ಕನ್ನಡ ಸುದ್ದಿ  /  Cricket  /  India Vs England 5th Test India Extends Lead To 255 Runs Despite Englands Late Fightback Rohit Sharma Shubman Gill Prs

ರೋಹಿತ್​ ಶರ್ಮಾ-ಶುಭ್ಮನ್ ಗಿಲ್ ಶತಕ, ಪಡಿಕ್ಕಲ್-ಸರ್ಫರಾಜ್ ಅರ್ಧಶತಕ; ಭರ್ಜರಿ ಮುನ್ನಡೆಯಲ್ಲಿ ಟೀಮ್​ ಇಂಡಿಯಾ

India vs England 5th Test : ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಮುನ್ನಡೆ ಸಾಧಿಸಿದೆ. ರೋಹಿತ್​ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರ ಶತಕದ ನೆರವಿನಿಂದ 255 ರನ್​​ಗಳ ಮುನ್ನಡೆ ಸಾಧಿಸಿದೆ.

ರೋಹಿತ್​ ಶರ್ಮಾ-ಶುಭ್ಮನ್ ಗಿಲ್ ಶತಕ
ರೋಹಿತ್​ ಶರ್ಮಾ-ಶುಭ್ಮನ್ ಗಿಲ್ ಶತಕ (PTI)

ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ರೋಹಿತ್​ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರ ಶತಕಗಳು, ದೇವದತ್ ಪಡಿಕ್ಕಲ್ ಮತ್ತು ಸರ್ಫರಾಜ್ ಖಾನ್ ಅವರ ಅರ್ಧಶತಕದ ನೆರವಿನಿಂದ ಭಾರತ ಮೊತ್ತ ಪೇರಿಸಿದ್ದು, 3ನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದೆ. 255 ರನ್ನುಗಳ ಭರ್ಜರಿ ಮುನ್ನಡೆಯೊಂದಿಗೆ 2ನೇ ದಿನದಾಟ ಮುಗಿಸಿದೆ. ಮೊದಲ ಇನ್ನಿಂಗ್ಸ್​​​ನಲ್ಲಿ 8 ವಿಕೆಟ್ ನಷ್ಟಕ್ಕೆ 473 ರನ್​ ಗಳಿಸಿದೆ.

5ನೇ ಟೆಸ್ಟ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, 218 ರನ್​ಗಳಿಗೆ ಆಲೌಟ್​ ಆಯಿತು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್​ ಆರಂಭಿಸಿದ ರೋಹಿತ್​, ಮೊದಲ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 135 ರನ್​ಗಳಿಸಿತ್ತು. ಇಷ್ಟು ರನ್​ಗಳಿಂದ ಎರಡನೇ ದಿನದಾಟ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಸೊಗಸಾದ ಬ್ಯಾಟಿಂಗ್ ನಡೆಸಿ ಇಂಗ್ಲೆಂಡ್ ಬೌಲರ್​​ಗಳ ಮೇಲೆ ಸವಾರಿ ಮಾಡಿದರು.

ರೋಹಿತ್​-ಗಿಲ್ ತಲಾ ಸೆಂಚುರಿ

ಜವಾಬ್ದಾರಿಯುತ ಮತ್ತು ಅದ್ಭುತ ಬ್ಯಾಟಿಂಗ್ ನಡೆಸಿದ ರೋಹಿತ್ ಮತ್ತು ಗಿಲ್ ಅವರು ತಲಾ ಶತಕ ಪೂರೈಸಿದರು. 171 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಮ್ಮ ಶತಕದ ನಂತರ ಅದನ್ನು ದೊಡ್ಡ ಇನ್ನಿಂಗ್ಸ್​ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ರೋಹಿತ್​ 162 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್​ ಸಹಿತ 103 ರನ್ ಗಳಿಸಿ ಬೆನ್​ಸ್ಟೋಕ್ಸ್​ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್ ಆದರು.

ರೋಹಿತ್​ಗೆ ಸಾಥ್ ಕೊಡುತ್ತಿದ್ದ ಶುಭ್ಮನ್ ಗಿಲ್ 150 ಎಸೆತಗಳಲ್ಲಿ 12 ಬೌಂಡರಿ, 5 ಸಿಕ್ಸರ್​ ಸಹಿತ 110 ರನ್ ಕಲೆ ಹಾಕಿ ಜೇಮ್ಸ್ ಆಂಡರ್ಸನ್ ಬೌಲಿಂಗ್​​​ನಲ್ಲಿ ಹೊರ ನಡೆದರು. ಇಂಗ್ಲೆಂಡ್​ ಬೌಲರ್​​ಗಳಿಗೆ ಬೆಂಡೆತ್ತಿದ ಇಬ್ಬರೂ ಸಹ 2ನೇ ಸೆಷನ್‌ನಲ್ಲಿ ಔಟಾದರು. ನಂತರ ಸರ್ಫರಾಜ್ ಖಾನ್-ಪಡಿಕ್ಕಲ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಸರ್ಫರಾಜ್ ತಮ್ಮ 3ನೇ ಟೆಸ್ಟ್ ಅರ್ಧಶತಕ ಪೂರೈಸಿದರೆ, ಕನ್ನಡಿಗ ಪಡಿಕ್ಕಲ್ ಚೊಚ್ಚಲ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿ ಗಮನ ಸೆಳೆದರು.

ಪಡಿಕ್ಕಲ್ 103 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 65 ರನ್ ಬಾರಿಸಿದರೆ, ಸರ್ಫರಾಜ್ ಖಾನ್ 60 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​ ಸಹಿತ 56 ರನ್ ಗಳಿಸಿದರು. ಇಬ್ಬರು ಸಹ ಶೋಯೆಬ್ ಬಶೀರ್​ ಬೌಲಿಂಗ್​ನಲ್ಲಿ ಔಟಾದರು. ಆದರೆ ರವೀಂದ್ರ ಜಡೇಜಾ (15), ಧ್ರುವ್ ಜುರೆಲ್ (15) ನಿರಾಸೆ ಮೂಡಿಸಿದರು. ಇನ್ನು ರವಿಚಂದ್ರನ್ ಅಶ್ವಿನ್ ತನ್ನ 100ನೇ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಆದರೆ, ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ಅವರ ಆಟ ಎಲ್ಲರನ್ನೂ ಆಕರ್ಷಿಸಿತು.

ಸ್ಪೆಷಲಿಸ್ಟ್​ ಬ್ಯಾಟರ್​ಗಳಂತೆ ಬ್ಯಾಟಿಂಗ್ ನಡೆಸಿದ ಕುಲ್ದೀಪ್ ಮತ್ತು ಬುಮ್ರಾ ಮನಮೋಹಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ 9ನೇ ವಿಕೆಟ್​ಗೆ 108 ಎಸೆತಗಳಲ್ಲಿ ಅಜೇಯ 45 ರನ್​ಗಳ ಪಾಲುದಾರಿಕೆ ನೀಡಿದೆ. ಕುಲ್ದೀಪ್ 27 ರನ್ ಮತ್ತು ಬುಮ್ರಾ 19 ರನ್ ಗಳಿಸಿ 3ನೇ ದಿನದಾಟವನ್ನು ಕಾಯ್ದುಕೊಂಡಿದ್ದಾರೆ. 120 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿದೆ.