ಆಕಾಶ್ ದೀಪ್ ಬೆಂಕಿ ಬೌಲಿಂಗ್, ಜೋ ರೂಟ್ ಶತಕದ ದಾಖಲೆ; ಉತ್ತಮ ಮೊತ್ತದತ್ತ ಪ್ರವಾಸಿ ಇಂಗ್ಲೆಂಡ್ ತಂಡ
India vs England 4th Test : ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂದು ಇಂಗ್ಲೆಂಡ್, ಉತ್ತಮ ಪ್ರದರ್ಶನ ನೀಡುತ್ತಿದೆ. ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿ ಇದೀಗ ದಿಟ್ಟ ಹೋರಾಟ ನಡೆಸುತ್ತಿದೆ.

ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ (Joe Root) ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್, ಉತ್ತಮ ಮೊತ್ತದತ್ತ ಹೆಜ್ಜೆ ಹಾಕುತ್ತಿದೆ. ಕಳೆದ ಮೂರು ಪಂದ್ಯಗಳ 6 ಇನ್ನಿಂಗ್ಸ್ಗಳಲ್ಲಿ 50ರ ಗಡಿ ದಾಟಲು ವಿಫಲವಾಗಿದ್ದ ರೂಟ್, ಈಗ ದಾಖಲೆಯ ಶತಕ ಸಾಧನೆ ಮಾಡಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 90 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 302 ರನ್ ಕಲೆ ಹಾಕಿದೆ.
ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಡೆಬ್ಯು ಮಾಡಿದ ಆಕಾಶ್ ದೀಪ್ ಮಾರಕ ದಾಳಿಗೆ ಆಂಗ್ಲರು ಪೆವಿಲಿಯನ್ ಪರೇಡ್ ನಡೆಸಿದರು. ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಅವರು ಆಕಾಶ್ಗೆ ಸಾಥ್ ನೀಡಿದರು.
ಆರಂಭಿಕರಾಗಿ ಕಣಕ್ಕಿಳಿದ ಬೆನ್ ಡಕೆಟ್ 11, ಒಲ್ಲಿ ಫೋಪ್ 0, ಜಾಕ್ ಕ್ರ್ಯಾವ್ಲಿ 42, ಜಾನಿ ಬೈರ್ಸ್ಟೋ 38, ಬೆನ್ ಸ್ಟೋಕ್ಸ್ 3, ಬೆನ್ ಫೋಕ್ಸ್ 47 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ 112 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡವನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ರೂಟ್ ಮತ್ತು 7ನೇ ಸ್ಲಾಟ್ನಲ್ಲಿ ಕಣಕ್ಕಿಳಿದ ಬೆನ್ ಫೋಕ್ಸ್ ಅದ್ಭುತ ಆಟವಾಡಿ ನೆರವಾದರು.
ರೂಟ್ ಶತಕ ಮತ್ತು ಶತಕದ ಜೊತೆಯಾಟ
ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಜೋ ರೂಟ್ ತನ್ನ 31ನೇ ಟೆಸ್ಟ್ ಶತಕವನ್ನು ಸಿಡಿಸಿ ಸಂಭ್ರಮಿಸಿದರು. 219 ಎಸೆತಗಳಲ್ಲಿ ನೂರರ ಗಡಿ ದಾಟಿದ ರೂಟ್, ಭಾರತದ ಎದುರು 10ನೇ ಟೆಸ್ಟ್ ಶತಕದ ಸಾಧನೆಯನ್ನೂ ಮಾಡಿದರು. ಅಲ್ಲದೆ, 6ನೇ ವಿಕೆಟ್ಗೆ ಬೆನ್ಫೋಕ್ಸ್ ಜೊತೆ ಸೇರಿ 113 ರನ್ಗಳ ಜೊತೆಯಾಟವಾಡಿದರು. 226 ಎಸೆತಗಳಲ್ಲಿ 9 ಬೌಂಡರಿ ಸಹಿತ 106 ರನ್ ಕಲೆ ಹಾಕಿದ್ದು ಅಜೇಯರಾಗಿದ್ದಾರೆ.
ಮತ್ತೊಂದೆಡೆ ಈ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದ ಒಲ್ಲಿ ರಾಬಿನ್ಸನ್ 31 ರನ್ ಸಿಡಿಸಿ ರೂಟ್ಗೆ ಸಖತ್ ಸಾಥ್ ಕೊಡುತ್ತಿದ್ದಾರೆ. ಇಬ್ಬರು ಸೇರಿ 57 ರನ್ಗಳ ಅಜೇಯ ಪಾಲುದಾರಿಕೆ ನೀಡಿದ್ದಾರೆ. ನಾಳೆಯೂ ಭಾರತೀಯ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಲು ಸಿದ್ಧರಾಗಿದ್ದಾರೆ. ಮೊದಲ ಸೆಷನ್ನಲ್ಲಿ ಐವರನ್ನು ಔಟ್ ಮಾಡಿದ ರೋಹಿತ್ ಪಡೆಯ ಬೌಲರ್ಗಳು ಎರಡನೇ ಸೆಷನ್ ವಿಕೆಟ್ ಪಡೆಯಲು ಪರದಾಡಿದರು. 3ನೇ ಸೆಷನ್ನಲ್ಲಿ 2 ವಿಕೆಟ್ ಪಡೆದರು.
ಆಕಾಶ್ ದೀಪ್ ಬೆಂಕಿ ಬೌಲಿಂಗ್
313ನೇ ಟೆಸ್ಟ್ ಪ್ಲೇಯರ್ ಆಗಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ಆಕಾಶ್ ದೀಪ್ ಬೆಂಕಿ ಬೌಲಿಂಗ್ ನಡೆಸಿದರು. ಚೊಚ್ಚಲ ಪಂದ್ಯದಲ್ಲೇ ಆಂಗ್ಲರ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ಗಳನ್ನು ಔಟ್ ಮಾಡಿದರು. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಇಬ್ಬರನ್ನು, ಜಡೇಜಾ ಮತ್ತು ಅಶ್ವಿನ್ ತಲಾ ಒಬ್ಬರನ್ನು ಔಟ್ ಮಾಡಿದ್ದಾರೆ. ಎರಡನೇ ದಿನದಾಟದಲ್ಲಿ ಯಾವ ರೀತಿಯ ಪ್ರದರ್ಶನ ಹೊರ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
