂಡವು ಈಗಲೂ ಅಗ್ರಸ್ಥಾನದಲ್ಲಿದೆ. ಈಗಾಗಲೇ ಸೂಪರ್ 8 ಹಂತಕ್ಕೆ ರೋಹಿತ್ ಪಡೆ ಲಗ್ಗೆ ಹಾಕಿದೆ. ಎರಡನೇ ಸ್ಥಾನದಲ್ಲಿರುವ ಯುಎಸ್‌ಎ ತಂಡ ಕೂಡಾ ಮುಂದಿನ ಹಂತ ಪ್ರವೇಶಿಸಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಇನ್ಸ್ಟಾಗ್ರಾಮ್ನಲ್ಲಿ ರೋಹಿತ್ ಶರ್ಮಾ ಅನ್ಫಾಲೊ ಮಾಡಿದ ಶುಭ್ಮನ್ ಗಿಲ್; ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ