ಭಾರತ vs ಇಂಗ್ಲೆಂಡ್ ಎರಡನೇ ಟಿ20ಐ ಪಂದ್ಯಕ್ಕೆ ಮಳೆ ಕಾಟವೇ? ಪಿಚ್ ರಿಪೋರ್ಟ್, ಪ್ಲೇಯಿಂಗ್ 11 ವಿವರ ಇಲ್ಲಿದೆ
India vs England 2nd T20I: ಭಾರತ vs ಇಂಗ್ಲೆಂಡ್ ನಡುವಿನ ಎರಡನೇ ಟಿ20ಐ ಪಂದ್ಯಕ್ಕೆ ಮಳೆ ಇದೆಯೇ? ಪಿಚ್ ರಿಪೋರ್ಟ್, ಪ್ಲೇಯಿಂಗ್ 11, ಮುಖಾಮುಖಿ ದಾಖಲೆಯ ಸಂಪೂರ್ಣ ವಿವರ ಇಲ್ಲಿದೆ.

ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಮೊದಲ ಟಿ20ಐ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ದಾಖಲೆಯ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ ಇದೇ ಲಯ ಕಾಯ್ದುಕೊಂಡು ಸರಣಿ ಮುನ್ನಡೆಯತ್ತ ಚಿತ್ತ ನೆಟ್ಟಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಚುಟುಕು ಪಂದ್ಯದಲ್ಲಿ ಇಂಗ್ಲೆಂಡ್ ತಿರುಗಿ ಬೀಳುವ ಲೆಕ್ಕಾಚಾರದಲ್ಲಿದೆ. 1-0 ಅಂತರದಿಂದ ಸರಣಿ ಮುನ್ನಡೆ ಪಡೆದಿರುವ ಸೂರ್ಯಕುಮಾರ್ ಪಡೆ, ಎರಡನೇ ಪಂದ್ಯದಲ್ಲೂ ಪರಾಕ್ರಮ ವಿಸ್ತರಿಸಲು ಯೋಜನೆ ರೂಪಿಸಿದೆ.
ಕೋಲ್ಕತ್ತಾ ಪಂದ್ಯದಲ್ಲಿ ಚಾಂಪಿಯನ್ನರಂತೆ ಅದ್ಭುತ ಪ್ರದರ್ಶನ ನೀಡಿ ಪ್ರಶಂಸೆಗೆ ಒಳಗಾಗಿದ್ದ ಭಾರತ ತಂಡದ ಪರ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಕಣಕ್ಕಿಳಿಯುವರೇ ಎಂಬ ಕುತೂಹಲ ಗರಿಗೆದರಿದೆ. ಶಮಿ ಅಲಭ್ಯತೆಯಲ್ಲಿ ಭಾರತ ಭರ್ಜರಿ ಜಯ ಸಾಧಿಸಿತ್ತಾದರೂ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅವರ ಲಭ್ಯತೆ ಅನಿವಾರ್ಯವಾಗಿದೆ. ಹೀಗಾಗಿ ವೇಗಿಗೆ ಅಭ್ಯಾಸ ಅಗತ್ಯ ಇದೆ. ಗಾಯ ಮತ್ತು ಸರ್ಜರಿ ಕಾರಣ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್ಗೆ ದೂರ ಉಳಿದಿದ್ದ ಶಮಿ ಅವರ ಫಿಟ್ನೆಸ್ ಸುಧಾರಿಸಿದ್ದು, ಈ ಪಂದ್ಯದಲ್ಲಿ ಅವಕಾಶ ಸಿಗಬಹುದು.
ಒಂದೆರಡು ಬದಲಾವಣೆ ಸಾಧ್ಯತೆ
ಮೊಹಮ್ಮದ್ ಶಮಿ ಅವರ ಅಲಭ್ಯತೆಯಲ್ಲೂ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ ನಡೆಸಿ ಪ್ರವಾಸಿ ತಂಡವನ್ನು 132 ರನ್ಗಳಿಗೆ ಕಟ್ಟಿ ಹಾಕಿದ್ದರು. ಆದರೆ, ನಿತೀಶ್ ಕುಮಾರ್ ರೆಡ್ಡಿ ಬೌಲಿಂಗ್ ಮಾಡಿರಲಿಲ್ಲ. ಹಾಗಾಗಿ ನಿತೀಶ್ರನ್ನು ಕೈಬಿಟ್ಟು ಶಮಿಗೆ ಅವಕಾಶ ನೀಡಬಹುದು ಎಂದು ವರದಿಯಾಗಿದೆ. ಮತ್ತೊಂದು ವರದಿ ಪ್ರಕಾರ ಮೊದಲ ಪಂದ್ಯದಲ್ಲಿ ವಿದ್ವಂಸಕ ಬ್ಯಾಟಿಂಗ್ ನಡೆಸಿದ್ದ ಅಭಿಷೇಕ್ ಶರ್ಮಾ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇಂಗ್ಲೆಂಡ್ ಬೌಲರ್ಗಳ ದಾಳಿಯನ್ನು ಚಿಂದಿ ಉಡಾಯಿಸಿದ್ದ ಅಭಿಷೇಕ್ ಶರ್ಮಾ 232ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ನಡೆಸಿ 34 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್ ಸಿಡಿಸಿ 79 ರನ್ ಚಚ್ಚಿದ್ದರು. ಆದರೆ ಜನವರಿ 24ರ ಶುಕ್ರವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ಅವರ ಪಾದ ಉಳುಕಿತ್ತು. ನಂತರ ಅವರು ಅಭ್ಯಾಸ ಮುಂದುವರೆಸಲಿಲ್ಲ. ಇದು ಟೀಮ್ ಮ್ಯಾನೇಜ್ಮೆಂಟ್ಗೆ ಆತಂಕ ಸೃಷ್ಟಿಸಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ವರದಿಗಳು ಹೇಳುತ್ತಿವೆ.
ಭಾರತ vs ಇಂಗ್ಲೆಂಡ್ 2ನೇ ಟಿ20ಐ ಪಿಚ್ ವರದಿ
ಎಂಎ ಚಿದಂಬರಂ ಸ್ಟೇಡಿಯಂನಲ್ಲಿನ ಪಿಚ್ ಸ್ಪಿನ್ನರ್ಸ್ಗೆ ಹೆಚ್ಚು ಅನುಕೂಲಕರವಾಗಿದೆ. ಈ ಹಿಂದಿನ ಇತಿಹಾಸವೂ ಇದೇ ಹೇಳುತ್ತಿದೆ. ನಿಧಾನಗತಿಯ ಟ್ರ್ಯಾಕ್ನಲ್ಲಿ ಬ್ಯಾಟರ್ಗಳು ಸವಾಲು ಎದುರಿಸುವ ಸಾಧ್ಯತೆ ಹೆಚ್ಚಿದೆ. ಕಳೆದ ವರ್ಷ ಆರಂಭಿಕ ಐಪಿಎಲ್ ಪಂದ್ಯಗಳಲ್ಲಿ ಬ್ಯಾಟಿಂಗ್-ಸ್ನೇಹಿ ಟ್ರ್ಯಾಕ್ ಹೊಂದಿತ್ತು. 7 ವರ್ಷಗಳ ನಂತರ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಚೆಪಾಕ್ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ನೆರವಾಗಬಹುದು.
ಭಾರತ vs ಇಂಗ್ಲೆಂಡ್ ಮುಖಾಮುಖಿ ದಾಖಲೆ
ಪಂದ್ಯ - 25
ಇಂಗ್ಲೆಂಡ್ ಗೆಲುವು - 11
ಭಾರತ ಗೆಲುವು - 14
ಭಾರತ vs ಇಂಗ್ಲೆಂಡ್ 3ನೇ ಟಿ20ಐ ಹವಾಮಾನ ವರದಿ
ಶನಿವಾರ (ಜನವರಿ 25) ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲದಿರುವುದರಿಂದ ಕ್ರಿಕೆಟ್ ಪ್ರೇಮಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ತಾಪಮಾನವು ತುಲನಾತ್ಮಕವಾಗಿ ತಂಪಾಗಿರುತ್ತದೆ. ಗರಿಷ್ಠ 29, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಪಂದ್ಯದ ಟಾಸ್ ಅವಧಿ ಸಂಜೆ 6.30ಕ್ಕೆ. 7 ಗಂಟೆಗೆ ಪಂದ್ಯ ಆರಂಭವಾಗಲಿದೆ.
2ನೇ ಟಿ20ಐಗೆ ಭಾರತ ಸಂಭಾವ್ಯ XI
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ
ಇಂಗ್ಲೆಂಡ್ ಪ್ರಕಟಿಸಿದ ಪ್ಲೇಯಿಂಗ್ 11
ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮಿ ಓವರ್‌ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
