ಕನ್ನಡ ಸುದ್ದಿ  /  Cricket  /  India Vs England 5th Test Preview Hpca Stadium Pitch Report Dharamsala Weather Forecast In Kannada Ind Vs Eng Jra

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್‌ಗೆ ಚಳಿಯೊಂದಿಗೆ ಮಳೆ ಕಾಟ; ಧರ್ಮಶಾಲಾ ಪಿಚ್ ಹಾಗೂ ಹವಾಮಾನ ಮುನ್ಸೂಚನೆ ಹೀಗಿದೆ

IND vs ENG 5th Test: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಐದನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುತ್ತಿವೆ. ಭಾರಿ ಚಳಿ ಹಾಗೂ ಹಿಮ ಮಳೆಯ ಸಾಧ್ಯತೆಯ ನಡುವೆ ಪಂದ್ಯದ ರೋಚಕತೆಯ ಕಾವು ಹೆಚ್ಚಿದೆ. ನಿರ್ಣಾಯಕ ಪಂದ್ಯದ ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.

ಧರ್ಮಶಾಲಾ ಪಿಚ್ ಹಾಗೂ ಹವಾಮಾನ ಮುನ್ಸೂಚನೆ ಹೀಗಿದೆ
ಧರ್ಮಶಾಲಾ ಪಿಚ್ ಹಾಗೂ ಹವಾಮಾನ ಮುನ್ಸೂಚನೆ ಹೀಗಿದೆ (AFP)

ಹಿಮಾಲಯದ ತಪ್ಪಲಿನ ಧರ್ಮಶಾಲಾದಲ್ಲಿ ಭಾರತ ಮತ್ತು ಇಂಗ್ಲೆಂಡ್‌ (India vs England 5th Test) ತಂಡಗಳು ಐದನೇ ಟೆಸ್ಟ್‌ ಪಂದ್ಯದಲ್ಲಿ ಕಾದಾಡಲು ಸಜ್ಜಾಗಿವೆ. ಭಾರತದ ಅತ್ಯಂತ ಸುಂದರ ಮೈದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಇಂಡೋ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯಕ್ಕೆ ಆತಿಥ್ಯ ವಹಿಸುತ್ತದೆ. ಭಾರಿ ಚಳಿ ಹಾಗೂ ಹಿಮ ಮಳೆಯ ಸಾಧ್ಯತೆಯ ನಡುವೆ ಪಂದ್ಯದ ರೋಚಕತೆಯ ಕಾವು ಹೆಚ್ಚಿಸಿಕೊಳ್ಳಲು ಉಭಯ ತಂಡಗಳು ಸಜ್ಜಾಗಿವೆ. ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡವು ಈಗಾಗಲೇ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಹೈದರಾಬಾದ್‌ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಸೋತ ಭಾರತವು, ಆ ಬಳಿಕ ಭರ್ಜರಿಯಾಗಿ ಪುಟಿದೆದ್ದಿತು. ಸತತ ಮೂರು ಪಂದ್ಯಗಳಲ್ಲಿ ಗೆದ್ದು ಸರಣಿಯಲ್ಲಿ 3-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ತವರಿನ ಪರಿಸ್ಥಿತಿಯ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಟೀಮ್‌ ಇಂಡಿಯಾ, ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡು ಒತ್ತಡ ರಹಿತ ತಂಡವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ರಾಂಚಿ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಬಳಿಕ, ಸದ್ಯ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿಯೂ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಇದೀಗ ಮಾರ್ಚ್‌ 7ರ ಗುರುವಾರ ಆರಂಭವಾಗುವ ಧರ್ಮಶಾಲಾ ಟೆಸ್ಟ್‌ನಲ್ಲಿ ಗೆದ್ದರೆ, 4-1 ಅಂತರದಿಂದ ಸರಣಿ ವಶಪಡಿಸಿಕೊಳ್ಳುವುದು ಮಾತ್ರವಲ್ಲಿದೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.

ಅತ್ತ ಡಬ್ಲ್ಯೂಟಿಸಿ ಪಾಯಿಂಟ್‌ ಟೇಬಲ್‌ನಲ್ಲಿ ಭಾರಿ ಕುಸಿತ ಕಂಡಿರುವ ಇಂಗ್ಲೆಡ್‌ ತಂಡವು, ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಧರ್ಮಶಾಲಾ ಮೈದಾನವು ಇಂಗ್ಲೆಂಡ್‌ಗೆ ತವರಿನ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಚಳಿ ಹೆಚ್ಚಿರಲಿದ್ದು, ತಣ್ಣನೆಯ ವಾತಾವರಣವು ಇಂಗ್ಲೆಂಡ್‌ಗೆ ಅನುಕೂಲಕರವಾಗಲಿದೆ. ಹೀಗಾಗಿ ಇಲ್ಲಿ ಗೆದ್ದು, ತುಸು ನಿರಾಳವಾಗಿ ತವರಿಗೆ ಮರಳುವುದು ಆಂಗ್ಲರ ಇರಾದೆ.

ಇದನ್ನೂ ಓದಿ | ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ; ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ

ಐದನೇ ಟೆಸ್ಟ್ ಪಂದ್ಯವು ಉಭಯ ತಂಡಗಳ ಇಬ್ಬರು ಆಟಗಾರರಿಗೆ ವಿಶೇಷ. ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್‌ ಪಾಲಿಗೆ ಇದು 100ನೇ ಟೆಸ್ಟ್ ಪಂದ್ಯ ಆಗಿದೆ.

ಭಾರತ vs ಇಂಗ್ಲೆಂಡ್ ಮುಖಾಮುಖಿ ದಾಖಲೆ

ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ ಮೇಲುಗೈ ಸಾಧಿಸಿದೆ. ಈವರೆಗೆ ಟೆಸ್ಟ್‌ನಲ್ಲಿ ಉಭಯ ತಂಡಗಳು ಒಟ್ಟು 135 ಬಾರಿ ಮುಖಾಮುಖಿಯಾಗಿವೆ. ಭಾರತ 34ರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ ತಂಡ 51 ಪಂದ್ಯಗಳಲ್ಲಿ ಗೆದ್ದಿದೆ. ಉಳಿದ 50 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದೆ.

ಧರ್ಮಶಾಲಾ ಪಿಚ್ ವರದಿ

ಇದೇ ಮೈದಾನದಲ್ಲಿ ಏಕದಿನ ವಿಶ್ವಕಪ್‌ ಪಂದ್ಯಗಳು ನಡೆದಿದ್ದವು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್‌ ಸಾಮಾನ್ಯವಾಗಿ ಸೀಮರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಇಲ್ಲಿ ವೇಗಿಗಳು ಸೀಮ್‌ ಚಲನೆಯಿಂದಾಗಿ ಮೇಲುಗೈ ಸಾಧಿಸುತ್ತಾರೆ. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳು ಕೂಡಾ ತಮ್ಮ ಚಾಕಚಕ್ಯತೆ ಪ್ರದರ್ಶಿಸಬಹುದು. ಬ್ಯಾಟರ್‌ಗಳು ಕೂಡಾ ಚಾಣಾಕ್ಷ ಆಟದಿಂದ ರನ್‌ ಮಳೆ ಹರಿಸಬಹುದು.

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್‌ ಹವಾಮಾನ ಮುನ್ಸೂಚನೆ

ಐದನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನದಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಭಾರಿ ಚಳಿಯೊಂದಿಗೆ ಹಿಮಪಾತದ ನಿರೀಕ್ಷೆಯೂ ಇದೆ. ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಪಂದ್ಯದ ಕೊನೆಯ ಮೂರು ದಿನಗಳಲ್ಲಿ ಬಿಸಿಲು ಬರಲಿದೆ. ಆಗ ಶುಭ್ರ ಆಕಾಶದೊಂದಿಗೆ ಪಂದ್ಯ ನಡೆಯುವ ಸಾಧ್ಯತೆ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)