ಬ್ಯಾಟರ್ಸ್ ಜತೆಗೆ ಸ್ಪಿನ್ನರ್ಸ್ಗೂ ನೆರವು; ಭಾರತ-ಇಂಗ್ಲೆಂಡ್ ಏಕದಿನಕ್ಕೆ ಪಿಚ್, ಹವಾಮಾನ ವರದಿ, ಪ್ಲೇಯಿಂಗ್ 11 ವಿವರ
ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೂ ಮುನ್ನ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಪಿಚ್ ರಿಪೋರ್ಟ್, ಹವಾಮಾನ ವರದಿ, ಮುಖಾಮುಖಿ ದಾಖಲೆ, ಸಂಭಾವ್ಯ ತಂಡಗಳ ಕುರಿತು ತಿಳಿಯೋಣ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಬ್ರಿಟಿಷರ ವಿರುದ್ಧವೇ 4-1 ಅಂತರದಲ್ಲಿ ಟಿ20ಐ ಸರಣಿಗೆ ಮುತ್ತಿಕ್ಕಿರುವ ಮೆನ್ ಇನ್ ಬ್ಲ್ಯೂ ಇದೀಗ 50 ಓವರ್ಗಳ ಫಾರ್ಮೆಟ್ನಲ್ಲೂ ಗೆಲುವಿನ ಲಯ ಮುಂದುವರೆಸುವ ವಿಶ್ವಾಸದಲ್ಲಿದೆ. ಈ ಸರಣಿಯು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅಭ್ಯಾಸದ ಭಾಗವೂ ಹೌದು. ಫೆಬ್ರವರಿ 6 ರಿಂದ ಶುರುವಾಗುವ ಒಡಿಐ ಸರಣಿಯ ಮೊದಲ ಪಂದ್ಯವು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಆರಂಭವಾಗಲಿದೆ.
ಜಾಗತಿಕ ಐಸಿಸಿ ಟೂರ್ನಮೆಂಟ್‌ಗೆ ತಮ್ಮ ಸಿದ್ಧತೆ ಅಂತಿಮಗೊಳಿಸಲು ಭಾರತದ ಜೊತೆಗೆ ಇಂಗ್ಲೆಂಡ್ಗೂ ಈ ಸರಣಿ ಹೆಚ್ಚು ಮಹತ್ವದ್ದಾಗಿದೆ. ಮುಂದಿನ 2 ಪಂದ್ಯಗಳು ಫೆಬ್ರವರಿ 9, 12 ರಂದು ಕ್ರಮವಾಗಿ ಕಟಕ್ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಏಕದಿನ ವಿಶ್ವಕಪ್ ಬಳಿಕ ಹೆಚ್ಚು ಒಡಿಐ ಪಂದ್ಯಗಳಲ್ಲಿ ಕಣಕ್ಕಿಳಿಯದ ಭಾರತ, ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಅತ್ಯಗತ್ಯ. ಅದರಲ್ಲೂ ಕಳೆದ ಸರಣಿಯಲ್ಲಿ ಸೋಲಿನ ಕಹಿ ಅನುಭವಿಸಿ ಕೆಟ್ಟ ದಾಖಲೆಗೂ ಪಾತ್ರವಾಗಿತ್ತು.
ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವರುಣ್ ಚಕ್ರವರ್ತಿ ಅವರನ್ನು ಫೆಬ್ರವರಿ 4ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ತಂಡಕ್ಕೆ ಭಾರತ ತಂಡ ಸೇರಿಸಿಕೊಂಡಿದೆ. ಮತ್ತೊಂದೆಡೆ ಇಂಗ್ಲೆಂಡ್ ತಂಡವು ಗಾಯದ ಸಮಸ್ಯೆ ಕಾರಣ ವಿಕೆಟ್ ಕೀಪರ್ ಜೇಮೀ ಸ್ಮಿತ್ ಸೇವೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮಹತ್ವದ ಪಂದ್ಯಕ್ಕೂ ಮುನ್ನ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ (VCA) ಪಿಚ್ ರಿಪೋರ್ಟ್, ಹವಾಮಾನ ವರದಿ, ಮುಖಾಮುಖಿ ದಾಖಲೆ, ಸಂಭಾವ್ಯ ತಂಡಗಳ ಕುರಿತು ತಿಳಿಯೋಣ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಪಿಚ್ ವರದಿ
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 9 ಏಕದಿನ ಪಂದ್ಯಗಳು ನಡೆದಿದ್ದು, ಕೊನೆಯ ಪಂದ್ಯ ಮಾರ್ಚ್ 2019 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜರುಗಿತ್ತು. ಮೊದಲು ಬ್ಯಾಟ್ ಮಾಡಿದ ತಂಡಗಳು 3 ಪಂದ್ಯಗಳನ್ನು ಗೆದ್ದರೆ, ಚೇಸಿಂಗ್ ಮಾಡಿದ ತಂಡಗಳು 6 ಪಂದ್ಯಗಳನ್ನು ಗೆದ್ದುಕೊಂಡಿವೆ. ಈ ಪಿಚ್ ಸ್ಪಿನ್ನರ್ಗಳ ಜೊತೆಗೆ ಬ್ಯಾಟರಿಗಳಿಗೂ ಹೆಚ್ಚು ನೆರವು ನೀಡುತ್ತದೆ. ಈ ಮೈದಾನದಲ್ಲಿ ಅತಿ ಹೆಚ್ಚು ಚೇಸ್ ಮಾಡಿದ ಮೊತ್ತ 351 ಆಗಿದೆ. 2013ರಲ್ಲಿ ಆಸೀಸ್ ವಿರುದ್ಧ ಭಾರತ ಗಳಿಸಿದ ಗರಿಷ್ಠ ಮೊತ್ತವಾಗಿದೆ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ - ಅಂಕಿ-ಸಂಖ್ಯೆ
ಆಡಿದ ಪಂದ್ಯಗಳು - 9
ಮೊದಲು ಬ್ಯಾಟಿಂಗ್ ನಡೆಸಿದ ಪಂದ್ಯಗಳ ಗೆಲುವು - 3 (33.33%)
ಚೇಸಿಂಗ್ನಲ್ಲಿ ಪಂದ್ಯಗಳ ಗೆಲುವು - 6 (66.67%)
ತಂಡದ ಅತಿ ಹೆಚ್ಚು ಇನ್ನಿಂಗ್ಸ್ ಮೊತ್ತ - 354/7 (ಭಾರತ) 28/10/2009 ಆಸ್ಟ್ರೇಲಿಯಾ ವಿರುದ್ಧ
ತಂಡದ ಅತಿ ಕಡಿಮೆ ಇನ್ನಿಂಗ್ಸ್ - 123 (ಕೆನಡಾ) 28/02/2011 ಜಿಂಬಾಬ್ವೆ ವಿರುದ್ಧ
ಅತಿ ಹೆಚ್ಚು ರನ್ ಚೇಸ್ - 351/4 (ಭಾರತ) 30/10/2013 ಆಸ್ಟ್ರೇಲಿಯಾ ವಿರುದ್ಧ
ಪ್ರತಿ ವಿಕೆಟ್‌ಗೆ ಸರಾಸರಿ ರನ್ - 37.18
ಪ್ರತಿ ಓವರ್‌ಗೆ ಸರಾಸರಿ ರನ್ - 5.73
ಮೊದಲು ಬ್ಯಾಟಿಂಗ್ ಮಾಡಿದ ಸರಾಸರಿ ಸ್ಕೋರ್ - 288
ಭಾರತ-ಇಂಗ್ಲೆಂಡ್: ಹವಾಮಾನ ವರದಿ
ಇಂಡೋ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆ ಇಲ್ಲ. ಸಂಪೂರ್ಣ ಬಿಸಿಲು ಇರಲಿದೆ. ಗರಿಷ್ಠ ತಾಪಮಾನ 32 ಡಿಗ್ರಿ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್. ಸಂಜೆ ಇಬ್ಬನಿ ಬೀಳಬಹುದು. ಹಾಗಾಗಿ ಚೇಸಿಂಗ್ ತಂಡಕ್ಕೆ ಇದು ನೆರವಾಗಬಹುದು.
ಭಾರತದ ಸಂಭಾವ್ಯ ಆಡುವ XI: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಇಂಗ್ಲೆಂಡ್ ಸಂಭಾವ್ಯ ಆಡುವ XI: ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜೇಮೀ ಓವರ್‌ಸ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಭಾರತ-ಇಂಗ್ಲೆಂಡ್: ಮುಖಾಮುಖಿ ದಾಖಲೆ
ಭಾರತ ಮತ್ತು ಇಂಗ್ಲೆಂಡ್ ತಂಡಗಳು ನಾಗ್ಪುರದಲ್ಲಿ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಲಿವೆ. ಒಟ್ಟಾರೆಯಾಗಿ, ಉಭಯ ತಂಡಗಳು 107 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮೆನ್ ಇನ್ ಬ್ಲೂ ತಂಡವು 58 ಪಂದ್ಯಗಳಲ್ಲಿ ಜಯಗಳಿಸಿ ಮುನ್ನಡೆ ಸಾಧಿಸಿದೆ. ಕ್ರಿಕೆಟ್ ಜನಕರು 44 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.
