ಭಾರತ vs ಇಂಗ್ಲೆಂಡ್ 3ನೇ ಏಕದಿನ; ಹೀಗಿದೆ ಔಪಚಾರಿಕ ಪಂದ್ಯಕ್ಕೆ ನಮೋ ಮೈದಾನದ ಪಿಚ್ ರಿಪೋರ್ಟ್, ಅಹ್ಮಾದಾಬಾದ್ ಹವಾಮಾನ ವರದಿ
India vs England 3rd ODI: ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯ ಫೆಬ್ರವರಿ 12ರಂದು ಬುಧವಾರ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮೈದಾನದ ಪಿಚ್ ರಿಪೋರ್ಟ್, ಅಹ್ಮಾದಾಬಾದ್ ಹವಾಮಾನ ವರದಿ ಹೀಗಿದೆ ನೋಡಿ.

ಫೆಬ್ರವರಿ 12ರ ಬುಧವಾರ ನಡೆಯುವ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನ ವೇದಿಕೆ ಒದಗಿಸಲಿದೆ. ಈಗಾಗಲೇ ಸರಣಿ ಗೆದ್ದಿರುವ ಆತಿಥೇಯ ಮತ್ತು ಸೋತಿರುವ ಪ್ರವಾಸಿ ತಂಡಗಳಿಗೆ ಇದು ಔಪಚಾರಿಕ ಪಂದ್ಯವಾದರೂ ಗೆಲುವು ಅನಿವಾರ್ಯ. ಏಕೆಂದರೆ ಫೆಬ್ರವರಿ 19ರಿಂದ ಶುರುವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸಿದ್ಧತೆ ನಡೆಸುವ ಕೊನೆಯ ಏಕದಿನ ಪಂದ್ಯ ಇದಾಗಿದ್ದು, ಅತ್ಯುತ್ತಮ ಪ್ರದರ್ಶನದ ವಿಶ್ವಾಸದಲ್ಲಿವೆ ಎರಡೂ ತಂಡಗಳು. 2023ರ ಏಕದಿನ ವಿಶ್ವಕಪ್ ಫೈನಲ್ ನಂತರ ಮೊದಲ ಬಾರಿಗೆ ಭಾರತ ಈ ಮೈದಾನದಲ್ಲಿ ಕಣಕ್ಕಿಳಿಯಲಿದೆ.
ಮತ್ತೊಂದೆಡೆ 2-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಸರಣಿ ಕ್ಲೀನ್ ಸ್ವೀಪ್ ಸಾಧಿಸುವ ಗುರಿಯನ್ನು ಹೊಂದಿದೆ. ಮತ್ತೊಂದೆಡೆ ಪಾಕಿಸ್ತಾನ ಮತ್ತು ದುಬೈ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪುಟಿದೇಳುವ ವಿಶ್ವಾಸದಲ್ಲಿದೆ. ಅಲ್ಲದೆ, ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಲು ಭರ್ಜರಿ ಕಸರತ್ತು ನಡೆಸುತ್ತಿದೆ. ಮೊದಲ 2 ಪಂದ್ಯಗಳಲ್ಲೂ ಸೋತಿರುವ ಇಂಗ್ಲೆಂಡ್, ಈಗ ಅಂತಿಮ ಪಂದ್ಯವನ್ನು ಉಳಿಸಿಕೊಂಡು ಮಹತ್ವದ ಟೂರ್ನಿಗೆ ಸಿದ್ಧ ಎನ್ನುವ ಸಂದೇಶ ರವಾನಿಸುವ ಲೆಕ್ಕಾಚಾರದಲ್ಲಿದೆ. ಹಾಗಾದರೆ ನರೇಂದ್ರ ಮೋದಿ ಮೈದಾನದ ಪಿಚ್, ಅಹ್ಮದಾಬಾದ್ ಹವಾಮಾನ ವರದಿ ಹೇಗಿದೆ ಎನ್ನುವುದರ ಒಂದು ನೋಟ ಇಲ್ಲಿದೆ.
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ವರದಿ
ನರೇಂದ್ರ ಮೋದಿ ಕ್ರಿಕೆಟ್ ಮೈದಾನದ ಪಿಚ್ ಸಾಂಪ್ರದಾಯಿಕವಾಗಿ ನಿಧಾನ ಮತ್ತು ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಪ್ರಸ್ತುತ ಪಿಚ್‌ನ ಸ್ವರೂಪವೂ ವಿಕಸನಗೊಂಡಿದೆ. ಇತ್ತೀಚಿನ ಪಂದ್ಯಗಳಲ್ಲಿ ಈ ಮೈದಾನವು ಅತಿ ಹೆಚ್ಚಿನ ಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಐಪಿಎಲ್ ಸಮಯದಲ್ಲಿ ಹಲವು ತಂಡಗಳು ಬೃಹತ್ ಮೊತ್ತ ಕಲೆ ಹಾಕಿದ ಉದಾಹರಣೆಗೂ ನಮ್ಮ ಮುಂದಿವೆ. ಇಂತಹದ್ದೇ ದೊಡ್ಡ ಇನ್ನಿಂಗ್ಸ್ಗಳು ಮತ್ತೆ ಸಂಭವಿಸಿದರೂ ಅಚ್ಚರಿ ಇಲ್ಲ. ಏಕೆಂದರೆ ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟರ್ಗಳ ದಂಡೇ ಇದೆ.
ಮೈದಾನದಲ್ಲಿ ಏಕದಿನ ದಾಖಲೆಗಳು (ಕ್ರಿಕ್ಬಜ್ ಮಾಹಿತಿ ಪ್ರಕಾರ)
ಪಂದ್ಯಗಳು - 36
ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 19
ಚೇಸಿಂಗ್ ನಡೆಸಿದ ತಂಡಗಳ ಗೆಲುವು - 17
ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ - 237
ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ - 208
ಗರಿಷ್ಠ ಸ್ಕೋರ್ - 365/2 (50) ಭಾರತ vs ಸೌತ್ ಆಫ್ರಿಕಾ
ಕನಿಷ್ಠ ಸ್ಕೋರ್ - 85/10 (30.1) ಜಿಂಬಾಬ್ವೆ vs ವೆಸ್ಟ್ ಇಂಡೀಸ್
ಗರಿಷ್ಠ ಚೇಸಿಂಗ್ ಸ್ಕೋರ್ - 325/5 (47.4) ಭಾರತ vs ವೆಸ್ಟ್ ಇಂಡೀಸ್
ರಕ್ಷಿಸಿಕೊಂಡ ಕನಿಷ್ಠ ಸ್ಕೋರ್ - 196/10 (48.3) ಭಾರತ vs ವೆಸ್ಟ್ ಇಂಡೀಸ್
ಅಹ್ಮದಾಬಾದ್ ಹವಾಮಾನ ವರದಿ
ಅಕ್ಯೂವೆದರ್ ಪ್ರಕಾರ, ಫೆಬ್ರವರಿ 12 ರಂದು ಅಹ್ಮದಾಬಾದ್ನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಪಂದ್ಯದ ದಿನದಂದು ಗರಿಷ್ಠ ತಾಪಮಾನವು 31 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. ಆದರೆ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಆರ್ದ್ರತೆಯು ಸುಮಾರು 38% ಎಂದು ಅಂದಾಜಿಸಲಾಗಿದೆ, ಆದರೆ ಗಾಳಿಯು ಗಂಟೆಗೆ 13 ಕಿಲೋಮೀಟರ್ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ಪಂದ್ಯಕ್ಕೆ ಯಾವುದೇ ಮಳೆ ಇರುವುದಿಲ್ಲ. ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು.
ಪಂದ್ಯದ ಆರಂಭದ ಸಮಯ: ಫೆಬ್ರವರಿ 12, ಮಧ್ಯಾಹ್ನ 1:30, ಟಾಸ್ ಸಮಯ-1:00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಡಿಸ್ನಿ+ ಹಾಟ್ಸ್ಟಾರ್
ಮುಖಾಮುಖಿ ದಾಖಲೆ: ಪಂದ್ಯಗಳು: 109, ಭಾರತ ಗೆಲುವು: 60, ಇಂಗ್ಲೆಂಡ್ ಗೆಲುವು: 44
ಭಾರತ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ.
ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೋ ರೂಟ್, ಟಾಮ್ ಬ್ಯಾಂಟನ್, ಲಿಯಾಮ್ ಲಿವಿಂಗ್‌ಸ್ಟೋನ್, ಬ್ರೈಡನ್ ಕಾರ್ಸೆ, ಜೇಮೀ ಓವರ್ಟನ್, ಜೋಸ್ ಬಟ್ಲರ್, ಜೇಮೀ ಸ್ಮಿತ್, ಫಿಲಿಪ್ ಸಾಲ್ಟ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಮಾರ್ಕ್ ವುಡ್.
ಭಾರತದ ಸಂಭಾವ್ಯ 11: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಇಂಗ್ಲೆಂಡ್ ಸಂಭಾವ್ಯ XI: ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
