ಭಾರತ vs ಇಂಗ್ಲೆಂಡ್‌ ಮೊದಲ ಟಿ20 ಪಂದ್ಯಕ್ಕೆ ಮಳೆ ಆತಂಕ ಇದೆಯಾ; ಕೋಲ್ಕತ್ತಾ ಪಿಚ್‌ ಹಾಗೂ ಹವಾಮಾನ ವರದಿ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್‌ ಮೊದಲ ಟಿ20 ಪಂದ್ಯಕ್ಕೆ ಮಳೆ ಆತಂಕ ಇದೆಯಾ; ಕೋಲ್ಕತ್ತಾ ಪಿಚ್‌ ಹಾಗೂ ಹವಾಮಾನ ವರದಿ ಹೀಗಿದೆ

ಭಾರತ vs ಇಂಗ್ಲೆಂಡ್‌ ಮೊದಲ ಟಿ20 ಪಂದ್ಯಕ್ಕೆ ಮಳೆ ಆತಂಕ ಇದೆಯಾ; ಕೋಲ್ಕತ್ತಾ ಪಿಚ್‌ ಹಾಗೂ ಹವಾಮಾನ ವರದಿ ಹೀಗಿದೆ

Ind vs Eng: ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವಿನ ಮೊದಲ ಟಿ20 ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜನವರಿ 22ರ ಬುಧವಾರದ ಪಂದ್ಯಕ್ಕೆ ದಾಖಲೆಯ ಸಂಖ್ಯೆಯ ಅಭಿಮಾನಿಗಳು ಪಂದ್ಯ ವೀಕ್ಷಿಸುವ ನಿರೀಕ್ಷೆ ಇದೆ.

ಭಾರತ vs ಇಂಗ್ಲೆಂಡ್‌ ಮೊದಲ ಟಿ20; ಕೋಲ್ಕತ್ತಾ ಪಿಚ್‌ ಹಾಗೂ ಹವಾಮಾನ ವರದಿ ಹೀಗಿದೆ
ಭಾರತ vs ಇಂಗ್ಲೆಂಡ್‌ ಮೊದಲ ಟಿ20; ಕೋಲ್ಕತ್ತಾ ಪಿಚ್‌ ಹಾಗೂ ಹವಾಮಾನ ವರದಿ ಹೀಗಿದೆ (AFP)

ಕೋಲ್ಕತ್ತಾ: ಸುದೀರ್ಘ ಅಂತರದ ಬಳಿಕ ಭಾರತ ಕ್ರಿಕೆಟ್‌ ತಂಡವು ವೈಟ್‌ ಬಾಲ್‌ ಕ್ರಿಕೆಟ್‌ ಆಡಲು ಸಜ್ಜಾಗಿದೆ. ಕ್ರಿಕೆಟ್ ಅಭಿಮಾನಿಗಳು ರೋಮಾಂಚಕ ಸ್ವರೂಪವಾಗಿರುವ ಟಿ20ಯತ್ತ ವಾಲುತ್ತಿದ್ದು, ನಾಳೆಯಿಂದ (ಜನವರಿ 22) ಭಾರತ ಮತ್ತು ಇಂಗ್ಲೆಂಡ್‌ (India vs England 1st T20I) ತಂಡಗಳ ನಡುವಿನ ಚುಟುಕು ಸರಣಿ ನಡೆಯಿತ್ತಿದೆ. ಎಂದಿನಂತೆ ಮತ್ತೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಕಣಕ್ಕಿಳಿಯುತ್ತಿದ್ದು, ಐದು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಆಂಗ್ಲರ ಬಳಗವನ್ನು ಎದುರಿಸುತ್ತಿದೆ. ಟೂರ್ನಿಯು ರೋಚಕವಾಗಿರಲಿದೆ ಎನ್ನಲು ಹಲವು ಕಾರಣಗಳಿವೆ. ವರ್ಷದ ಬಳಿಕ ವೇಗಿ ಮೊಹಮ್ಮದ್ ಶಮಿ ಟೀಮ್‌ ಇಂಡಿಯಾ ಪುನರಾಗಮನ ಮಾಡುತ್ತಿದ್ದು, ಬಹುತೇಕ ಯುವ ಆಟಗಾರರೇ ತಂಡದಲ್ಲಿದ್ದಾರೆ.

ಮೊದಲ ಟಿ20 ಪಂದ್ಯವು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜನವರಿ 22ರ ಬುಧವಾರ ಸಂಜೆ 7 ಗಂಟೆಗೆ ಪಂದ್ಯ ಆರಂಭವವಾಗಲಿದೆ. ಈಡನ್‌ ಗಾರ್ಡನ್ಸ್‌ ಮೈದಾನವು ಸುಮಾರು ಮೂರು ವರ್ಷಗಳ ನಂತರ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಹೀಗಾಗಿ ದಾಖಲೆಯ ಸಂಖ್ಯೆಯ ಅಭಿಮಾನಿಗಳು ಪಂದ್ಯ ವೀಕ್ಷಿಸುವ ನಿರೀಕ್ಷೆ ಇದೆ.

ಕೊನೆಯದಾಗಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಆಡಿತ್ತು. ಹರಿಣಗಳ ನಾಡಲ್ಲಿ 3-1 ಅಂತರದಿಂದ ಸರಣಿ ಗೆದ್ದ 2 ತಿಂಗಳ ಬಳಿಕ ಇದೀಗ ಮತ್ತೆ ಈ ಸ್ವರೂಪಕ್ಕೆ ಮರಳುತ್ತಿದೆ.

ಭಾರತ vs ಇಂಗ್ಲೆಂಡ್ ಮೊದಲ ಟಿ20 ಪಂದ್ಯ, ಈಡನ್‌ ಗಾರ್ಡನ್ಸ್ ಪಿಚ್ ವರದಿ‌

ಈಡನ್ ಗಾರ್ಡನ್ಸ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಿಗೆ ಹೆಸರುವಾಸಿಯಾಗಿದೆ. ಇದು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಹೇಳಿ ಮಾಡಿಸಿದ ಮೈದಾನ. ಬೌನ್ಸ್ ಮತ್ತು ವೇಗದ ಔಟ್‌ಫೀಲ್ಡ್ ಬ್ಯಾಟರ್‌ಗಳಿಗೆ ನೆರವಾಗಲಿದೆ. ಹೀಗಾಗಿ ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಬೌಲರ್‌ಗಳ ವಿಷಯಕ್ಕೆ ಬಂದರೆ ವೇಗಿಗಳಿಗಿಂತ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು.

ಕೋಲ್ಕತ್ತಾ ಹವಾಮಾನ ವರದಿ

ಪಂದ್ಯದ ದಿನ ಕೋಲ್ಕತ್ತಾ ಹವಾಮಾನ ಮುನ್ಸೂಚನೆಯು ಆಶಾದಾಯಕವಾಗಿದೆ. ಪದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆ ಇಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಪಂದ್ಯ ವೀಕ್ಷಿಸಬಹುದು. ಪಂದ್ಯವು ಸಂಜೆ ಹೊನಲು ಬೆಳಕಿನಲ್ಲಿ ನಡೆಯುತ್ತಿರುವುದರಿಂದ ಇಬ್ಬನಿಯು ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಇದು ತಂಡಗಳ ಬೌಲಿಂಗ್ ತಂತ್ರಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳನ್ನು ಇಬ್ಬನಿ ಕಾಡಲಿದೆ.

ಭಾರತ vs ಇಂಗ್ಲೆಂಡ್ ನಡುವಿನ ಟಿ20 ಸರಣಿಯು ನೇರಪ್ರಸಾರವು ಭಾರತದಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

ಇಂಗ್ಲೆಂಡ್ ತಂಡ

ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಲಿಯಾಮ್ ಲಿವಿಂಗ್‌ಸ್ಟನ್, ಜೇಮೀ ಓವರ್ಟನ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಮಾರ್ಕ್ ವುಡ್.

Whats_app_banner