ಅನುಭವಿಗಳು ವೈಫಲ್ಯ, ಅನಾನುಭವಿ ಯಶಸ್ವಿ ಜೈಸ್ವಾಲ್ ದ್ವಿಶತಕ; ಮೊದಲ ಇನ್ನಿಂಗ್ಸ್ನಲ್ಲಿ ಭಾರತ 396 ರನ್
India vs England 2nd Test: ವಿಶಾಖಪಟ್ಟಣಂನ ವೈಎಸ್ ರಾಜಶೇಖರ್ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 112 ಓವರ್ಗಳಲ್ಲಿ 396 ರನ್ ಗಳಿಸಿದೆ.
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಚೊಚ್ಚಲ ದ್ವಿಶತಕದ (209) ನೆರವಿನಿಂದ ಟೀಮ್ ಇಂಡಿಯಾ ಉತ್ತಮ ಮೊತ್ತ ಕಲೆ ಹಾಕಿದೆ. ವಿಶಾಖಪಟ್ಟಣಂನ ವೈಎಸ್ ರಾಜಶೇಖರ್ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 112 ಓವರ್ಗಳಲ್ಲಿ 396 ರನ್ ಗಳಿಸಿದೆ. ಈಗಾಗಲೇ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ 179 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಈ ರನ್ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ, ಮತ್ತೆ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್ ಬೆಂಕಿ-ಬಿರುಗಾಳಿ ಆಟವನ್ನು ಮುಂದುವರೆಸಿದರು. ಆದರೆ ತನ್ನ ಪಾಲುದಾರನಾಗಿದ್ದ ಆರ್ ಅಶ್ವಿನ್, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
5 ರನ್ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ 15 ರನ್ ಸೇರಿಸಿ ಒಟ್ಟು 20 ರನ್ಗಳಿಸಿ ಔಟಾದರು. 37 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 20 ರನ್ ಕಲೆ ಹಾಕಿ ಜೇಮ್ಸ್ ಆಂಡರ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದರು. ಈ ಹಂತದಲ್ಲಿ ಸಿಡಿದೆದ್ದ ಜೈಸ್ವಾಲ್ ದ್ವಿ ಶತಕದ ಗಡಿ ದಾಟಿದರು. ತಂಡದ ಮೊತ್ತವನ್ನು 400ರ ಸಮೀಪ ಕರೆದೊಯ್ದರು.
ಬೌಂಡರಿ ಸಿಕ್ಸರ್ ಸಿಡಿಸಿ ದ್ವಿಶತಕ
102ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬೌಂಡರಿ ಸಿಡಿಸಿದ ಜೈಸ್ವಾಲ್, ತಮ್ಮ ಚೊಚ್ಚಲ ದ್ವಿಶಕ ಸಿಡಿಸಿ ದಾಖಲೆ ಬರೆದರು. 179 ರನ್ಗಳಿಂದ ಎರಡನೇ ದಿನ ಆರಂಭಿಸಿದ ಯುವ ಆಟಗಾರ 30 ರನ್ ಸೇರಿಸಿದರು. ಪರಿಣಾಮ 290 ಎಸೆತಗಳಲ್ಲಿ 19 ಬೌಂಡರಿ, 7 ಸಿಕ್ಸರ್ ಸಹಿತ 209 ರನ್ ಗಳಿಸಿದರು. ಆಂಡರ್ಸನ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜಾನಿ ಬೈರ್ಸ್ಟೋಗೆ ಕ್ಯಾಚ್ ನೀಡಿದರು.
ಇಂಗ್ಲೆಂಡ್ ಪರ ಮೂವರಿಗೆ ಮೂರು ವಿಕೆಟ್
ಜೈಸ್ವಾಲ್ ಬೆನ್ನಲ್ಲೇ ಬಳಿಕ ಜಸ್ಪ್ರೀತ್ ಬುಮ್ರಾ, ಮುಕೇಶ್ ಕುಮಾರ್ ಔಟಾದರು. ಅಂತಿಮವಾಗಿ ಭಾರತ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 396 ರನ್ಗಳಿಸಿತು. ಇಂಗ್ಲೆಂಡ್ ಪರ ಮೂವರು ತಲಾ ಮೂರು ವಿಕೆಟ್ ಪಡೆದರು. ಜೇಮ್ಸ್ ಆ್ಯಂಡರ್ಸನ್, ರೆಹಾನ್ ಅಹ್ಮದ್, ಶೋಯೆಬ್ ಬಶೀರ್ ತಲಾ 3 ವಿಕೆಟ್ ಪಡೆದರು. ಮೊದಲ ಪಂದ್ಯದ ಹೀರೋ ಟಾಮ್ ಹಾರ್ಟ್ಲೆ 1 ವಿಕೆಟ್ ಪಡೆದರು.
ಭಾರತೀಯ ಆಟಗಾರರು ವೈಫಲ್ಯ
ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಉಳಿದ ಭಾರತೀಯ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ರೋಹಿತ್ ಶರ್ಮಾ 14, ಶುಭ್ಮನ್ ಗಿಲ್ 34, ಶ್ರೇಯಸ್ ಅಯ್ಯರ್ 27, ರಜತ್ ಪಾಟೀದಾರ್ 32, ಕೆಎಸ್ ಭರತ್ 17, ಅಶ್ವಿನ್ 20 ರನ್ ಗಳಿಸಿ ನಿರಾಸೆ ಮೂಡಿಸಿದರು. ಕುಲ್ದೀಪ್ ಯಾದವ್ ಅಜೇಯ 8 ರನ್ ಕಲೆ ಹಾಕಿದರು. ಇವರೆಲ್ಲರೂ ಅನುಭವಿ ಆಟಗಾರರಾಗಿದ್ದು ವೈಫಲ್ಯ ಅನುಭವಿಸಿದ್ದು ಬೇಸರದ ಸಂಗತಿ.
(ಈ ಸುದ್ದಿ ಪ್ರಕಟಗೊಂಡ ಅವಧಿಯಲ್ಲಿ ಇಂಗ್ಲೆಂಡ್ 17 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತ್ತು)